ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳ ಕಳ್ಳ ಸಾಗಾಣಿಕೆ ಸಮಾಜಕ್ಕೆ ಮಾರಕ

ಕಾನೂನು ಅರಿವು ನೆರವು ಕಾರ್ಯಕ್ರಮ: ಸಿದ್ರಾಮ ಟಿ.ಪಿ. ಹೇಳಿಕೆ
Last Updated 12 ಸೆಪ್ಟೆಂಬರ್ 2019, 14:23 IST
ಅಕ್ಷರ ಗಾತ್ರ

ಬೀದರ್: ‘ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ ಸಮಾಜಕ್ಕೆ ಮಾರಕವಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ. ತಿಳಿಸಿದರು.

ನಗರದ ವಿದ್ಯಾನಗರ ಕಾಲೊನಿಯ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಬಾಲಕಿಯರ ದಿನಾಚರಣೆ ಹಾಗೂ ಮಾನವ ಕಳ್ಳಸಾಗಾಣಿಕೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ಶೋಷಣೆಯ ಸಂತ್ರಸ್ತರ ಎನ್‍ಎಎಲ್‍ಎಸ್‍ಎ ಯೋಜನೆ 2015 ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳೇ ಮಾನವ ಕಳ್ಳಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿರುವವರ ಮುಖ್ಯ ಗುರಿಯಾಗಿದ್ದಾರೆ’ ಎಂದು ಹೇಳಿದರು.

‘ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳೂ ಈ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ತಿಳಿಸಿದರು. ‘ಅತ್ಯಾಚಾರ ಹಾಗೂ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಸಂತ್ರಸ್ತರು ಕಾನೂನಾತ್ಮಕವಾಗಿ ಪರಿಹಾರ ಪಡೆದುಕೊಳ್ಳಲು ಅವಕಾಶ ಇದೆ’ ಎಂದು ಹೇಳಿದರು.

‘ಎಚ್.ಐ.ವಿ. ರೋಗಿಗಳ ಮಕ್ಕಳಿಗೆ ಶಾಲೆಗಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ’ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ವಕೀಲೆ ಮಂಗಲಾ ದಾಡಗೆ, ‘ಮಕ್ಕಳಿಗೆ ಪಾಲಕರು ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ಕೊಡಬೇಕು. ಹದಿಹರೆಯದವರು ಒಳ್ಳೆಯ ಹೆಜ್ಜೆಗಳನ್ನೇ ಇಡಬೇಕು. ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು’ ಎಂದರು.

ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ, ‘ಮಕ್ಕಳಿಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸುವ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ’ ಎಂದರು.

‘ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುವುದಕ್ಕಾಗಿ ಆರಂಭಿಸಿರುವ ಬಸವ ತತ್ವ ಶಿಕ್ಷಣ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದಿದೆ. ಸಾವಿರಾರು ಹೆಣ್ಣು ಮಕ್ಕಳು ಸಂಸ್ಥೆಯಡಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ’ ಎಂದರು.

‘ಸಂಸ್ಥೆಯಲ್ಲಿ ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ. ಬಡವರ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಇದೇ ವೇಳೆ ಕೇಕ್ ಕತ್ತರಿಸಿ ವೈಜಿನಾಥ ಕಮಠಾಣೆ ಅವರ 77ನೇ ಜನ್ಮದಿನವನ್ನು ಆಚರಿಸಲಾಯಿತು.
ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದಿಲೀಪ ಕಮಠಾಣೆ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ ವಿ.ಎಂ., ಜಂಟಿ ಕಾರ್ಯದರ್ಶಿ ಅಂಬಾದಾಸ ವಾಘರಾಜ, ವೈಶಾಲಿ ಕಮಠಾಣೆ, ವಿ.ಕೆ. ಇಂಟರ್‌ನ್ಯಾಷನಲ್ ಆಡಳಿತಾಧಿಕಾರಿ ಶಿವಲೀಲಾ ಟೊಣ್ಣೆ, ಜಗದೀಶ ಹಿಬಾರೆ ಉಪಸ್ಥಿತರಿದ್ದರು.

ವಿ.ಕೆ. ಇಂಟರ್‌ನ್ಯಾಷನಲ್ ಕಾಲೇಜು ಪ್ರಾಚಾರ್ಯ ನಾಗೇಶ ಬಿರಾದಾರ ಸ್ವಾಗತಿಸಿದರು. ಉಪನ್ಯಾಸಕ ಮಹಮ್ಮದ್ ಯುನೂಸ್ ನಿರೂಪಿಸಿದರು. ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು ಪ್ರಾಚಾರ್ಯ ಧನರಾಜ ಪಾಟೀಲ ವಂದಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಬಸವ ತತ್ವ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT