ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಕಾಯಕಲ್ಪ ನಿರೀಕ್ಷೆಯಲ್ಲಿ ‘ತ್ರಿಪುರಾಂತ ಕೆರೆ’

ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಜಲ ಮೂಲಗಳಲ್ಲೊಂದು
Last Updated 26 ಮೇ 2020, 19:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ತ್ರಿಪುರಾಂತ ಕೆರೆ ಐತಿಹಾಸಿಕ ಮಹತ್ವದ್ದು ಹಾಗೂ ಈ ಭಾಗದಲ್ಲಿಯೇ ದೊಡ್ಡದಾಗಿರುವ ಕೆರೆಯಾಗಿದೆ. ಈ ವರ್ಷ ನೀರಿಲ್ಲದೆ ಸಂಪೂರ್ಣವಾಗಿ ಒಣಗಿದ್ದು ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ತಾಲ್ಲೂಕಿನ ಮೋರಖಂಡಿ (ಅಂದಿನ ಮಯೂರಖಂಡಿ) ರಾಷ್ಟ್ರಕೂಟ ರಾಜರ ರಾಜಧಾನಿಯಾಗಿತ್ತು. ಅವರು ಈ ಭಾಗದಲ್ಲಿ ಅನೇಕ ಕೆರೆಗಳನ್ನು ಕಟ್ಟಿಸಿದ್ದರು ಎಂಬುದು ದಾಖಲೆಗಳಿಂದ ಗೊತ್ತಾಗುತ್ತದೆ. ಮೋರಖಂಡಿಯ ಸುತ್ತಲಿನ ಐದು ಕೆರೆಗಳು ಹಾಗೂ ಸಮೀಪದಲ್ಲಿಯೇ ಇರುವ ಕಲ್ಯಾಣ, ನಾರಾಯಣಪುರ, ಶಿವಪುರ ಮುಂತಾದೆಡೆಯ ದೊಡ್ಡ ದೊಡ್ಡ ಕೆರೆಗಳು ಅವರ ಅವಧಿಯಲ್ಲಿಯೇ ನಿರ್ಮಾಣವಾದಂಥವು ಎಂಬುದು ಇತಿಹಾಸ ತಜ್ಞರ ಅನಿಸಿಕೆಯಾಗಿದೆ.

ತ್ರಿಪುರಾಂತ ಕೆರೆ ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಲ್ಪಟ್ಟು ನಂತರದಲ್ಲಿ ಕಾಲಕಾಲಕ್ಕೆ ಆಳರಸರಿಂದ ಅಭಿವೃದ್ಧಿಗೊಂಡಿದೆ. 300 ಹೆಕ್ಟೇರ್‌ನಷ್ಟು ವಿಶಾಲವಾದ ಕೆರೆಯಲ್ಲಿ ಈಗ ಹೂಳು ತುಂಬಿಕೊಂಡಿದ್ದು, ಎಲ್ಲೆಂದರಲ್ಲಿ ಬರೀ ಮಣ್ಣು ಹಾಗೂ ಮುಳ್ಳುಕಂಟೆಗಳು ಕಾಣುತ್ತಿವೆ. ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆ ಆಗಿದ್ದರಿಂದ ಹಾಗೂ ಹಿನ್ನೀರಿನ ಪ್ರದೇಶದ ಕೊರತೆಯ ಕಾರಣ ಬೇಸಿಗೆ ಬಂತೆಂದರೆ ನೀರಿಲ್ಲದೆ ಬರಿದಾಗುತ್ತಿದೆ.

ಆದರೆ, ಕೆರೆಯು ಪುಷ್ಕರಣಿಯಂತೆ ಸುತ್ತಲಿನಲ್ಲಿ ಮೆಟ್ಟಿಲುಗಳು ಹಾಗೂ ಒಳಗೆ ಕಲ್ಲಿನ ಕಂಬಗಳ ಚಿಕ್ಕ ಚಿಕ್ಕ ಮಂಟಪಗಳನ್ನು ಹೊಂದಿತ್ತು ಎಂಬುದು ಈಚೆಗೆ ಗೊತ್ತಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕೆಲ ವರ್ಷಗಳ ಹಿಂದೆ ಇಲ್ಲಿನ ಕೆಲ ಭಾಗದಲ್ಲಿನ ಹೂಳು ತೆಗೆಯುತ್ತಿದ್ದಾಗ ಇಂಥ ಶಿಲಾ ಮಂಟಪ ಹಾಗೂ ಕೆತ್ತನೆಯ ಕಲ್ಲುಗಳು ದೊರೆತಿವೆ. ಶಿಲಾ ಮಂಟಪ ನಂತರದಲ್ಲಿ ಮುಚ್ಚಲ್ಪಟ್ಟರೆ ಕೆತ್ತನೆಯ ಕಂಬಗಳು ಕೆರೆಯ ಕೋಡಿ ಭಾಗದಲ್ಲಿ ಈಗಲೂ ಬಿದ್ದಿರುವುದನ್ನು ಕಾಣಬಹುದು. ಇದೆಲ್ಲವನ್ನು ನೋಡಿದರೆ, ಕೆರೆಯಲ್ಲಿ ಯಾವಾಗಲೂ ಶುದ್ಧ ನೀರು ಸಂಗ್ರಹವಾಗಿರುತ್ತಿತ್ತು. ಕಲ್ಲಿನ ಮಂಟಪ, ಮೂರ್ತಿಗಳಿಂದ ಕೆರೆ ಸುಂದರವಾಗಿ ರೂಪಿಸಲಾಗಿತ್ತು. ತಾವರೆ ಮುಂತಾದ ಹೂವುಗಳಿಂದಲೂ ಕಂಗೊಳಿಸುತ್ತಿತ್ತು ಎಂಬುದನ್ನು ಭಾವಿಸಬಹುದು.

ಮುಖ್ಯವೆಂದರೆ, ಎರಡು ದಶಕಗಳ ಹಿಂದೆ ಕೆರೆ ಯಾವಾಗಲೂ ತುಂಬಿರುತ್ತಿತ್ತು. ಹಾಗೂ ಇಲ್ಲಿನ ನೀರು ಕಾಲುವೆಗಳ ಮೂಲಕ ನೂರಾರು ಎಕರೆ ಜಮೀನಿಗೆ ಪೊರೈಸಲಾಗುತ್ತಿತ್ತು. ಬಸವಕಲ್ಯಾಣ ಪಟ್ಟಣದಲ್ಲಿನ ಬಾವಿಗಳಿಗೂ ಇದು ಜಲಮೂಲವಾಗಿತ್ತು. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಯಾವ ಕಾಲದಲ್ಲೂ ಕುಡಿಯುವ ನೀರಿನ ಕೊರತೆ ಕಾಡುತ್ತಿರಲಿಲ್ಲ. ಆದರೆ, ಈಚೆಗೆ ಮಳೆ ಪ್ರಮಾಣ ಅತಿ ಕಡಿಮೆ ಆಗಿದ್ದರಿಂದ ಹೆಚ್ಚಿನ ನೀರು ಸಂಗ್ರಹ ಆಗುತ್ತಿಲ್ಲ. ನೀರಿನ ಪೊರೈಕೆ ಇಲ್ಲದೆ ಕಾಲುವೆಗಳು ಕೂಡ ಮುಚ್ಚಲ್ಪಟ್ಟಿವೆ.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕೆರೆ ದಂಡೆಯಲ್ಲಿ ಉದ್ಯಾನ ನಿರ್ಮಿಸಲಾಗಿದೆ. ದಂಡೆಗುಂಟ ಕಾಲುದಾರಿ ನಿರ್ಮಿಸಿ ಗಿಡಮರಗಳನ್ನು ಬೆಳೆಸಲಾಗಿದೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆಯ ವಾಕಿಂಗ್‌ಗೆ ಇದು ಹೇಳಿ ಮಾಡಿಸಿದ ಜಾಗದಂತಿದೆ. ಈಚೆಗೆ ಶಾಸಕ ಬಿ.ನಾರಾಯಣರಾವ್ ಅವರು ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಒಳಗೆ ಗುರು ಬಸವಣ್ಣನವರ ಹಾಗೂ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಸ್ಥಾಪನೆಗೆ ಯೋಜನೆ ಹಾಕಿಕೊಂಡಿದ್ದಾರಾದರೂ ಅದು ಇನ್ನೂ ಜಾರಿಯಾಗಿಲ್ಲ. ಏನೇ ಮಾಡಿದರೂ ಕೆರೆಯಲ್ಲಿ ನೀರಿದ್ದರೆ ಮಾತ್ರ ಚಂದ ಕಾಣುತ್ತದೆ. ಆದ್ದರಿಂದ ಸಂಬಂಧಿತರು ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿ ಇದಕ್ಕೆ ಗತವೈಭವ ಪ್ರಾಪ್ತವಾಗುವಂತೆ ಮಾಡಬೇಕು ಎಂಬುದು ಜನರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT