ಕ್ರೀಡಾ ಸಚಿವರ ರಾಜೀನಾಮೆಗೆ ಖೂಬಾ ಆಗ್ರಹ

ಬುಧವಾರ, ಜೂನ್ 19, 2019
25 °C
ಬ್ರಿಮ್ಸ್‌ ಅವ್ಯವಸ್ಥೆಗೆ ರಹೀಂ ಖಾನ್‌ ಅವರೇ ಕಾರಣ

ಕ್ರೀಡಾ ಸಚಿವರ ರಾಜೀನಾಮೆಗೆ ಖೂಬಾ ಆಗ್ರಹ

Published:
Updated:
Prajavani

ಬೀದರ್: ‘ಬ್ರಿಮ್ಸ್‌ ಆಸ್ಪತ್ರೆ  ಕಟ್ಟಡದ ದುಸ್ಥಿತಿ ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್‌ ಅವರೇ ಕಾರಣ. ಅಧಿಕಾರಿಗಳ ಮೇಲೆ ಹಿಡಿತ ಇಟ್ಟುಕೊಳ್ಳಲಾಗದೆ ಮುಖ್ಯಮಂತ್ರಿಯ ಮೊರೆ ಹೋಗಿ ಅಸಹಾಯಕತೆ ಪ್ರದರ್ಶಿಸಿದ್ದಾರೆ. ಬ್ರಿಮ್ಸ್ ಆಸ್ಪತ್ರೆ ಅವ್ಯವಹಾರದ ಹೊಣೆ ಹೊತ್ತು ರಹೀಂ ಖಾನ್‌ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದರು.

‘₹ 150 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬ್ರಿಮ್ಸ್‌ ಆಸ್ಪತ್ರೆ ಕಟ್ಟಡ ಒಂದು ವರ್ಷದ ಅವಧಿಯಲ್ಲೇ ದುರ್ಬಲಗೊಂಡು ಛಾವಣಿ ಕುಸಿದು ಬಿದ್ದಿದೆ. ಆಸ್ಪತ್ರೆಯಲ್ಲಿ ಅವ್ಯವಸ್ಥೆ ಮುಂದುವರಿದರೂ ಸಚಿವರು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ’ ಎಂದು ನಗರದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪ ಮಾಡಿದರು.

‘ಛಾವಣಿ ಕಳಚಿ ಬಿದ್ದ ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟು ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಕ್ರೀಡಾ ಸಚಿವ ರಹೀಂ ಖಾನ್‌ ಹಾಗೂ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಅರಿತುಕೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ವರ್ಷದ ಹಿಂದೆಯಷ್ಟೇ ನಿರ್ಮಿಸಿದ ಆಸ್ಪತ್ರೆಯನ್ನೇ ಸ್ಥಳಾಂತರ ಮಾಡಬೇಕು ಎಂದು ರಹೀಂ ಖಾನ್‌ ಹುಚ್ಚರಂತೆ ಹೇಳಿಕೆ ಕೊಟ್ಟಿದ್ದಾರೆ. ಆಸ್ಪತ್ರೆಗೆ ಜಾಗ ಹಾಗೂ ಖರ್ಚು ಮಾಡಿದ ₹ 150 ಕೋಟಿ ಹಣ ಯಾರಿಂದ ವಸೂಲಿ ಮಾಡಬೇಕು?. ಬ್ರಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಅವ್ಯವಸ್ಥೆ ಯ ಹೊಣೆಯನ್ನು ಸ್ಥಳೀಯ ಶಾಸಕರೇ ಹೊತ್ತುಕೊಳ್ಳಬೇಕು’ ಎಂದು ಹೇಳಿದರು.

‘ಬ್ರಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯಿಂದಾಗಿ ಎಂಸಿಐ ಬೀದರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ 50 ಸೀಟುಗಳನ್ನು ಕಡಿತಗೊಳಿಸುವ ಮುನ್ಸೂಚನೆ ನೀಡಿದೆ. ಆದರೆ ಸಚಿವರಿಗೆ ಅದರ ಪರಿವೇ ಇಲ್ಲವಾಗಿದೆ. ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ’ ಎಂದು ನೇರ ಆರೋಪ ಮಾಡಿದರು.

‘ಜೂನ್‌ 6 ರಂದು ವೈದ್ಯರೊಬ್ಬರು ರಕ್ತ ಬದಲಾವಣೆ ಮಾಡಿ ರೋಗಿಯ ಆರೋಗ್ಯ ಹದಗೆಡುವಂತೆ ಮಾಡಿದರು. ಕಳಪೆ ಕಾಮಗಾರಿಯಿಂದ ಕಟ್ಟಡದ ಛಾವಣಿ ಕುಸಿಯಿತು. ನಾನು ಸ್ಥಳದಲ್ಲೇ ನಿಂತು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಮ ಅವರನ್ನು ಸಂಪರ್ಕಿಸಿ ಸಮಸ್ಯೆಯನ್ನು ವಿವರಿಸಿದೆ. ಜೂನ್13 ರಂದು ಬೀದರ್‌ಗೆ ಭೇಟಿ ಕೊಡುವ ಭರವಸೆ ನೀಡಿದ್ದರು. ಅವರು ಸಹ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಒಂದು ವಾರದಲ್ಲಿ ಬ್ರಿಮ್ಸ್‌ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ. ಕೆಡಿಪಿ ಸಭೆಯಲ್ಲಿ ಪ್ರತಿ ತಾಲ್ಲೂಕಿಗೆ 10 ಟ್ಯಾಂಕರ್‌ ಹೆಚ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರು. ಆದರೆ ಈವರೆಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ’ ಎಂದು ಆರೋಪಿಸಿದರು.

‘15 ದಿನಗಳ ಒಳಗೆ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆಯಲು ದಿನಾಂಕ ನಿಗದಿ ಮಾಡಬೇಕು. ರೈತರ ಕಬ್ಬಿನ ಬಾಕಿ ಪಾವತಿಸಬೇಕು’ ಎಂದು ಒತ್ತಾಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !