ಬುಧವಾರ, ನವೆಂಬರ್ 25, 2020
21 °C
ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿಕೆ

ಬೀದರ್‌ | ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ನಿಂತಿಲ್ಲ: ಗಂಗಾದೇವಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ನಿಂತಿಲ್ಲ. ಕೋವಿಡ್‌ ಕಡಿಮೆಯಾದ ತಕ್ಷಣ ಹೋರಾಟ ಮುಂದುವರೆಯಲಿದೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

‘ಕೋವಿಡ್‌ ಇನ್ನೂ ತೊಲಗಿಲ್ಲ. ಸರ್ಕಾರದ ಸೂಚನೆಯಂತೆ ಪ್ರತಿಯೊಬ್ಬರು ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಜನರ ಆರೋಗ್ಯವನ್ನು ಕಡೆಗಣಿಸಿ ದೊಡ್ಡ ಪ್ರಮಾಣದಲ್ಲಿ ರ್‍ಯಾಲಿಗಳನ್ನು ನಡೆಸುವುದು ಸೂಕ್ತವಲ್ಲ. ಹಾಗಂತ ನಮ್ಮ ಹೋರಾಟ ಅಂತ್ಯಗೊಂಡಿಲ್ಲ’ ಎಂದು ಇಲ್ಲಿಯ ಬಸವ ಮಂಟಪದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಎರಡು ಮಾತಿಲ್ಲ. ‌‌‌ಒಟ್ಟು ಹತ್ತು ಲಿಂಗಾಯತ ಸಂಘಟನೆಗಳ ಮೂಲಕ ಕಾನೂನಾತ್ಮಕ ಹೋರಾಟ ನಡೆಸಲಾಗುತ್ತಿದೆ. ಮುಂಬೈನಲ್ಲಿ ಬೃಹತ್‌ ರ್‍ಯಾಲಿ ನಡೆಸುವ ತೀರ್ಮಾನ ಇನ್ನೂ ಕೈಬಿಟ್ಟಿಲ್ಲ. ಸ್ವತಂತ್ರ ಧರ್ಮದ ಮಾನ್ಯತೆ ವಿಷಯದಲ್ಲಿ ಇಟ್ಟಿರುವ ಹೆಜ್ಜೆಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಹೇಳಿದರು.

‘ಮಾತೆ ಮಹಾದೇವಿ ಅವರು ನಮ್ಮ ಮಧ್ಯೆ ಇಲ್ಲ. ಆದರೆ, ಬಸವ ಧರ್ಮ ಪೀಠದ ಎಲ್ಲ ಕಾರ್ಯಕ್ರಮಗಳು ಯಥಾವತ್ತಾಗಿ ಮುಂದುವರೆಯಲಿವೆ. ಕೋವಿಡ್‌ ಕಾರಣ ಕಲ್ಯಾಣ ಪರ್ವ ಕಾರ್ಯಕ್ರಮವನ್ನು ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಗೋಷ್ಠಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಬಸವ ಭಕ್ತರು ಸ್ವಇಚ್ಛೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ನಮ್ಮ ಮೇಲೆ ಸಾಮಾಜಿಕ ಜವಾಬ್ದಾರಿಯೂ ಇದೆ. ಹೀಗಾಗಿ ಕಲ್ಯಾಣಪರ್ವ ಕಾರ್ಯಕ್ರಮದಲ್ಲಿ ಹೆಚ್ಚು ಜನರನ್ನು ಸೇರಿಸುತ್ತಿಲ್ಲ. ಮೆರವಣಿಗೆಯನ್ನೂ ನಡೆಸುತ್ತಿಲ್ಲ. ಮಾತೆ ಗಂಗಾದೇವಿ ಅವರು ಉದ್ಘಾಟನೆ ದಿನ ಕಾರಿನಲ್ಲಿ ಪರುಷಕಟ್ಟೆಗೆ ಹೋಗಿ ಪೂಜೆ ಸಲ್ಲಿಸಿ ಕಾರ್ಯಕ್ರಮ ಸ್ಥಳಕ್ಕೆ ಮರಳಲಿದ್ದಾರೆ’ ಎಂದು ಹೇಳಿದರು.

‘ಬಸವ ಭಕ್ತರ ಹಿತವನ್ನು ಗಮನದಲ್ಲಿರಿಸಿಕೊಂಡು ಡಿಜಿಟಲ್‌ ಹಾಗೂ ಫಿಜಿಕಲ್‌ ಎರಡೂ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದ ಅತಿಥಿಗಳು ಡಿಜಿಟಲ್‌ ಭಾಷಣ ಮಾಡಲಿದ್ದಾರೆ. ಅದಕ್ಕಾಗಿ ಎರಡು ಪ್ಲಾಸ್ಮಾ ಟಿವಿಗಳನ್ನು ಅಳವಡಿಸಲಾಗಿದೆ’ ಎಂದು ತಿಳಿಸಿದರು.

‘ಪ್ರತಿ ವರ್ಷದಂತೆ ಈ ವರ್ಷವೂ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಆದರೆ, ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಫೇಸ್‌ಬುಕ್‌ ಹಾಗೂ ಯುಟ್ಯೂಬ್‌ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುವುದು. ಬಸವ ಭಕ್ತರು ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾಗಿದೆ’ ಎಂದು ಹೇಳಿದರು.

ಜ್ಞಾನೇಶ್ವರಿ ಮಾತಾಜಿ, ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಲಿಂಗಾಯತ ಸಮಾಜ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.