ಲಿಂಗಾಯತ ಸ್ವತಂತ್ರ ಧರ್ಮದ ಕಿಡಿ ಹೊತ್ತಿಸಿದ ಮಾತೆ

ಶನಿವಾರ, ಮಾರ್ಚ್ 23, 2019
24 °C

ಲಿಂಗಾಯತ ಸ್ವತಂತ್ರ ಧರ್ಮದ ಕಿಡಿ ಹೊತ್ತಿಸಿದ ಮಾತೆ

Published:
Updated:
Prajavani

ಬೀದರ್: ಹಲವು ಮಠಾಧೀಶರು ಹಾಗೂ ಲಿಂಗಾಯತ ಸಮುದಾಯವನ್ನು ಕಲ್ಯಾಣ ನಾಡಿನಲ್ಲೇ ಒಗ್ಗೂಡಿಸಿ ‘ಒಬ್ಬ ಲಿಂಗಾಯತ, ಕೋಟಿ ಲಿಂಗಾಯತ’ ಘೋಷವಾಕ್ಯದೊಂದಿಗೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಕಿಡಿ ಹೊತ್ತಿಸಿದ ಕೀರ್ತಿ ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ.

ಧರ್ಮಸಭೆಯೊಂದಿಗೆ ಸಮಾಜ ಜಾಗೃತಿ ಆರಂಭಿಸಿದರೂ ಬೀದರ್‌ನಿಂದ ಹೋರಾಟ ಶುರು ಮಾಡಿದಾಗ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯಿತು.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ, ಅಕ್ಕ ಡಾ.ಗಂಗಾಂಬಿಕೆ, ಚನ್ನಬಸವಾನಂದ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಲ್ದಾಳ ಸಿದ್ಧರಾಮ ಶರಣರು ಬೀದರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸುವಂತೆ ಮಾಡಿದ್ದರು. ಹೋರಾಟಕ್ಕೆ ಬೀದರ್‌ ಜಿಲ್ಲೆಯನ್ನೇ ನೆಲೆ ಮಾಡಿಕೊಂಡಿದ್ದರು.

ಕರ್ನಾಟಕದ ಐದು ಜಿಲ್ಲೆ, ಮಹಾರಾಷ್ಟ್ರದ ಮೂರು ಜಿಲ್ಲೆ ಹಾಗೂ ಕೊನೆಗೆ ದೆಹಲಿಯಲ್ಲಿ ಬೃಹತ್ ರ‍್ಯಾಲಿ ಆಯೋಜಿಸಿ ಇಡೀ ದೇಶವೇ ಗಮನ ಸೆಳೆಯುವಂತೆ ಮಾಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಬಸವಣ್ಣನ ಹೆಸರು ಪ್ರಸ್ತಾಪಿಸಿರುವುದಕ್ಕೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ಕೊಡಲು ಸಹ ಮಾತಾಜಿ ಅವರೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಕಾರಣಿಗಳನ್ನು ಓಲೈಸುವ ಕೆಲಸವನ್ನು ಅವರು ಎಂದಿಗೂ ಮಾಡಲಿಲ್ಲ. ಬಸವಭಕ್ತರೇ ಅವರಿಗೆ ಸಂಪನ್ಮೂಲ ಆಗಿದ್ದರು. ಬೀದರ್‌ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಬಸವತತ್ವ ಪ್ರಸಾರ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. 1988ರಲ್ಲಿ ಶರಣ ಮೇಳ ಆರಂಭಿಸಿ ಐದು ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಬಸವ ಭಕ್ತರನ್ನು ಒಗ್ಗೂಡಿಸಲು ಶ್ರಮಿಸಿದ್ದರು. ಶರಣ ಮೇಳಕ್ಕೆ ಇಂದಿಗೂ ಬೀದರ್‌ ಜಿಲ್ಲೆಯವರೇ ಅಧಿಕ ಸಂಖ್ಯೆಯಲ್ಲಿ ತೆರಳುತ್ತಾರೆ.

‘1985ರಿಂದ 2000ರ ವರೆಗೆ 15 ವರ್ಷ ಅವರ ಸಂಪರ್ಕದಲ್ಲಿ ಇದ್ದೆ. ರಾಷ್ಟ್ರೀಯ ಬಸವ ದಳ ಹುಟ್ಟು ಹಾಕಿ ಅನೇಕ ಒಳ್ಳೆಯ ಕಾರ್ಯಗಳನ್ನು ಅವರು ಮಾಡಿದ್ದರು. ಪ್ರತಿಯೊಂದು ಹಳ್ಳಿಗೂ ತಲುಪಿದ್ದರು. ಶಿಬಿರಗಳನ್ನು ಆಯೋಜಿಸಿ ಜಾಗೃತಿ ಮಾಡಿದ್ದರು. ಶರಣ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಿದ್ದರು’ ಎಂದು ಮಾತಾಜಿ ಅವರ ನಿಕಟವರ್ತಿಯಾಗಿದ್ದ ಬಸವಕುಮಾರ ಪಾಟೀಲ ಹೇಳುತ್ತಾರೆ.

ಮಾತಾಜಿ ಅವರ ಜಾಗೃತಿ ಫಲವಾಗಿ ಲಿಂಗಾಯತ ಸಮುದಾಯದವರು ತಮ್ಮ ಮಕ್ಕಳಿಗೆ ಬಸವಾಂಜಲಿ, ಬಸವ ಪ್ರಸಾದ, ಬಸವಶ್ರೀ ಎನ್ನುವ ಹೆಸರುಗಳನ್ನು ಇಡಲು ಆರಂಭಿಸಿದರು. ಬಸವ ತತ್ವದಲ್ಲಿ ಕೌಟುಂಬಿಕ ಭಾವನೆ ಬೆಳೆಯುವಂತೆ ಮಾಡಿದ್ದರು ಎಂದು ತಿಳಿಸುತ್ತಾರೆ.

‘ಮಾತೆ ಮಹಾದೇವಿ ಅವರು 1997ರಲ್ಲಿ ದೆಹಲಿಯಲ್ಲಿ ಧರ್ಮಸಭೆಯೊಂದಿಗೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಆರಂಭಿಸಿದ್ದರೂ ಹೋರಾಟ ತೀವ್ರ ಸ್ವರೂಪ ಪಡೆದಿದ್ದು 2017ರ ಜುಲೈ 19ರಂದು. ಬಸವತತ್ವವನ್ನು ಆಳವಾಗಿ ಪರಿಚಯಿಸಿದವರೇ ಅವರು’ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !