ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿ ಸಾಧನೆ: ಈಶ್ವರ ಖಂಡ್ರೆ

ಕೆಪಿಸಿಸಿ ಕಾರ್ಯಾಧ್ಯಕ್ಷ ವಾಗ್ದಾಳಿ
Last Updated 22 ಜನವರಿ 2022, 15:27 IST
ಅಕ್ಷರ ಗಾತ್ರ

ಬೀದರ್‌: ‘ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಮಿತಿಯಲ್ಲಿ ಯೋಜನೆಗಳಿಗೆ ಅನುಮೋದನೆ ದೊರೆತರೆ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಇದೆ. ಆದರೆ, ಬಿಜೆಪಿ ಸರ್ಕಾರ ಮಂಡಳಿಗೆ ನಾಮನಿರ್ದೇಶನ ಮಾಡದೇ ಮೊದಲು ಹಣ ಬಳಸಿ ಎಂದು ಸೂಚಿಸುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ’ ಎಂದು ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹1,500 ಕೋಟಿ ಅನುದಾನ ಮೀಸಲಿಟ್ಟರೂ ಕೇವಲ ₹240 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು 2,347 ಕಾಮಗಾರಿಗಳಲ್ಲಿ 469 ಕಾಮಗಾರಿಗಳು ಪ್ರಗತಿಯಲ್ಲಿವೆ. ಕೇವಲ 39 ಕಾಮಗಾರಿಗಳು ಪೂರ್ಣಗೊಂಡಿವೆ. 1,357 ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ’ ಎಂದು ತಿಳಿಸಿದರು.

‘ಹೊಸ ಸರ್ಕಾರ ಬಂದು 30 ತಿಂಗಳು ಕಳೆದರೂ ಅಭಿವೃದ್ಧಿ ಮಂಡಳಿ ಸಮಿತಿ ರಚನೆಯಾಗಿಲ್ಲ. ಮಂಡಳಿಗೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಒಬ್ಬ ಸಚಿವರನ್ನು ಉಸ್ತುವಾರಿಯಾಗಿ ನೇಮಿಸಬೇಕು. 8 ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ತಲಾ ಒಬ್ಬರು ಸಂಸದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ನಗರಸಭೆ ಅಧ್ಯಕ್ಷ, ಐವರು ತಜ್ಞರನ್ನು ನೇಮಕ ಮಾಡಬೇಕು. ಆದರೆ, ಸಮಿತಿಯನ್ನೇ ರಚಿಸಿಲ್ಲ’ ಎಂದರು.

‘ಮುಖ್ಯಮಂತ್ರಿ ಕಲಬುರಗಿಗೆ ಬಂದಿದ್ದ ಸಂದರ್ಭದಲ್ಲಿ ಮೊದಲು ಕೊಟ್ಟ ಅನುದಾನ ಬಳಸಿದ ನಂತರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿರುವುದು ಹಾಸ್ಯಾಸ್ಪದ. ಮಂಡಳಿ ಸಮಿತಿ ರಚನೆಯಾಗದಿದ್ದರೆ ಕ್ರಿಯಾ ಯೋಜನೆ ರೂಪಿಸಲು ಸಾಧ್ಯವಿಲ್ಲ. ಅನುಮೋದನೆ ಹಾಗೂ ಅನುದಾನ ಬಿಡುಗಡೆಯೂ ಸಾಧ್ಯವಿಲ್ಲ’ ಎಂದು ಹೇಳಿದರು.

‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ 371(ಜೆ) ಜಾರಿಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ 20 ಸಾವಿರ ಹುದ್ದೆಗಳು ಖಾಲಿ ಇವೆ. ಪಿಎಸ್‌ಐ ನೇಮಕಾತಿಯಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ. ಈ ಕುರಿತು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.

‘ರಾಜ್ಯ ವಲಯದಲ್ಲಿ ನೇಮಕಾತಿ ಮುಗಿದ ಮೇಲೆ ಕಲ್ಯಾಣ ಕರ್ನಾಟಕದ ವಲಯ ನೇಮಕಾತಿ ಮಾಡಬೇಕು. ಮೀಸಲಾತಿ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ಈಗ ಆಗಿರುವ ಲೋಪವನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳೆ ವಿಮೆಯಿಂದ ವಿಮಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗಿದೆಯೇ ಹೊರತು ರೈತರಿಗೆ ಆಗಿಲ್ಲ. ಕಳೆದ ವರ್ಷ ವಿಮಾ ಕಂಪನಿ ₹ 60 ಕೋಟಿ ಲಾಭ ಪಡೆದುಕೊಂಡಿದೆ. ಕಳೆದ ವರ್ಷ ಕಂಪನಿಯ ವೆಬ್‌ಲಿಂಕ್‌ ಸರಿ ಇರಲಿಲ್ಲ. ಸಹಾಯವಾಣಿಯೂ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಹೀಗಾಗಿ ರೈತರು ಹೆಚ್ಚು ತೊಂದರೆ ಅನುಭವಿಸಬೇಕಾಯಿತು. ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಸಮಿತಿ ರಚಿಸಿ ಪರಿಶೀಲನೆ ನಡೆಸಬೇಕು’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT