ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರಿ, ಅಪರಾಧಿಗಳನ್ನು ರಾಜಕೀಯದಿಂದ ದೂರವಿಡಿ: ರವಿಕೃಷ್ಣಾ ರೆಡ್ಡಿ

Published 26 ಫೆಬ್ರುವರಿ 2024, 6:56 IST
Last Updated 26 ಫೆಬ್ರುವರಿ 2024, 6:56 IST
ಅಕ್ಷರ ಗಾತ್ರ

ಬೀದರ್‌: ‘ಕರ್ನಾಟಕಕ್ಕಾಗಿ ನಾವು’ ಹೆಸರಿನಲ್ಲಿ ಕರ್ನಾಟಕ ರಾಷ್ಟ್ರ ಪಕ್ಷ ರಾಜ್ಯದಾದ್ಯಂತ ಕೈಗೊಂಡಿರುವ ಬೈಕ್‌ ಜಾಥಾ ಸೋಮವಾರ ಜಿಲ್ಲೆ ತಲುಪಿತು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ಬಂದ ಜಾಥಾವನ್ನು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿ, ಬರಮಾಡಿಕೊಂಡರು. ‘ಬಿಡುಗಡೆ, ಬಿಡುಗಡೆ ಭ್ರಷ್ಟರಿಂದ ಬಿಡುಗಡೆ, ಕೆಆರ್‌ಎಸ್‌ ಪಕ್ಷದ ವೀರ ಸೈನಿಕರೇ, ಏನೇ ಆಗಲಿ ಒಳ್ಳೆಯದು ಮಾಡುತ್ತೀರಿ’ ಎಂದು ಘೋಷಣೆಗಳನ್ನು ಕೂಗಿದರು.

ಬಳಿಕ ಮಾತನಾಡಿದ ರವಿಕೃಷ್ಣಾ ರೆಡ್ಡಿ, ಭ್ರಷ್ಟಾಚಾರಿ, ಅಪರಾಧಿ ಹಿನ್ನೆಲೆಯವರು ಇತ್ತೀಚಿನ ದಿನಗಳಲ್ಲಿ ರಾಜಕೀಯಕ್ಕೆ ಹೆಚ್ಚಾಗಿ ಬರುತ್ತಿದ್ದಾರೆ. ನಾಡಿನ ಪ್ರಜ್ಞಾವಂತ ಜನ ಅವರನ್ನು ದೂರ ಇಡಬೇಕು ಎಂದು ಮನವಿ ಮಾಡಿದರು.

ಭ್ರಷ್ಟರನ್ನು, ಅಪ್ರಾಮಾಣಿಕರನ್ನು, ಸ್ವಜನಪಕ್ಷಪಾತಿಗಳನ್ನು, ಅನೈತಿಕ ನಡವಳಿಕೆ ಉಳ್ಳವರನ್ನು, ಸುಳ್ಳರನ್ನು, ಸಮಾಜಘಾತುಕ ಶಕ್ತಿಗಳನ್ನು, ಕುಟುಂಬ ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ (ಜೆಸಿಬಿ) ಪಕ್ಷಗಳ ಪರಮಸ್ವಾರ್ಥಿ ರಾಜಕಾರಣಿಗಳನ್ನು ಜನ ಒಪ್ಪಿಕೊಳ್ಳಬಾರದು. ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕೆಆರ್‌ಎಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ಜೆಸಿಬಿ ಪಕ್ಷಗಳನ್ನು ತಿರಸ್ಕರಿಸಬೇಕು. ರಾಜ್ಯದ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಫೆ. 19ರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಬೈಕ್‌ ರ್‍ಯಾಲಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಮಡಿಕೇರಿ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮಾರ್ಗವಾಗಿ ಬೀದರ್‌ ಜಿಲ್ಲೆಗೆ ಬಂದಿದ್ದೇವೆ. ಮೂರು ಸಾವಿರ ಕಿ.ಮೀ ಜಾಥಾ ಕೈಗೊಂಡಿದ್ದು, ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಹೇಳಿದರು.

ಜೆಸಿಬಿ ಪಕ್ಷಗಳು ಮತದಾರರಿಗೆ ಹಣ ಹಂಚುತ್ತಿವೆ ಹೊರತು ಅವರಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ಇಂದು ಕೆಆರ್‌ಎಸ್‌ ಪಕ್ಷದ ನೂರಾರು ಸೈನಿಕರು ಹುಟ್ಟಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ 63 ಸಾವಿರ ಜನ ನಮ್ಮ ಪಕ್ಷಕ್ಕೆ ಮತ ಹಾಕಿದ್ದರು. 50 ಸಾವಿರ ಜನ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅನೇಕರು ದೇಣಿಗೆ ಕೊಟ್ಟಿದ್ದಾರೆ. ಜನರ ಸಹಭಾಗಿತ್ವದಿಂದ ಪಕ್ಷ ನಡೆಯುತ್ತಿದೆ. ಇದು ಕನ್ನಡಿಗರ ಪಕ್ಷ, ಆಸ್ತಿ. ರವಿಕೃಷ್ಣಾರೆಡ್ಡಿ ಈಗ ಅಧ್ಯಕ್ಷ. ಮುಂದೆ ಮತ್ತೊಬ್ಬರು ಬರುತ್ತಾರೆ. ಪಕ್ಷ ಇರುತ್ತೆ. ಬರುವ ದಿನಗಳಲ್ಲಿ ಪ್ರಜಾಪ್ರಭುತ್ವ ಪಕ್ಷವಾಗಿ ಬೆಳೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ರಾಜ್ಯ ಕಾರ್ಯದರ್ಶಿಗಳಾದ ರಘು ಜಾಣಗೆರೆ, ವಿಜಯ್ ಕುಮಾರ್ ಯು ಬಿ., ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಚಂದ್ರಶೇಖರ್ ಮಠದ, ತುಕಾರಾಮ ಗೌರೆ, ಬೀದರ್ ಜಿಲ್ಲಾಧ್ಯಕ್ಷ ಹಣಮಂತ ಕಟ್ಟೆ, ಪ್ರಧಾನ ಕಾರ್ಯದರ್ಶಿ ಬಜರಂಗ ಪವಾರ ಹಾಜರಿದ್ದರು.

‘ರಾಮಚಂದ್ರ ವೀರಪ್ಪ, ಹಾಶ್ಮಿ ನೆನಪು’
‘ಬೀದರ್ ಜನ ಹಿಂದಿನಿಂದಲೂ ಉತ್ತಮರನ್ನು ಗೆಲ್ಲಿಸುತ್ತ ಬಂದಿದ್ದಾರೆ. ಹಿಂದೆ ರಾಮಚಂದ್ರ ವೀರಪ್ಪನವರನ್ನು ಸತತವಾಗಿ ಗೆಲ್ಲಿಸಿ ಲೋಕಸಭೆಗೆ ಕಳಿಸಿದ್ದರು. ಸಾಧಾರಣ ವ್ಯಕ್ತಿ ಜುಲ್ಫೀಕರ್‌ ಹಾಶ್ಮಿ ಅವರನ್ನು ವಿಧಾನಸಭೆಗೆ ಕಳಿಸಿದ್ದರು. ಇದು ಬಸವಣ್ಣನವರ ಕರ್ಮಭೂಮಿ. 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಕ್ರಾಂತಿ ಆಗಿದ್ದ ನಾಡು. ಜನ ಕೆಆರ್‌ಎಸ್‌ ಪಕ್ಷದ ಸದಸ್ಯತ್ವ ಪಡೆದು, ದೇಣಿಗೆ ಕೊಟ್ಟು ಬೆಂಬಲಿಸಬೇಕು’ ಎಂದು ರವಿಕೃಷ್ಣಾ ರೆಡ್ಡಿ ಮನವಿ ಮಾಡಿದರು. ಈ ಜಿಲ್ಲೆಯಲ್ಲೂ ಕುಟುಂಬ ರಾಜಕಾರಣ ಬೆಳೆಯುತ್ತಿದೆ. ಖಂಡ್ರೆ ಅಂಡ್‌ ಸನ್ಸ್‌ ಸೇರಿದಂತೆ ಇತರೆ ಕುಟುಂಬದವರು ರಾಜಕಾರಣ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕಲ್ಪಿಸಬಾರದು ಎಂದರು.
‘ರೋಲ್‌ಕಾಲ್‌ ಗಿರಾಕಿಗಳಲ್ಲ’
‘ಕೆಆರ್‌ಎಸ್‌ ಪಕ್ಷದ ಕಾರ್ಯಕರ್ತರು ರೋಲ್‌ಕಾಲ್‌ ಗಿರಾಕಿಗಳಲ್ಲ. ಯಾರ ಮೇಲಾದರೂ ಅನ್ಯಾಯವಾದರೆ ಧ್ವನಿ ಎತ್ತುತ್ತಾರೆ. ಬಡವರನ್ನು ಹಿಂಸಿಸಿದರೆ ಅದರ ವಿರುದ್ಧ ನಿಲ್ಲುತ್ತಾರೆ. ಅಧಿಕಾರಿ ವರ್ಗ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆ ಅದನ್ನು ಯಾವುದೇ ಹಂಗಿಲ್ಲದೆ ಪ್ರಶ್ನಿಸುತ್ತಾರೆ’ ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು. ನಮ್ಮ ಪಕ್ಷದವರು ಕಳ್ಳರು, ಖದೀಮರು, ಗೂಂಡಾಗಳ ಪರ ವಕಾಲತ್ತು ಮಾಡುವುದಿಲ್ಲ. ಒಂದುವೇಳೆ ಪಕ್ಷದ ಕಾರ್ಯಕರ್ತರಿಂದ ಯಾರಿಗಾದರೂ ಅನ್ಯಾಯವಾದರೆ, ಅದನ್ನು ತಿಳಿಸಿದರೆ ಅಂತಹರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT