ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಂಡ್ರೆ ಆರೋಪ ಆಧಾರ ರಹಿತ

ಸಂಸದ ಭಗವಂತ ಖೂಬಾ ಟೀಕೆ
Last Updated 5 ಜನವರಿ 2021, 15:39 IST
ಅಕ್ಷರ ಗಾತ್ರ

ಬೀದರ್: ಬಸವಕಲ್ಯಾಣದಲ್ಲಿನ ನೂತನ ಅನುಭವ ಮಂಟಪ ಶಂಕುಸ್ಥಾಪನೆಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಕುರಿತು ಶಾಸಕ ಈಶ್ವರ ಖಂಡ್ರೆ ಮಾಡಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಸಂಸದ ಭಗವಂತ ಖೂಬಾ ಟೀಕಿಸಿದ್ದಾರೆ.

ಅನುಭವ ಮಂಟಪಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳುವ ಮೂಲಕ ಖಂಡ್ರೆ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಸರ್ಕಾರ ಮಂಟಪಕ್ಕೆ ಈಗಾಗಲೇ ₹100 ಕೋಟಿ ಬಿಡುಗಡೆ ಮಾಡಿದೆ. ಕ್ರಿಯಾ ಯೋಜನೆ ಕೂಡ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಚುನಾವಣೆ ಗೆಲ್ಲಲು ಕೇವಲ ಕ್ರಿಯಾ ಯೋಜನೆ ಸಿದ್ಧಪಡಿಸಿಲ್ಲ. ಮೊದಲು ಕಾಮಗಾರಿ ಆರಂಭಕ್ಕೆ ಅನುದಾನ ಬಿಡುಗಡೆ ಮಾಡಿದೆ. ಬುಧವಾರ ಕಾಮಗಾರಿಗೆ ಚಾಲನೆ ನೀಡಲಿದೆ ಎಂದು ಹೇಳಿದ್ದಾರೆ.

ಖಂಡ್ರೆ ಅವರು ಸಚಿವರಾಗಿದ್ದಾಗ ಅನುಭವ ಮಂಟಪಕ್ಕೆ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆ ಮಾಡಿಸಿದ್ದರು ಎನ್ನುವುದನ್ನು ಸಾರ್ವಜನಿಕವಾಗಿ ಹೇಳಲಿ. 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ, ಜನರ ದಾರಿ ತಪ್ಪಿಸಿದರು. ಇವರ ಕ್ರಿಯಾ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾರೆ ಅಂದಿರಲಿಲ್ಲ ಎಂದು ಆಪಾದಿಸಿದ್ದಾರೆ.

ನಂತರ ಬಂದ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಸರ್ಕಾರ ಕೂಡ ಅನುಭವ ಮಂಟಪಕ್ಕೆ ಅನುದಾನ ನೀಡಲಿಲ್ಲ. ಆಗ ಇವರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಖಂಡ್ರೆ ಅವರು ಬಸವ ಭಕ್ತರಿಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಅವರ ಸುಳ್ಳು ಹಾಗೂ ಆಧಾರ ರಹಿತ ಆರೋಪಗಳನ್ನು ಯಾರೂ ನಂಬುವುದಿಲ್ಲ ಎಂದು ಹೇಳಿದ್ದಾರೆ.

ಬಸವ ಭಕ್ತರಿಗೆ 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯವಾಗಿದೆ. ಸಂಸತ್ತಿನ ಪರಿಕಲ್ಪನೆ ಕೊಟ್ಟಿದ್ದೇ ಬಸವಣ್ಣನವರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಎಂದಾದರೂ ಬಸವಣ್ಣವರ ಬಗ್ಗೆ ಒಂದು ಮಾತನ್ನಾದರೂ ಆಡಿದ್ದಾರಾ, ಅವರಿಗೆ ಮೊದಲು ಬಸವಣ್ಣವರ ವಚನ ಸರಿಯಾಗಿ ಉಚ್ಚರಿಸಲು ಹೇಳಿಕೊಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT