ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಇಲ್ಲದ ಶಾಲೆಗೆ ಬೀಗ

ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸು
Last Updated 25 ಜುಲೈ 2019, 16:41 IST
ಅಕ್ಷರ ಗಾತ್ರ

ಬೀದರ್‌: ಅನುಮತಿ ಇಲ್ಲದೇ ಶಾಲೆಯೊಂದನ್ನು ನಡೆಸಲಾಗುತ್ತಿದೆ ಎನ್ನುವ ದೂರಿನ ಪ್ರಯುಕ್ತ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಗುರುವಾರ ಇಲ್ಲಿಯ ಮಾಧವನಗರದಲ್ಲಿರುವ ಖಾಲ್ಸಾ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಹೊರಗಡೆ ಬಾಗಿಲು ಮುಚ್ಚಿ ಒಳಗಡೆ ಮಕ್ಕಳಿಗೆ ಪಾಠ ಮಾಡುತ್ತಿರುವುದು ಕಂಡು ಬಂದಿತು. ಸಿಇಓ ಅವರು, ಶಾಲೆಯ ಒಳಗಡೆ ತಿರುಗಾಡಿ, ಅಲ್ಲಿನ ಶಿಕ್ಷಕರೊಂದಿಗೆ ಮಾತನಾಡಿದರು. ತಾವು ಏನು ಓದಿದ್ದೀರಿ, ಎಷ್ಟು ಸಂಬಳ ಕೊಡುತ್ತಾರೆ, ಇಲ್ಲಿ ಎಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಪ್ರಶ್ನಿಸಿ ಮಾಹಿತಿ ಪಡೆದರು.

ಅನುಮತಿ ಇಲ್ಲದೆ ಏಕೆ ಶಾಲೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಶಾಲೆ ತೆರೆಯಲು ಅನುಮತಿ ಕೋರಿ ಬಿಇಓ ಕಚೇರಿಗೆ ಪತ್ರ ಬರೆದಿದ್ದೇವೆ. ಅನುಮತಿ ಸಿಗುವುದಾಗಿ ಶಾಲೆ ನಡೆಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಈ ಶಾಲೆಯ ಬಗ್ಗೆ ನಿಮಗೆ ಮಾಹಿತಿ ಇದೆಯಾ, ಅನುಮತಿ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿರುವ ಈ ಶಾಲೆಯ ಮೇಲೆ ಕ್ರಮ ಜರುಗಿಸಿದ್ದೀರಾ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಅವರನ್ನು ಸಿಇಓ ಪ್ರಶ್ನಿಸಿದರು. ಈ ಹಿಂದೆ ಈ ಶಾಲೆಯ ಬಗ್ಗೆಯೇ ದೂರು ಕೇಳಿ ಬಂದಿತ್ತು. ಶಾಲೆಯನ್ನು ಮುಚ್ಚಿಸುವಂತೆ ಬಿಇಓ ಅವರಿಗೆ ಸೂಚನೆ ನೀಡಲಾಗಿತ್ತು. ಶಾಲೆಗೂ ನೋಟಿಸ್ ಕೊಡಲಾಗಿದೆ. ದೂರು ನೀಡಿದವರಿಗೆ ಕೂಡ ಹಿಂಬರಹ ನೀಡಲಾಗಿದೆ ಎಂದು ಡಿಡಿಪಿಐ ಪ್ರತಿಕ್ರಿಯಿಸಿದರು.

ಅನುಮತಿ ಇಲ್ಲದೆ ಶಾಲೆ ನಡೆಯುತ್ತಿದ್ದರೂ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸರಿಯಾದ ಕ್ರಮ ವಹಿಸದ ಕಾರಣ ಬೀದರ್‌ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಮೇಲೆ ಶಿಸ್ತು ಕ್ರಮಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಸಿಇಓ ತಿಳಿಸಿದರು.

ಅಮಾನತಿಗೆ ಸೂಚನೆ: ಪ್ರತಿಯೊಂದಕ್ಕೂ ಹಣ ವಸೂಲಿ ಮಾಡುತ್ತಾರೆ. ಹೊಸ ಶಾಲೆಗಳಿಗೆ ಅನುಮತಿ ಕೊಡುವಾಗ ಹಣ ಕೇಳುತ್ತಾರೆ. ಈ ಶಾಲೆಯನ್ನು ಬಂದ್ ಮಾಡಿಸುವಲ್ಲಿ ಕೂಡ ವೈಫಲ್ಯ ತೋರಿದ್ದಾರೆ ಎನ್ನುವ ಹಲವಾರು ದೂರುಗಳ ಆಧಾರದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿರುವ ಶಿವಶಂಕರ ಅವರನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ತಿಳಿಸಿದರು.

ಶಾಲೆಗೆ ಬೀಗ:
ಶಾಲೆಗೆ ಭೇಟಿ ನೀಡಿದ ವೇಳೆ, ಈ ಶಾಲೆಯನ್ನು ಕೂಡಲೇ ಮುಚ್ಚಿಸುವಂತೆ ಡಿಡಿಪಿಐ ಅವರಿಗೆ ಸಿಇಓ ನಿರ್ದೇಶನ ನೀಡಿದರು. ಬಳಿಕ ಡಿಡಿಪಿಯು ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿ, ಅನಧಿಕೃತವಾಗಿ ನಡೆಯುತ್ತಿದ್ದ ಶಾಲೆಗೆ ಬೀಗ ಹಾಕಿಸಿದರು.

ಮಕ್ಕಳನ್ನು ಅನಧಿಕೃತ ಶಾಲೆಗಳಿಗೆ ಕಳುಹಿಸಬೇಡಿ: ಅನಧಿಕೃತ ಶಾಲೆಯಲ್ಲಿ ಓದುವ ಮಕ್ಕಳಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಮಕ್ಕಳು ಎಲ್ಲ ಯೋಜನೆಗಳಿಂದ ವಂಚಿತರಾಗುತ್ತಾರೆ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಪಾಲಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಅನಧಿಕೃತ ಶಾಲೆಗಳಿಗೆ ಸೇರಿಸಬಾರದು ಎಂದು ಸಿಇಓ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT