ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಉಪಚುನಾವಣೆ| ಮುಖಂಡರ ಉಪಾಯ, ಬಿಜೆಪಿಗೆ ತಪ್ಪಿದ ಅಪಾಯ

ಮಾಲಾ ಬೆನ್ನಿಗೆ ನಾರಾಯಣರಾವ್ ಅಭಿಮಾನಿಗಳು
Last Updated 3 ಏಪ್ರಿಲ್ 2021, 15:53 IST
ಅಕ್ಷರ ಗಾತ್ರ

ಬೀದರ್: ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಇನ್ನೊಬ್ಬ ಮಾಜಿ ಶಾಸಕ ಮಾರುತಿರಾವ್ ಮುಳೆ ಎನ್‌ಸಿಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿನವೇ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಬಗ್ಗೆ ಆತಂಕಗೊಂಡಿದ್ದರು. ಬಿಜೆಪಿ ವರಿಷ್ಠರು ಪ್ರವೇಶಿಸಿ, ಪಕ್ಷಕ್ಕೆ ಕಾದಿದ್ದ ಅಪಾಯ ತಪ್ಪಿಸಿದ್ದಾರೆ.

ಮಲ್ಲಿಕಾರ್ಜುನ ಖೂಬಾ ಹಾಗೂ ಮಾರುತಿರಾವ್ ಮುಳೆ ಅವರು ತಮ್ಮದೇ ಆದ ಮತಬ್ಯಾಂಕ್‌ ಹೊಂದಿದ್ದಾರೆ. ಒಬ್ಬ ಅಭ್ಯರ್ಥಿಯ ಸೋಲು–ಗೆಲುವಿಗೆ ಅನುಸರಿಸಬೇಕಾದ ತಂತ್ರಗಳು ಅವರಿಗೆ ಗೊತ್ತಿವೆ.

‘ಅನುಭವಿಗಳ ಎದುರು ಗೆಲುವು ಕಷ್ಟವಾಗಲಿದೆ’ ಎಂದು ಅರಿತ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅನೇಕ ಬಾರಿ ಕೈ ಮುಗಿದು ಬೇಡಿಕೊಂಡರೂ ಮಲ್ಲಿಕಾರ್ಜುನ ಖೂಬಾ ಅವರು ಸುತಾರಾಂ ಒಪ್ಪಲಿಲ್ಲ.

ಸಕಲ ಮರಾಠಾ ಸಮಾಜದ ಸಭೆಗೆ ಕರೆಯದೇ ಹೋಗಿದ್ದಕ್ಕೆ ಮುಖಂಡರ ಆಕ್ರೋಶಕ್ಕೂ ಒಳಗಾಗಬೇಕಾಯಿತು. ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು. ಅಪಾಯದ ಮುನ್ಸೂಚನೆ ದೊರೆತ ತಕ್ಷಣ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಸವಕಲ್ಯಾಣಕ್ಕೆ ಬಂದು ಮರಾಠಾ ಹಾಗೂ ಹಡಪದ ಸಮಾಜದ ಆಕ್ರೋಶ ತಣಿಸುವಲ್ಲಿ ಮೊದಲ ಹಂತದಲ್ಲಿ ಯಶ ಕಂಡಿದ್ದಾರೆ.

‘ಬೇರೆ ಬೇರೆ ಪಕ್ಷಗಳಲ್ಲೂ ಮರಾಠರು ಇದ್ದಾರೆ. ಮರಾಠಾ ಸಮುದಾಯದ ಎಲ್ಲರೂ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಅರ್ಥೈಸಿಕೊಳ್ಳಬಾರದು. ಬಹುಸಂಖ್ಯೆಯ ಮರಾಠರು ಬಿಜೆಪಿ ಬೆನ್ನಿಗೆ ನಿಲ್ಲಲಿದ್ದಾರೆ’ ಎಂದು ಮಾಜಿ ಶಾಸಕ ಮಾರುತಿರಾವ್ ಮುಳೆ ಹೇಳುತ್ತಾರೆ.

‘ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ಐವರು ಸದಸ್ಯರು ಮರಾಠರೇ ಇದ್ದಾರೆ. ಕಾಂಗ್ರೆಸ್‌ನಲ್ಲೂ ಮರಾಠಾ ಸಮುದಾಯವರು ಇದ್ದಾರೆ. ಹಿಂದುಳಿದ ವರ್ಗದವರು ಕಾಂಗ್ರೆಸ್‌ ಪರ ಇದ್ದಾರೆ. ಮಾರುತಿರಾವ್ ಮುಳೆ ಅವರು ಬಿಜೆಪಿಗೆ ಬೆಂಬಲಿಸಿದರೂ ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ಪರಿಣಾಮ ಬೀರದು. ಬಿ.ನಾರಾಯಣರಾವ್ ಅವರ ಮೇಲಿನ ಅಭಿಮಾನದಿಂದ ಮತದಾರರು ಮಾಲಾ ಪರ ಮತದಾನ ಮಾಡುವರು’ ಎಂದು ಬಸವಕಲ್ಯಾಣ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ನೀಲಕಂಠ ರಾಠೋಡ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಶನಿವಾರ ದಿನವಿಡೀ ಕಾಂಗ್ರೆಸ್‌ ಮುಖಂಡರು ಮಲ್ಲಿಕಾರ್ಜುನ ಖೂಬಾ ಹಾಗೂ ಮಾರುತಿರಾವ್‌ ಮುಳೆ ಅವರ ರಾಜಕೀಯ ನಡೆಯ ಮೇಲೆಯೇ ನಿಗಾ ಇಟ್ಟಿದ್ದರು. ಮುಳೆ ಅವರು ನಾಮಪತ್ರ ಹಿಂಪಡೆದ ಬಳಿಕ ಕಾಂಗ್ರೆಸ್‌ನಲ್ಲಿ ಆತಂಕ ಶುರುವಾಗಿದೆ.

‘ಮರಾಠಾ ಹಾಗೂ ಲಿಂಗಾಯತ ಮತಗಳು ವಿಭಜನೆ ಆದಷ್ಟು ಕಾಂಗ್ರೆಸ್‌ ಅಭ್ಯರ್ಥಿಗೆ ಲಾಭ ಆಗಲಿದೆ ಎಂಬ ಲೆಕ್ಕಾಚಾರದಲ್ಲಿದ್ದ ಮುಖಂಡರು ಮತ ಬೇಟೆಗಾಗಿ ಹೆಚ್ಚಿನ ಪರಿಶ್ರಮ ಪಡಬೇಕಿದೆ’ ಎಂದು ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ.

ಶಿವಸೇನೆ ಹಾಗೂ ಎಐಎಂಐಎಂ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಓಟಕ್ಕೆ ಅಡ್ಡಗಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT