ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ನೀತಿ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರಲಿ: ಖಂಡ್ರೆ

ಕರ್ನಾಟಕ ಕಾಲೇಜು ಸುವರ್ಣ ಮಹೋತ್ಸವಕ್ಕೆ ಚಾಲನೆ
Last Updated 9 ಅಕ್ಟೋಬರ್ 2021, 11:57 IST
ಅಕ್ಷರ ಗಾತ್ರ

ಬೀದರ್‌:‘ಆಧುನಿಕ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯದ ತಳಹದಿಯಾಗುವುದರ ಜತೆಗೆ ರಾಷ್ಟ್ರದ ಅಭಿವೃದ್ಧಿಗೂ ಪೂರಕವಾಗಿರಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ನಗರದ ಜಹೀರಾಬಾದ್ ರಸ್ತೆಯಲ್ಲಿ ಇರುವ ಕರ್ನಾಟಕ ಕಾಲೇಜಿನ ಆವರಣದಲ್ಲಿ ಶನಿವಾರ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕರ್ನಾಟಕ ಕಾಲೇಜಿನ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ವಲಯದಲ್ಲಿನ ಪರಿಣಿತರೊಂದಿಗೆ ಸಮಾಲೋಚನೆ ನಡೆಸಿ ಶಿಕ್ಷಣ ನೀತಿ ರೂಪಿಸುವಂತಾಗಬೇಕು.
ಶಿಕ್ಷಣ ನೀತಿ ಏಕಾಏಕಿ ಹೇರುವಂತಾಗಬಾರದು. ಹೊಸ ಶಿಕ್ಷಣ ನೀತಿಯನ್ನು ನೇರವಾಗಿ ಜಾರಿಗೊಳಿಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯಾಗಲಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ’ ಎಂದು ಹೇಳಿದರು.

‘ಹಿಂದೆ ಆರಂಭವಾಗಿರುವ ಶಿಕ್ಷಣ ಸಂಸ್ಥೆಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತ ಬಂದಿವೆ. ನಾಡು ಕಟ್ಟುವ ಕೆಲಸವನ್ನೂ ಮಾಡಿವೆ. ಆದರೆ, ಪ್ರಸ್ತುತ ಶಿಕ್ಷಣದ ವ್ಯಾಪಾರೀಕರಣ ನಡೆದಿದೆ’ ಎಂದು ವಿಷಾದಿಸಿದರು.‌

‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆ ಜಾರಿ ತಂದರೂ ಈ ಭಾಗವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಭರ್ತಿ ಮಾಡುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರಾಶಿ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಅಷ್ಟೂರ ಮಾತನಾಡಿ, ‘ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಸ್ವಾತಂತ್ರ್ಯ ಪೂರ್ವ(1942)ದಲ್ಲಿ ಸ್ಥಾಪಿತವಾಗಿದೆ. ಸಂಸ್ಥೆ ಅಡಿಯಲ್ಲಿ 25 ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಥಮಿಕ ಶಾಲೆಯಿಂದ ಆರಂಭವಾದ ಸಂಸ್ಥೆಯಲ್ಲಿ ಇದೀಗ ಎಲ್.ಕೆ.ಜಿ. ಯಿಂದ ಪಿ.ಜಿ. ಹಾಗೂ ಪಿಎಚ್‌ಡಿ ವರೆಗೆ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದರ ಪ್ರತಿಫಲವಾಗಿ ಇಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹೇಳಿದರು.

ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಲಬುರ್ಗಿಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಸಾಲಿಮಠ ಸಿ., ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ಉಪಾಧ್ಯಕ್ಷ ಸಿದ್ದರಾಮ ಪಾರಾ, ಜಂಟಿ ಕಾರ್ಯದರ್ಶಿ ಬಸವರಾಜ ಜಾಬಶೆಟ್ಟಿ, ಬಸವರಾಜ ಪಾಟೀಲ, ಮಹೇಶಕುಮಾರ ಭದಭದೆ, ರಾಜಶೇಖರ ತಾಂಡೂರ್, ಚಂದಾ ಶಾಂತಕುಮಾರ, ಡಿ.ವಿ.ಸಿಂದೋಲ್, ಎಂ.ಎ.ಶೇರಿಕಾರ, ಮಲ್ಲಿಕಾರ್ಜುನ ಹತ್ತಿ, ಶಿವಶಂಕರ ಶೆಟಕಾರ, ವಿಜಯಕುಮಾರ ಗುನ್ನಳ್ಳಿ, ವೀರಭದ್ರಪ್ಪ ಭುಯ್ಯಾ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ್ ಇದ್ದರು.

ಸುವರ್ಣ ಮಹೋತ್ಸವ ಅಂಗವಾಗಿ ನೂತನ ಕಟ್ಟಡಗಳು, ಕಂಪ್ಯೂಟರ್ ಪ್ರಯೋಗಾಲಯ, ಗ್ರಂಥಾಲಯ, ವಾಣಿಜ್ಯ ಸಂಕೀರ್ಣ ಉದ್ಘಾಟಿಸಲಾಯಿತು.

ಡಾ. ಪೂಜಾ ಸೂರ್ಯವಂಶಿ ಹಾಗೂ ಸುನೀತಾ ಕೂಡ್ಲಿಕರ್ ನಿರೂಪಿಸಿದರು. ಕಾಲೇಜಿನ ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಚ್‌.ಚೆಲುವಾ ವಂದಿಸಿದರು.

* * *


ಸುವರ್ಣ ಮಹೋತ್ಸವ: ಸ್ಮರಣ ಸಂಚಿಕೆ ಬಿಡುಗಡೆ ಇಂದು

ಬೀದರ್‌ನ ಮನ್ನಳ್ಳಿ ರಸ್ತೆಯಲ್ಲಿರುವ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಅ.10 ರಂದು ಸಂಜೆ 5ಕ್ಕೆ ಸುವರ್ಣ ಮಹೋತ್ಸವ ಸಮಾರಂಭಸ್ಮರಣ ಸಂಚಿಕೆ ಬಿಡುಗಡೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಉದ್ಘಾಟಿಸುವರು. ನಂತರ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಮುಖ್ಯ ಅತಿಥಿಗಳಾಗಿ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಶಾಸಕರಾದ ರಾಜಶೇಖರ ಪಾಟೀಲ, ಬಂಡೆಪ್ಪ ಕಾಶಂಪೂರ್, ರಹೀಂಖಾನ್, ಗೌರವ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ರಘುನಾಥರಾವ್ ಮಲ್ಕಾಪುರೆ, ವಿಜಯಸಿಂಗ್, ಚಂದ್ರಶೇಖರ ಪಾಟೀಲ, ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬುವಾಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT