ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ತಿರುಚುವ ಕೆಲಸ ಆಗದಿರಲಿ

ನಿವೃತ್ತ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಹೇಳಿಕೆ
Last Updated 5 ಡಿಸೆಂಬರ್ 2020, 15:08 IST
ಅಕ್ಷರ ಗಾತ್ರ

ಬೀದರ್: ‘ಇತಿಹಾಸ ತಿರುಚುವ ಕೆಲಸ ಯಾವತ್ತೂ ಆಗಬಾರದು. ಇತಿಹಾಸ ತಿರುಚಿದರೆ ನಾಗರಿಕತೆಯನ್ನೇ ತಿರುಚಿದಂತೆ. ಇತಿಹಾಸದಲ್ಲಿ ರಾಜಕೀಯ ಬೆರಸದೆ ಇತಿಹಾಸವನ್ನು ಇತಿಹಾಸವಾಗಿಯೇ ಉಳಿಯಲು ಬಿಡಬೇಕು’ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಹೇಳಿದರು.


ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಜಿಲ್ಲಾ ಆಡಳಿತ ಹಾಗೂ ಗ್ಲೋಬಲ್ ಸೈನಿಕ ಅಕಾಡೆಮಿ ಸಹಯೋಗದಲ್ಲಿ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸೇನಾ ಪಡೆಗಳ ಪುನಃಶ್ಚೇತನ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


‘ಭಾರತೀಯ ಸೇನೆ ದೇಶದ ಶಕ್ತಿಯಾಗಿದೆ. ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಸೇನೆಯಲ್ಲಿ ರಾಜಕೀಯ, ಪ್ರಾದೇಶಿಕತೆ ಹಾಗೂ ಕೋಮುವಾದಕ್ಕೆ ಅವಕಾಶ ಇಲ್ಲವೇ ಇಲ್ಲ’ ಎಂದು ತಿಳಿಸಿದರು.


‘ಧರ್ಮ ಹಾಗೂ ಜಾತಿಯ ಹೆಸರಲ್ಲಿ ರಾಜಕೀಯ ಮಾಡ ತೊಡಗಿದರೆ ವ್ಯಕ್ತಿಯ ಮನಸುಗಳು ವಿಚಲಿತಗೊಳ್ಳುತ್ತವೆ. ಅಸತ್ಯ, ಮೋಸ ಹಾಗೂ ಕಳ್ಳತನ ಮಾಡದಂತೆ ಎಲ್ಲ ಧರ್ಮಗಳು ಹೇಳುತ್ತವೆ. ಎಲ್ಲ ಧರ್ಮಗಳ ಸಾರಾಂಶವೂ ಒಂದೇ ಆಗಿದೆ. ಇನ್ನುಳಿದವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇಂದಿನ ಯುವಕರು ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕು’ ಎಂದು ಸಲಹೆ ನೀಡಿದರು.


‘ಸಕಾರಾತ್ಮಕ ನಿಲುವು, ಒಳ್ಳೆಯ ಆಲೋಚನೆ ಹಾಗೂ ಸಾಹಸ ಪ್ರವೃತ್ತಿಗಳು ವ್ಯಕ್ತಿಯಲ್ಲಿ ಚೈತನ್ಯ ತುಂಬತ್ತವೆ. ಹೀಗಾಗಿ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಹೆಚ್ಚು ಹೆಚ್ಚು ಪರಿಶ್ರಮ ಪಡಬೇಕು. ನಾವು ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಬದ್ಧತೆ ಇರಬೇಕು. ಈ ಅಂಶಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದರು.


‘ಪ್ರಸ್ತುತ ಪಾಲಕರು, ಶಿಕ್ಷಕರು ಹಾಗೂ ಉಪಸ್ಯಾಸಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿಲ್ಲ. ಎಲ್ಲರೂ ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದಾರೆ. ಇದು ಮಕ್ಕಳ ವ್ಯಕ್ತಿತ್ವ ವಿಕಸನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೂ ಪರಿಣಾಮ ಉಂಟು ಮಾಡುತ್ತಿದೆ’ ಎಂದು ಹೇಳಿದರು.

‘ಮಕ್ಕಳು ಮೊಬೈಲ್‌ನಲ್ಲಿ ಮುಳುಗಿದರೆ ಆಧುನಿಕ ಭಾರತಕ್ಕೆ ಸಶಕ್ತ ಮಕ್ಕಳನ್ನು ಕೊಡುವ ಕೆಲಸ ಆಗದು. ಈ ದಿಸೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಸಹ ಆಸಕ್ತಿಯಿಂದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಒಂದು ನಗರದಲ್ಲಿ ಕ್ರೀಡಾಂಗಣಗಳೇ ಇಲ್ಲದಿದ್ದರೆ ಅಲ್ಲಿ ಅನೇಕ ಸಮಸ್ಯೆಗಳಿಗೆ ಇವೆ ಎಂದರ್ಥ. ನಾಯಕತ್ವದಲ್ಲೂ ಕೊರತೆ ಇದೆ ತಿಳಿದುಕೊಳ್ಳಬೇಕು. ಸರ್ಕಾರ, ಸ್ವಚ್ಛತೆಗಾಗಿ ನಗರಸಭೆ ಹಾಗೂ ದಂಡು ಪ್ರದೇಶಕ್ಕೆ ಅಷ್ಟೇ ಮೊತ್ತದ ಅನುದಾನ ಕೊಡುತ್ತದೆ. ದಂಡು ಪ್ರದೇಶದಲ್ಲಿ ಒಂದಿಷ್ಟೂ ಮಾಲಿನ್ಯ ಕಂಡು ಬರುವುದಿಲ್ಲ. ಆದರೆ, ನಗರಸಭೆ ವ್ಯಾಪ್ತಿಯಲ್ಲಿ ಎಲ್ಲೆಡೆ ಮಾಲಿನ್ಯ ಕಾಣಸಿಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತೀಯ ಸೇನೆಯ ಪಿಆರ್‌ಇಪಿಎಸ್‌ಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಲ್‌ ರೋಹಿತ್‌ ದೇವ ಮಾತನಾಡಿ, ‘ಒಬ್ಬ ಕ್ರಿಯಾಶೀಲ ವ್ಯಕ್ತಿಗೆ ಕುತೂಹಲ ಹಾಗೂ ಪಶ್ನೆಗಳು ಕೇಳುವ ಪ್ರವೃತ್ತಿಗಳು ಇರಲೇಬೇಕು. ಇವು ಇರದಿದ್ದರೆ ನಾಯಕತ್ವ ಗುಣಗಳು ಬೆಳೆಯುವುದಿಲ್ಲ. ಜೀವನದಲ್ಲಿ ಮುನ್ನುಗ್ಗುವ ಸಾಮರ್ಥ್ಯವೂ ಬಲಗೊಳ್ಳುವುದಿಲ್ಲ’ ಎಂದರು.


‘ಗುಂಪಿನಲ್ಲು ಮುಂದೆ ಸಾಗುವ ವ್ಯಕ್ತಿ ಸಹಜವಾಗಿಯೇ ನಾಯಕನಾಗುತ್ತಾನೆ. ಸವಾಲುಗಳನ್ನು ಸ್ವೀಕರಿಸುವವರು ಹಾಗೂ ಸಮರ್ಥವಾಗಿ ಎದುರಿಸುವವರು ಜೀವನದಲ್ಲಿ ಸಾಧನೆ ಮಾಡುತ್ತಾರೆ. ಸಮಾಜದಲ್ಲಿ ನಾಯಕರಾಗಿ ಗುರುತಿಸಿಕೊಳ್ಳುತ್ತಾರೆ’ ಎಂದು ಹೇಳಿದರು.
‘ಕೆಲಸದಲ್ಲಿ ಎಲ್ಲರಿಗೂ ಒತ್ತಡ ಇರುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಸಮಸ್ಯೆಗಳನ್ನು ನಿವಾರಿಸಬೇಕಾದ ವ್ಯಕ್ತಿಯೇ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುರು ಮಾಡಿದರೆ ಆತ ನಾಯಕನಾಗಲಾರ. ನಡತೆ ಹಾಗೂ ಸಂವಹನವೂ ನಾಯಕತ್ವ ಗುಣ ಬೆಳೆಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ತಿಳಿಸಿದರು.

ಕ್ಯಾಪ್ಟನ್ ಮಾರ್ಟಿನಾ ಜಾರ್ಜ್ ಅವರು ಸೇನೆಯ ಯಾವ ಹುದ್ದೆಗೆ ಸೇರಲು ಏನೇನು ಅರ್ಹತೆಗಳು ಬೇಕು ಎನ್ನುವ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿದರು.


ಭಾರತೀಯ ವಾಯುಪಡೆಯ ಏರ್ ಕಮಾಡೋರ್ ಜಿ.ಎಲ್. ಹಿರೇಮಠ, ನೌಕಾ ಪಡೆಯ ಕಮಾಂಡರ್ ನವನೀತ್ ಬಾಲಿ, ಕರ್ನಲ್ ರೋಹಿತ್ ದೇವ್, ಕ್ಯಾಪ್ಟನ್ ನವೀನ್ ನಾಗಪ್ಪ ಉಪನ್ಯಾಸ ನೀಡಿದರು.


ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು
‘ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ’ ವೆಬ್‍ಸೈಟ್‍ಗೆ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿಚರ್ಡ್ ವಿಲ್ಸನ್ ಡಿಸೋಜಾ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಉಪ ವಿಭಾಗಾಧಿಕಾರಿಗಳಾದ ಭುವನೇಶ ಪಾಟೀಲ, ಗರಿಮಾ ಪನ್ವಾರ್, ರೋಟರಿ ಜಿಲ್ಲೆ 3160 ಮಾಜಿ ಗವರ್ನರ್ ಕೆ.ಸಿ. ಸೇನನ್, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಜಗದೀಶ ಪಾಟೀಲ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಉಪಾಧ್ಯಕ್ಷ ನಿತೀನ್ ಕರ್ಪೂರ್, ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಡಾ. ರಿತೇಶ ಸುಲೆಗಾಂವ, ಸತೀಶ ಸ್ವಾಮಿ, ಡಾ. ರಘು ಕೃಷ್ಣಮೂರ್ತಿ, ನಿತೇಶ ಬಿರಾದಾರ, ಡಾ. ಆರತಿ ರಘು, ರಿಷಿಕೇಶ ಪಾಟೀಲ, ಡಾ. ಶರಣ ಬುಳ್ಳಾ, ಜಯೇಶ್ ಪಟೇಲ್, ಶಿವಕುಮಾರ ಪಾಖಲ್, ಚೇತನ್ ಮೇಗೂರ್, ಡಾ. ಶಿಲ್ಪಾ ಬುಳ್ಳಾ, ಡಾ. ಉಜೇರ್, ರಾಜಕುಮಾರ ಅಳ್ಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT