ಮಂಗಳವಾರ, ಜನವರಿ 18, 2022
27 °C
ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,114 ಕಾಯ್ದಿರಿಸಿದ ಬೆಡ್‍ಗಳು

ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೋವಿಡ್‌ ಆರಂಭದ ದಿನಗಳಲ್ಲಿ ಜಿಲ್ಲೆಯ ಜನರ ನಿದ್ದೆ ಗೆಡಿಸಿದ್ದರೂ ಜಿಲ್ಲಾಡಳಿತದ ಬಿಗಿ ಕ್ರಮಗಳಿಂದ ಬಹುಮಟ್ಟಿಗೆ ನಿಯಂತ್ರಣದಲ್ಲಿದೆ.

ಮೊದಲನೇ ಅಲೆ ವೃದ್ಧರನ್ನು ಹಿಂಡಿ ಹಿಪ್ಪೆ ಮಾಡಿದ್ದರೆ, ಎರಡನೇ ಅಲೆ ಯುವಕರನ್ನು ಹೈರಾಣು ಮಾಡಿತ್ತು. ಮೂರನೇ ಅಲೆಯೂ ಅಪಾಯಕಾರಿ ಎನ್ನುವುದನ್ನು ಮನಗಂಡು ಅದನ್ನು ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮೊದಲ ಅಲೆ ಸಂದರ್ಭದಲ್ಲಿ ಸೌಲಭ್ಯಗಳ ಕೊರತೆ ಇತ್ತು. ಆದರೆ, ಇದೀಗ ಮೂರನೇ ಅಲೆಗೆ ಎಲ್ಲ ರೀತಿಯಿಂದಲೂ ಸಜ್ಜಾಗಿದೆ.

ಬೀದರ್‌ ನಗರದಲ್ಲಿ ಬ್ರಿಮ್ಸ್ ಆಸ್ಪತ್ರೆ, ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ವಿವಿಧ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,114 ಬೆಡ್‍ಗಳನ್ನು ಕಾಯ್ದಿರಿಸಿದೆ. ಆಸ್ಪತ್ರೆಗಳಲ್ಲಿ 364 ಎಚ್‍ಡಿಯು ಬೆಡ್‍ಗಳು ಹಾಗೂ 181 ಐಸಿಯು ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 50 ಹಾಗೂ ಖಾಸಗಿ 79 ಸೇರಿ ಒಟ್ಟು 229 ವೆಂಟಿಲೇಟರ್‌ಗಳು ಇವೆ.

ಬಸವಕಲ್ಯಾಣ, ಹುಮನಾಬಾದ್, ಭಾಲ್ಕಿ, ಔರಾದ್ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 50 ಹಾಗೂ ಬೀದರ್‌ನ ನೂರು ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 80 ಆಮ್ಲಜನಕ ಬೆಡ್ ಸೌಲಭ್ಯ ಇದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ 27 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಹೆವಾರಿನ್ ಇಂಜೆಕ್ಷನ್ 5,354, ರೆಮ್‍ಡಿಸಿವಿರ್ ಇಂಜೆಕ್ಷನ್ 2,298, ಪೆವಿಪಿಕಾವೇರ್ ಇಂಜೆಕ್ಷನ್ 1,090, ಐವರ್ ಮೆಕ್ಟೀವ್ 28,000, ಎಂಪೋರೆರಿಸಿನ್ ಇಂಜೆಕ್ಷನ್ 824, ಪಿವೆಜಿ ಇಂಜೆಕ್ಷನ್ 200 ಮತ್ತು ಪಿಪಿ ಕಿಟ್ 9,900 ಲಭ್ಯ ಇವೆ. ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ತಿಳಿಸಿದ್ದಾರೆ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಆಮ್ಲಜನಕ ಕೊರತೆ ಕಂಡು ಬಂದಿತ್ತು. ಪೊಲೀಸ್‌ ಬೆಂಗಾವಲಿನಲ್ಲಿ ಬಳ್ಳಾರಿಯಿಂದ ಬೀದರ್‌ಗೆ ಆಮ್ಲಜನಕ ಟ್ಯಾಂಕ್‌ ತರುವ ಪರಿಸ್ಥಿತಿ ಇತ್ತು. ಆದರೆ, ಇದೀಗ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲೇ ಆಮ್ಲಜನಕ ಘಟಕಗಳನ್ನು ನಿರ್ಮಿಸಲಾಗಿದೆ.

ಜಿಲ್ಲೆಯ ನಾಲ್ಕೂ ತಾಲ್ಲೂಕು ಆಸ್ಪತ್ರೆಗಳು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕಗಳು ಇವೆ. ಔರಾದ್ ತಾಲ್ಲೂಕಿನ ಸಂತಪುರದಲ್ಲಿ ಕೂಡ ಆಮ್ಲಜನಕ ಘಟಕ ಸ್ಥಾಪನೆ ಮಾಡಲಾಗಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ 650 ಎಲ್‍ಪಿಎಂ, 1,000 ಎಲ್‍ಪಿಎಂನ ಆಮ್ಲಜನಕ ಘಟಕಗಳು ಇವೆ. 14 ಕೆಎಲ್ ಸಾಮರ್ಥ್ಯದ 1 ಮತ್ತು 4 ಕೆಎಲ್ ಸಾಮರ್ಥ್ಯದ 1 ಎಲ್‍ಎಂಒ ಟ್ಯಾಂಕ್ ಇದೆ.

ಶಂಕಿತರ ಕೋವಿಡ್‌ ಪರೀಕ್ಷೆ

ಜ್ವರ, ತಲೆನೋವು, ಗಂಟಲು ಕೆರೆತ, ಉಸಿರಾಟದ ಸಮಸ್ಯೆ, ಆಯಾಸ ಮತ್ತು ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಂಡು ಆಸ್ಪತ್ರೆಗೆ ಬರುವ ರೋಗಿಗಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

ರೋಗ ಲಕ್ಷಣಗಳು ಇರುವವರು ತಕ್ಷಣ ಸ್ವಯಂ ಐಸೋಲೇಟ್‌ಗೆ ಒಳಗಾಗಬೇಕು ಮತ್ತು ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಕಾಲದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಸೋಂಕು ಹರಡದಂತೆ ಎಚ್ಚರಿಕೆ ವಹಿಸುವಂತೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ತಿಳಿಸಿದ್ದಾರೆ.

‘ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಗಂಟಲು ಹಾಗೂ ಮೂಗಿನ ಸ್ರಾವದ ಮಾದರಿ ಪಡೆದು ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ನಿತ್ಯ ಕನಿಷ್ಠ ಒಂದು ಸಾವಿರ ಜನರ ಆರ್‌ಟಿಪಿಸಿಆರ್‌ ಹಾಗೂ 500 ಜನರ ರ್‍ಯಾಟ್‌ ಪರೀಕ್ಷೆ ಮಾಡಲಾಗುತ್ತಿದೆ. ರ್‍ಯಾಟ್‌ನಲ್ಲಿ ಪಾಸಿಟಿವಿಟಿ ದರ ಶೇಕಡ 0.47 ಹಾಗೂ ಆರ್‌ಟಿಪಿಸಿಆರ್‌ನಲ್ಲಿ ಪಾಸಿಟಿವಿಟಿ ದರ ಶೇಕಡ 1.34 ಸೇರಿ ಒಟ್ಟು ಶೇಕಡ 1.08 ಇದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾ ರೆಡ್ಡಿ ಹೇಳಿದ್ದಾರೆ.

ಅಗತ್ಯ ವೈದ್ಯಕೀಯ ಸೌಲಭ್ಯ

ಔರಾದ್: ಕೋವಿಡ್ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ತಿಳಿಸಿದ್ದಾರೆ.

ಔರಾದ್‌ನಲ್ಲಿ 30 ಹಾಗೂ ಸಂತಪುರನಲ್ಲಿ 24 ಹಾಸಿಗೆ ಕೋವಿಡ್ ಪೀಡಿತರಿಗಾಗಿಯೇ ಕಾಯ್ದಿರಿಸಲಾಗಿದೆ. ಇಲ್ಲಿ ಆಮ್ಲಜನಕ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯ ಇದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಪೂರಕ ಮಾಹಿತಿ:

ಮಾಣಿಕ ಭೂರೆ, ಗುಂಡು ಅತಿವಾಳ, ಮನ್ಮಥ ಸ್ವಾಮಿ, ಬಸವಕುಮಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.