ಹುಚ್ಚುನಾಯಿ ಕಡಿತ: 10 ಜನರಿಗೆ ಗಾಯ

ಚಿಟಗುಪ್ಪ: ಹುಚ್ಚು ಹಿಡಿದಿದೆ ಎನ್ನಲಾದ ಒಂದೆರಡು ನಾಯಿಗಳು ಮಕ್ಕಳು ವೃದ್ಧರು ಸೇರಿ 10 ಜನರಿಗೆ ಮನ ಬಂದಂತೆ ಕಚ್ಚಿ ತೀವ್ರ ಗಾಯಗೊಳಿ ಸುತ್ತಿರುವ ಘಟನೆ ಪಟ್ಟಣದಲ್ಲಿ ಒಂದು ವಾರದಿಂದ ನಡೆಯುತ್ತಿದೆ.
ಪಟ್ಟಣದ ಹುಸೇನಿ ಆಲಮ್, ಕುಡಂಬಲ್ ರಸ್ತೆ, ಭವಾನಿ ದೇಗುಲ ಇತರೆಡೆಗಳಲ್ಲಿ ಕಾಣಿಸಿಕೊಂಡ ನಾಯಿಗಳು ರಸ್ತೆ ಮೇಲೆ ಸಂಚರಿಸುವ ಪಾದಚಾರಿಗಳಿಗೆ, ಬೈಕ್ ಸವಾರರಿಗೆ ಎಲ್ಲೆಂದರಲ್ಲಿ ಕಚ್ಚುತ್ತಿವೆ.
ಕೆಲವರ ಕಾಲು ಹಿಡಿದು ಕಚ್ಚಿವೆ, ಕೆಲವರ ಮೈ ಮೇಲೆ ಎರಗಿ ಕಚ್ಚಿವೆ. ಕಳೆದ ಒಂದು ವಾರದ ಅವಧಿಯಲ್ಲಿ ಒಟ್ಟು 10 ಜನರು ಹುಚ್ಚುನಾಯಿ ಕಡಿತದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಬ್ರಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ವಿಜಯ ಹಿರಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ನಾಯಿಯಿಂದ ಕಚ್ಚಿಸಿಕೊಂಡು ಗಾಯಗೊಂಡಿದ್ದವರಿಗೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ರೇಬಿಸ್ ರೋಗ ನಿರೋಧಕ ಲಸಿಕೆ ಹಾಕಿ ಚಿಕಿತ್ಸೆ ನೀಡಿದರು. ಆದರೆ ನಾಯಿಗಳು ಸದ್ಯ ಎಲ್ಲಿವೆ ಎಂಬುದು ಗೊತ್ತಾಗಿಲ್ಲ. ಅವು ಇತರೆ ನಾಯಿಗಳಿಗೆ, ಜನರಿಗೆ ಮತ್ತು ಪ್ರಾಣಿಗಳಿಗೆ ಕಚ್ಚದಂತೆ ನೋಡಿಕೊಳ್ಳಲು ಹುಚ್ಚು ಹಿಡಿದಿರುವ ನಾಯಿಗಳಿಗೆ ಪತ್ತೆ ಮಾಡಲು ಪುರಸಭೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ಪುರಸಭೆಗೆ ಈಗಾಗಲೇ ಹುಚ್ಚುನಾಯಿಗಳನ್ನು ಹಿಡಿಯುವುದಕ್ಕೆ ಪೌರಕಾರ್ಮಿಕರು, ಇತರ ಪರಿಣತರನ್ನು ಕಳುಹಿಸಲು ಕೋರಲಾಗಿದೆ. ಅವರೊಂದಿಗೆ ನಮ್ಮ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಪಟ್ಟಣದ ಪಶು ಆಸ್ಪತ್ರೆ ವೈದ್ಯ ಡಾ. ಎಸ್.ಬಿ. ಗೋಪಾ ತಿಳಿಸಿದ್ದಾರೆ.
‘ಪಶು ವೈದ್ಯರಿಗೆ ಪುರಸಭೆಯಿಂದ ಎಲ್ಲ ಸೌಲಭ್ಯ ಒದಗಿಸಲಾಗುತ್ತದೆ. ಈ ಹಿಂದೆಯು ಹುಚ್ಚುನಾಯಿಗಳಿಗೆ ಹಾಗೂ ಇತರ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಾಗಿ ವಿಶೇಷವಾದ ಅನುದಾನವೂ ಪುರಸಭೆಯಿಂದ ಬಿಡುಗಡೆ ಮಾಡಲಾಗಿತ್ತು. ಅದು ಬಳಕೆ ಮಾಡಿಕೊಳ್ಳುವಲ್ಲಿ ವೈದ್ಯರು ವಿಫಲರಾಗಿದ್ದಾರೆ. ಈಗಲಾದರೂ ಎಚ್ಚೆತ್ತು ತಕ್ಷಣ ಹುಚ್ಚುನಾಯಿಗಳಿಗೆ ಮತ್ತು ಇತರ ನಾಯಿಗಳಿಗೆ ಚಿಕಿತ್ಸೆ ನೀಡಿ ನಾಗರಿಕರ ಜೀವ ರಕ್ಷಣೆ ಮಾಡಬೇಕು’ ಎಂದು ಮುಖ್ಯಾಧಿಕಾರಿ ಹುಸಾಮೋದ್ದೀನ್ ಹೇಳಿದರು.
ಔಷಧ ಲಭ್ಯ: ನಾಯಿ ಕಡಿತಕ್ಕೆ ನೀಡುವ ರೇಬಿಸ್ ರೋಗ ನಿರೋಧಕ ಲಸಿಕೆ ಅಗತ್ಯ ಪ್ರಮಾಣದಲ್ಲಿ ಲಭ್ಯ ಇದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದಲ್ಲಿ ಮಾತ್ರ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜಯ ಹಿರಾಸ್ಕರ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.