ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ವರದಿ ಜಾರಿಗಾಗಿ ಬಂದ್‌ ಯಶಸ್ವಿ

ಮಾದಿಗ ದಂಡೋರ ಹೋರಾಟ ಸಮಿತಿ ಮೆರವಣಿಗೆ: ಮೊಳಗಿದ ಕ್ರಾಂತಿ ಗೀತೆಗಳು, ಸಂಪುಟದಿಂದ ಸಚಿವ ಪ್ರಭು ಚವಾಣ್‌ ಕೈಬಿಡಲು ಆಗ್ರಹ
Last Updated 12 ಅಕ್ಟೋಬರ್ 2021, 0:50 IST
ಅಕ್ಷರ ಗಾತ್ರ

ಬೀದರ್: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಹಾಗೂ ಪ್ರಭು ಚವಾಣ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಮಾದಿಗ ದಂಡೋರ ಹೋರಾಟ ಸಮಿತಿ ಸೋಮವಾರ ಕರೆ ನೀಡಿದ್ದ ಬೀದರ್ ಬಂದ್ ಯಶಸ್ವಿಯಾಯಿತು.

ನಗರದಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು. ಆದರೂ, ಸಮಿತಿಯ ಕಾರ್ಯಕರ್ತರು ಬೆಳಿಗ್ಗೆ ನಗರದಲ್ಲಿ ಸಂಚರಿಸಿ ಧ್ವನಿವರ್ಧಕಗಳಲ್ಲಿ ಅಂಗಡಿ ಬಂದ್ ಮಾಡಲು ಮನವಿ ಮಾಡಿದರು.

ಬಸ್, ಆಟೋ, ದ್ವಿಚಕ್ರ ವಾಹನಗಳ ಸಂಚಾರ ಅಬಾಧಿತವಾಗಿತ್ತು. ಆದರೆ, ಅವುಗಳ ಸಂಖ್ಯೆ ಮಾತ್ರ ಎಂದಿಗಿಂತ ವಿರಳವಾಗಿತ್ತು. ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬಂದ್ ಸಂಪೂರ್ಣ ಶಾಂತಿಯುತವಾಗಿತ್ತು.

ಮಧ್ಯಾಹ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಮಾದಿಗ ದಂಡೋರ ಹೋರಾಟ ಸಮಿತಿ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಬಹಿರಂಗ ಸಭೆ ನಡೆಸಿದರು. ಹೈದರಾಬಾದ್ ತಂಡದವರು ಕ್ರಾಂತಿಗೀತೆ ಹಾಡಿದರು.ಕಾರ್ಯಕರ್ತರು ಘೋಷಣೆ ಕೂಗುತ್ತ ಮೆರವಣಿಗೆ ಆರಂಭಿಸಿ, ಭಗತ್‍ಸಿಂಗ್ ವೃತ್ತ, ತಹಶೀಲ್ದಾರ್ ಕಚೇರಿ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಅವರಿಗೆ ಸಲ್ಲಿಸಿದರು. ರಾಜ್ಯ ಸರ್ಕಾರ ಕೂಡಲೇ ಸದಾಶಿವ ಆಯೋಗದ ವರದಿಯನ್ನು ಒಪ್ಪಿಕೊಂಡು, ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಪ್ರಭು ಚವಾಣ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ತನಿಖೆ ನಡೆಸಬೇಕು. ಶ್ರೀನಿವಾಸಪುರ ಪರಿಶಿಷ್ಟ ಯುವತಿ ಮೇಲಿನ ಅತ್ಯಾಚಾರ, ಯಾದಗಿರಿ ಜಿಲ್ಲೆಯ ಚೌಡೇಶ್ವರಿ ಹಾಳದ ಮಹಿಳೆ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಬೇಡ ಜಂಗಮರಲ್ಲದವರಿಗೆ ನೀಡಿದ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದುಪಡಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದು ಸೇರಿ 12 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ಬಿ. ದಂಡೋರ, ಕಾರ್ಯಾಧ್ಯಕ್ಷ ಫರ್ನಾಂಡೀಸ್ ಹಿಪ್ಪಳಗಾಂವ್, ಪ್ರಧಾನ ಕಾರ್ಯದರ್ಶಿ ಜೆ.ಎಂ. ದೇವರಾಜ, ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಹೆಗಡೆ, ಹಿರಿಯ ಮುಖಂಡ ಚಂದ್ರಕಾಂತ ಹಿಪ್ಪಳಗಾಂವ್, ಮಾದಿಗ ಮೀಸಲಾತಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ, ಬಿ.ಎ. ಕೇಶವಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟರಾವ್ ಸಿಂಧೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೋಹಿದಾಸ್ ಘೋಡೆ, ಬಿಡಿಎ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ವಿವಿಧ ಸಂಘಟನೆಗಳ ಮುಖಂಡರಾದ ರಮೇಶ ಡಾಕುಳಗಿ, ಬಾಬುರಾವ್ ಪಾಸ್ವಾನ್, ವಹಿದ್ ಲಖನ್, ಅಭಿ ಕಾಳೆ, ಬಾಬುರಾವ್ ಹೊನ್ನಾ, ಆರ್.ಪಿ. ರಾಜಾ, ಮನ್ಸೂರ್ ಅಹಮ್ಮದ್ ಖಾದ್ರಿ, ಅಂಬಣ್ಣ ಅರೋಳಿಕರ್, ನಾಗರಾಜ ಕೊಡೆಗೆಹಳ್ಳಿ, ವೀಣಾ ರಾಮ, ಲಿಂಗರಾಜ, ಸಂಬಣ್ಣ, ರಮೇಶ ಕಟ್ಟಿತೂಗಾಂವ, ಮಹೇಶ ಗೋರನಾಳಕರ್, ಅಂಬಾದಾಸ ಗಾಯಕವಾಡ, ಶ್ರೀಪತರಾವ್ ದೀನೆ, ಅರುಣ ಪಟೇಲ್ ಮೊದಲಾದವರು ಪಾಲ್ಗೊಂಡಿದ್ದರು. ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಮಾದಿಗ ಸಮುದಾಯದ ಜನ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT