ಭಾನುವಾರ, ಜನವರಿ 17, 2021
28 °C
ಮೂರು ದಿನಗಳಿಂದ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌

ಜನವರಿಗೆ ಇನ್ನೂ ಹೆಚ್ಚಾಗಲಿದೆ ಚಳಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಅಪಘಾನಿಸ್ತಾನ ಕಡೆಯಿಂದ ಉತ್ತರಭಾರತದ ಕಡೆಗೆ ಬಲವಾಗಿ ಶೀತಗಾಳಿ ಬೀಸುತ್ತಿದೆ. ಇದೇ ಕಾರಣಕ್ಕೆ ದಖ್ಖನ್‌ ಪ್ರಸ್ಥಭೂಮಿಯಲ್ಲಿ ಈಗ ಚಳಿ ಹೆಚ್ಚಾಗಿದೆ. ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ಚಳಿ ಇನ್ನಷ್ಟು ಜಾಸ್ತಿಯಾಗಲಿದೆ.

ಬೀದರ್‌ ನಗರ, ಮನ್ನಳ್ಳಿ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರು, ಮುಚಳಂಬ, ಔರಾದ್‌ ತಾಲ್ಲೂಕಿನ ದಾಬಕಾ ಹಾಗೂ ಬೋರಗಿಯಲ್ಲಿ
ಮೂರು ದಿನ ಹೆಚ್ಚು ಚಳಿ ಇತ್ತು. ಡಿಸೆಂಬರ್ 26 ರಿಂದ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇದೆ.

ಬೆಳಿಗ್ಗೆ ಮನೆಯಿಂದ ಹೊರಗೆ ಬರದಷ್ಟು ಚಳಿ ಇದೆ. ಜನ ತಲೆಗೆ ಟೊಪ್ಪಿಗೆ, ಸ್ವೇಟರ್‌, ಜರ್ಕಿನ್‌ ಹಾಗೂ ಶಾಲು ಹಾಕಿಕೊಂಡು ವಾಕಿಂಗ್ಗೆ ಹೊರಟಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವೃದ್ಧರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ.

ನದಿ ತಟಗಳಲ್ಲಿರುವ ಗ್ರಾಮಗಳಲ್ಲಿ ಬೆಳಿಗ್ಗೆ 11 ಗಂಟೆಯಾದರೂ ಚಳಿ ಕಡಿಮೆಯಾಗುತ್ತಿಲ್ಲ. ಸಂಜೆ 4 ಗಂಟೆಗೆ ವೇಳೆಗೆ ಮತ್ತೆ ಚಳಿ ಆವರಿಸಿಕೊಳ್ಳುತ್ತಿದೆ. ಹೀಗಾಗಿ ಜನರು ಒಣ ಹುಲ್ಲು ಹಾಗೂ ಕಸಕ್ಕೆ ಬೆಂಕಿ ಇಟ್ಟು ಕಾಯಿಸಿಕೊಳ್ಳುತ್ತಿದ್ದಾರೆ.

ಕಂಕಣ ಸೂರ್ಯಗ್ರಹಣದ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಬೆಳಿಗ್ಗೆ ಹಾಗೂ ಮಧ್ಯಾಹ್ನ ಮಳೆ ಹನಿಗಳು ಉದುರಿದ್ದವು. ಶುಕ್ರವಾರ ಹಾಗೂ ಶನಿವಾರ ಒಂದೇ ರೀತಿಯ ವಾತಾವರಣ ಇದ್ದ ಕಾರಣ ಅಸ್ತಮಾ ಹಾಗೂ ಶ್ವಾಸಕೋಶದ ಸೋಂಕು ಇರುವವರು ಕಿರಿಕಿರಿ ಅನುಭವಿಸಿದರು.

‘ಜಿಲ್ಲೆಯಲ್ಲಿ ಮೂರು ದಿನಗಳಿಂದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ ಇದೆ. ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್‌ ವರೆಗೂ ಕುಸಿಯುವ ಸಾಧ್ಯತೆ ಇದೆ’ ಎಂದು ಬೀದರ್‌ನ ಹವಾಮಾನ ತಜ್ಞ ಬಸವರಾಜ ಬಿರಾದಾರ ಹೇಳುತ್ತಾರೆ.

‘ಈಶಾನ್ಯ–ಪೂರ್ವ ದಿಕ್ಕಿನಿಂದ ಬಲವಾದ ಶೀತಗಾಳಿ ಬೀಸುತ್ತಿದೆ. ಗಾಳಿಯಲ್ಲಿ ಸಣ್ಣಪ್ರಮಾಣದಲ್ಲಿ ದೂಳು ಸಹ ಇದೆ. ಅಸ್ತಮಾ ರೋಗಿಗಳಿಗೆ ಸಮಸ್ಯೆಯನ್ನು ಉಂಟು ಮಾಡಲಿದೆ. ರೋಗಿಗಳು ಬೆಳಗಿನ ಅವಧಿಯಲ್ಲಿ ಮನೆಯಿಂದ ಹೊರಗೆ ಬರದಿರುವುದೇ ಸೂಕ್ತ’ ಎನ್ನುತ್ತಾರೆ ಅವರು.

‘ಡಿಸೆಂಬರ್‌ 29ರಿಂದ ಜನವರಿ 3ರ ವರೆಗೆ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗಲಿದೆ. ಆದರೆ ನಂತರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ. ಹೊಸ ವರ್ಷದಲ್ಲಿ 15 ದಿನ ಚಳಿ ಮುಂದುವರಿಯಲಿದೆ’ ಎಂದು ಬೆಂಗಳೂರಿನ ಕೆಎಸ್‌ಎನ್‌ಡಿಎಂ ಯೋಜನಾ ವಿಜ್ಞಾನಿ ಗಂಗಾಧರ ಮಠ ಹೇಳುತ್ತಾರೆ.

ನಗರ ಪ್ರದೇಶದಲ್ಲಿ ಜನರು ಕಸಕ್ಕೆ ಬೆಂಕಿ ಹಚ್ಚಿ ಚಳಿಯಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಚಹಾ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತು ಚಹಾ ಸೇವಿಸುತ್ತಿದ್ದಾರೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಬೆಳಿಗ್ಗೆ ಚಹಾ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು