ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರಲ್ಲಿ ಕಡಿಮೆಯಾದ ಸ್ವಾಭಿಮಾನ

ಶರಣಸಂಸ್ಕೃತಿ ಉತ್ಸವದಲ್ಲಿ ಶಾಸಕ ಎಂ.ಬಿ.ಪಾಟೀಲ ಕಳವಳ
Last Updated 21 ಡಿಸೆಂಬರ್ 2019, 15:28 IST
ಅಕ್ಷರ ಗಾತ್ರ

ಬೀದರ್‌: ‘ಶರಣರ ಸಾಮಾಜಿಕ ಕ್ರಾಂತಿಯ ನಂತರವೂ ನಾವು ಯಾರು ಎನ್ನುವುದನ್ನು ಅರಿತುಕೊಂಡಿಲ್ಲ. ಲಿಂಗಾಯತರಲ್ಲಿ ಸ್ವಾಭಿಮಾನವೇ ಕಡಿಮೆಯಾಗಿದೆ. ಅಂತೆಯೇ ಲಿಂಗಾಯತ ಹೋರಾಟದಲ್ಲಿ ಕೈಸುಟ್ಟುಕೊಂಡಿದ್ದೇನೆ’ ಎಂದು ಶಾಸಕ ಎಂ.ಬಿ.ಪಾಟೀಲ ಬೇಸರ ವ್ಯಕ್ತಪಡಿಸಿದರು.

ಇಲ್ಲಿಯ ಬಿ.ವಿ.ಬಿ.ಕಾಲೇಜು ಆವರಣದಲ್ಲಿ ಬಸವ ಕೇಂದ್ರದ ವತಿಯಿಂದ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಶನಿವಾರ ‘ಮಕ್ಕಳ ಸಾತ್ವಿಕ ಬೆಳವಣಿಗೆ– ಪಾಲಕರ ಜವಾಬ್ದಾರಿ’ ಕುರಿತ ಸಂಸ್ಕೃತಿ ಚಿಂತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಲಿಂಗಾಯತರಲ್ಲಿ ಚಾತುರ್ವಣ ಪದ್ಧತಿ ಇಲ್ಲ. 1871ರಲ್ಲಿ ಮೈಸೂರಿನಲ್ಲಿ ಜನಗಣತಿಗೆ ಮಾಹಿತಿ ಪಡೆಯುವಾಗ ವ್ಯಕ್ತಿಯ ಸರಿಯಾದ ಜಾತಿ, ಪಂಗಡ ತಿಳಿದುಕೊಂಡು ಲಿಂಗಾಯತ ಧರ್ಮವೆಂದು ಬರೆಯಬೇಕು ಎಂದು ಸೂಚಿಸಲಾಗಿತ್ತು. ಹಿಂದೂ ಧರ್ಮದಲ್ಲಿ ವೈಷ್ಣವ ಮತ್ತು ಶೈವ ಎಂಬ ಎರಡು ವಿಭಾಗಗಳಿವೆ. ಜನಗಣತಿಯ ಮಾಹಿತಿಯಲ್ಲಿ ಧರ್ಮ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಲಾಗಿದೆ’ ಎಂದು ತಿಳಿಸಿದರು.

‘ಸ್ವತಂತ್ರ ಧರ್ಮದ ಹೋರಾಟ ಆರಂಭವಾಗಿದ್ದೇ ಬೀದರ್‌ನಿಂದ. ಬೀದರ್‌ನಲ್ಲಿ ಬೆಂಬಲ ದೊರೆಯಿತಾದರೂ ಬೇರೆ ಕಡೆ ಹಿನ್ನಡೆ ಉಂಟಾಯಿತು. ನಾನು ಧರ್ಮದ ಹೆಸರಲ್ಲಿ ರಾಜಕೀಯ ಮಾಡಿಲ್ಲ. ಲಿಂಗಾಯತ ಧರ್ಮ ಬೇರೆ ರಾಷ್ಟ್ರಗಳಲ್ಲಿ ಹುಟ್ಟಿದ್ದರೆ ಈಗಾಗಲೇ ಜಾಗತಿಕ ಧರ್ಮವಾಗುತ್ತಿತ್ತು. ಆದರೆ, ಮುಂದೊಂದು ದಿನ ಜಾಗತಿಕ ಧರ್ಮವಾಗಿ ಗುರುತಿಸಿಕೊಳ್ಳಲಿದೆ’ ಎಂದು ಆಶಯ ವ್ಯಕ್ತಪಡಿಸಿದರು.

ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಮಾತನಾಡಿ, ‘ಮಕ್ಕಳು ಪಾಲಕರನ್ನೇ ಅನುಸರಿಸುತ್ತಾರೆ. ಪಾಲಕರ ನಡೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪಾಲಕರ ನಡೆ, ನುಡಿ ಒಂದಾಗಿರಬೇಕು’ ಎಂದು ಹೇಳಿದರು.

‘ಮಕ್ಕಳ ಮನಸ್ಸು ಪರಿಶುದ್ಧವಾಗಿರುತ್ತದೆ. ಮಕ್ಕಳು ಸತ್ಯದ ಮಾರ್ಗದಲ್ಲಿ ನಡೆಯುವಂತೆ ಮಾಡಬೇಕು’ ಎಂದರು.

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು. ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ಚಿಂತಕಿ ಲೀಲಾ ಕಾರಟಗಿ ಅನುಭಾವ ಮಂಡನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ,ಸ್ವಾಗತ ಸಮಿತಿ ಅಧ್ಯಕ್ಷ ಗುರುನಾಥ ಕೊಳ್ಳೂರ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನಿಲಕುಮಾರ ರಗಟೆ, ಶಿವರಾಜ್ ನರಶೆಟ್ಟಿ, ಓಂಕಾಂತ ಸೂರ್ಯವಂಶಿ, ಪಾಂಡುರಂಗ ಬೆಲ್ದಾರ್, ಬಾಲಾಜಿ ಬಿರಾದಾರ, ವಿಜಯಕುಮಾರ ಗೌರೆ, ಸಂಸ್ಕೃತಿ ಸುರೇಶ ಚನಶೆಟ್ಟಿ ಇದ್ದರು.
ಬಾಬುರಾವ್ ದಾನಿ ಸ್ವಾಗತಿಸಿದರು. ಲೋಕೇಶ ಉಡಬಾಳೆ ನಿರೂಪಿಸಿದರು. ಜಗನ್ನಾಥ ಶಿವಯೋಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT