ಬೀದರ್‌: ಇನ್ನೂ ಒಂದು ವಾರ ಮುಂದುವರಿಯಲಿದೆ ಚಳಿ

7
ಮನ್ನಳ್ಳಿ ಗ್ರಾಮದಲ್ಲಿ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ ದಾಖಲು

ಬೀದರ್‌: ಇನ್ನೂ ಒಂದು ವಾರ ಮುಂದುವರಿಯಲಿದೆ ಚಳಿ

Published:
Updated:
Prajavani

ಬೀದರ್‌: ಜಿಲ್ಲೆಯಲ್ಲಿ ನವೆಂಬರ್‌ ಮೊದಲ ವಾರದಿಂದ ಆರಂಭವಾಗಿರುವ ಚಳಿ ವರ್ಷಾಂತ್ಯಕ್ಕೆ ಮೈಕೊರೆಯುವಂತೆ ಮಾಡಿತು. ಬೀದರ್‌ ತಾಲ್ಲೂಕಿನ ಮನ್ನಳ್ಳಿಯಲ್ಲಿ 2018ರ ಕೊನೆಯ ದಿನ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದು ವರ್ಷದ ದಾಖಲೆ ಸೃಷ್ಟಿಸಿತು. ಒಂದು ವಾರದಿಂದ ಚಳಿ ಒಂದಂಕಿ ಸುತ್ತ ಸುಳಿದಾಡುತ್ತಿದೆ.

1901ರ ಜನವರಿ 5ರಂದು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಕನಿಷ್ಠ 2.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಈ ಸಾರ್ವಕಾಲಿಕ ದಾಖಲೆ ಮುರಿದಿಲ್ಲ. ಆದರೆ, 2018ರ ಡಿಸೆಂಬರ್‌ 31 ರಂದು ಮಾತ್ರ ಮನ್ನಳ್ಳಿಯಲ್ಲಿ 4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿರುವುದನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗ ಖಚಿತಪಡಿಸಿದೆ.

2015ರ ಜನವರಿ 10 ರಂದು 5.8 ಡಿಗ್ರಿ ಸೆಲ್ಸಿಯಸ್‌, 2017ರ ನವೆಂಬರ್‌ 13 ರಂದು ಹಲಬರ್ಗಾದಲ್ಲಿ ಕನಿಷ್ಠ ಉಷ್ಣಾಂಶ 7.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಮನ್ನಳ್ಳಿಯಲ್ಲಿ ಡಿಸೆಂಬರ್ 31 ರಂದು 4 ಡಿಗ್ರಿ ಸೆಲ್ಸಿಯಸ್‌ ಹಾಗೂ ಜನವರಿ 1 ರಂದು 7.2. ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇತ್ತು. ಕಮಲನಗರದಲ್ಲಿ ಜನವರಿ 1ರಂದು 7.2 ಹಾಗೂ 3 ರಂದು 6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದೆ.

‘ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಶೀತಗಾಳಿ ಬೀಸುತ್ತಿದೆ. ಬೀದರ್, ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ
ಇನ್ನು ಎರಡು, ಮೂರು ದಿನ ಕನಿಷ್ಠ ಉಷ್ಣಾಂಶ 6 ರಿಂದ 7 ಡಿಗ್ರಿ ಸೆಲ್ಸಿಯಸ್‌ ಮುಂದುವರಿಯಲಿದೆ. ನಂತರ ನಿಧಾನವಾಗಿ ಉಷ್ಣಾಂಶದಲ್ಲಿ ಏರಿಕೆಯಾಗಲಿದೆ’ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಯೋಜನಾ ವಿಜ್ಞಾನಿ ಗಂಗಾಧರ ಮಠ ತಿಳಿಸುತ್ತಾರೆ.

‘ಬೀದರ್‌ನ ಹೂಗೇರಿಯಲ್ಲಿ 2019 ಜನವರಿ 1ರಂದು 6, ಜ. 2 ರಂದು 7.2 ಹಾಗೂ ಜ. 3 ರಂದು 8 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ. 2 ರಂದು ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿಯಲ್ಲಿ 6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಇತ್ತು. ಬೀದರ್‌ ತಾಲ್ಲೂಕಿನ ಮನ್ನಳ್ಳಿಯಲ್ಲಿ ಕುರುಚಲು ಕಾಡು ಹಾಗೂ ಕಬ್ಬಿನ ಗದ್ದೆಗಳು ಇರುವ ಕಾರಣ 2018ರ 31 ರಂದು 4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ಹೇಳುತ್ತಾರೆ.

‘ಒಂದು ವಾರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ದಾಟಿಲ್ಲ. ಮುಂದಿನ ವಾರ ಸಹ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಸಂಕ್ರಾಂತಿ ವರೆಗೆ ಜಿಲ್ಲೆಯಲ್ಲಿ ಸರಾಸರಿ 11 ರಿಂದ 15 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ಮುಂದುವರಿಲಿದೆ. ನಂತರ ಏರಿಕೆ ಕಂಡು ಬರಲಿದೆ’ ಎಂದು ವಿವರಿಸುತ್ತಾರೆ.

‘ಬೀದರ್‌ ಜಿಲ್ಲೆ ಅರೆ ಮಲೆನಾಡು ಪ್ರದೇಶವಾಗಿರುವ ಕಾರಣ ಸಹಜವಾಗಿಯೇ ಚಳಿ ಇದೆ. ಒಂದು ತಿಂಗಳಿಂದ ಕನಿಷ್ಠ ತಾಪಮಾನ ಸರಾಸರಿ 12 ಡಿಗ್ರಿ ಸೆಲ್ಸಿಯಸ್‌ ಒಳಗೆ ಇದೆ. ನೌಕರಸ್ಥರು ಹಾಗೂ ವಿದ್ಯಾರ್ಥಿಗಳು ಸ್ವೇಟರ್‌, ಕೈಗವಸು ಹಾಗೂ ತಲೆಗೆ ಟೊಪ್ಪಿಗೆ ಹಾಕಿಕೊಂಡು ಶಾಲೆ, ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಹಳ್ಳಿಗಳಲ್ಲಿ ಜನರು ಬೆಳಿಗ್ಗೆ ಚಹಾ ಅಂಗಡಿಗಳ ಮುಂದೆ ಕಸಕ್ಕೆ ಬೆಂಕಿ ಹಚ್ಚಿ ಮೈಕಾಯಿಸಿಕೊಳ್ಳುತ್ತಿದ್ದಾರೆ.

*
ಜಿಲ್ಲೆಯಲ್ಲಿ ಎರಡು ವಾರಗಳಿಂದ ಮೈನಡುಗಿಸುವ ಚಳಿ ಮುಂದುವರಿದಿದೆ. ಮುಂದಿನ ವಾರ ಚಳಿ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಲಿದೆ.
-ಬಸವರಾಜ ಬಿರಾದಾರ, ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !