ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಮಹಾ ಶಿವರಾತ್ರಿ; ಭಕ್ತಿ ಪ್ರಿಯನಿಗೆ ವಿಶೇಷ ಪೂಜೆ

ಸರತಿ ಸಾಲಿನಲ್ಲಿ ನಿಂತು ಶಿವಲಿಂಗ ದರ್ಶನ ಪಡೆದ ಭಕ್ತರು
Last Updated 11 ಮಾರ್ಚ್ 2021, 14:50 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಶಿವ ದೇಗುಲಗಳಲ್ಲಿ ಗುರುವಾರ ಮಹಾ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಭಕ್ತರು ಬೆಳಗಿನ ಜಾವ ಶಿವಲಿಂಗಕ್ಕೆ ಜಲಾಭಿಷೇಕ, ಹಣ್ಣಿನ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿದರು. ಶಿವಲಿಂಗವನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಭಕ್ತಿ ಪ್ರಿಯನಿಗೆ ತೆಂಗಿನ ಕಾಯಿ ಒಡೆದು ಕರ್ಪೂರ ದೀಪ ಬೆಳಗಿಸಿ ಕೃತಾರ್ಥರಾದರು.

ನಗರದ ಪಾಪನಾಶ ಮಂದಿರದಲ್ಲಿ ಭಕ್ತರ ದಟ್ಟಣೆ ಇತ್ತು. ಧರ್ಮದತ್ತಿ ಇಲಾಖೆಯಿಂದ ಜನಜಂಗುಳಿ ನಿಯಂತ್ರಿಸಲು ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಪೊಲೀಸರನ್ನು ನಿಯೋಜಿಸಲಾಗಿತ್ತು ಗರ್ಭಗುಡಿಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಹೀಗಾಗಿ ಭಕ್ತರು ನಂದಿ ವಿಗ್ರಹದ ಬಳಿಯೇ ಕೈಮುಗಿದ ಭಕ್ತಿ ಸಮರ್ಪಿಸಿದರು.

ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದವರು ಗರ್ಭಗುಡಿಯ ಕಿಟಕಿಯಿಂದ ಶಿವಲಿಂಗ ದರ್ಶನ ಪಡೆದರು. ದಾನಿಗಳು ಭಕ್ತರಿಗೆ ಬಾಳೆ ಹಣ್ಣು, ಶಿರಾ ವಿತರಿಸಿದರು.

ಪಾಪನಾಶ ಮಂದಿರದ ಆವರಣದಲ್ಲಿರುವ ರಾಮತೀರ್ಥ ಹೊಂಡದಲ್ಲಿ ಮಕ್ಕಳು ಈಜಾಡಿ ಸಂಭ್ರಮಿಸಿದರು. ಆವರಣದಲ್ಲಿ ವಿಭೂತಿ, ಕುಂಕುಮ, ಅಷ್ಟಗಂಧ, ಕರ್ಪೂರ, ಅಗರಬತ್ತಿ, ತೆಂಗಿನಕಾಯಿ, ಬತಾಸು, ದೇವರ ಫೊಟೊಗಳು ಹಾಗೂ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಸಾಮೂಹಿಕ ಇಷ್ಟಲಿಂಗ ಪೂಜೆ
ರಾಷ್ಟ್ರೀಯ ಬಸವ ದಳದ ವತಿಯಿಂದ ಓಲ್ಡ್‌ಸಿಟಿಯ ಬಸವ ಮಂಟಪದಲ್ಲಿ ಮಾತೆ ಸತ್ಯದೇವಿ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿದರೆ, ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಅಕ್ಕ ಗಂಗಾಂಬಿ ಪಾಟೀಲ ನೇತೃತ್ವದಲ್ಲಿ ಶರಣ ಉದ್ಯಾನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ನಡೆಯಿತು.

ಸಾತ್ವಿಕ ಜೀವನಕ್ಕೆ ರಾಜಯೋಗ ಅಗತ್ಯ
ಬೀದರ್‌:
‘ಆತ್ಮಸ್ಥೈರ್ಯ ಹಾಗೂ ಸಾತ್ವಿಕ ಜೀವನಕ್ಕಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆಯುವ ರಾಜಯೋಗ ಶಿಬಿರದಲ್ಲಿ ಭಾಗವಹಿಸಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹೇಳಿದರು.

ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಕೇಂದ್ರ ಪಾವನಧಾಮ ಅವರಣದಲ್ಲಿ ಗುರುವಾರ ಆಯೋಜಿಸಿದ್ದ ಮಹಾ ಶಿವರಾತ್ರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧರ್ಮ ರಹಿತ, ಜಾತಿ ರಹಿತ, ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ, ಶಾಂತಿ ಹಾಗೂ ಸಹಬಾಳ್ವೆ ದಯಪಾಲಿಸುವ ಈಶ್ವರೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

‘ಎಲ್ಲ ಧರ್ಮ ಹಾಗೂ ಸಮುದಾಯಗಳನ್ನು ಗೌರವಿಸುವ ವಿಶ್ವಮಾನ್ಯ ಸಂಸ್ಥೆಯಾದ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮಕ್ಕೆ ಬೂಡಾದಿಂದ ನಿವೇಶನ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿ, ‘ಬ್ರಹ್ಮಕುಮಾರಿ ಕೇಂದ್ರದಲ್ಲಿ ಶಿಸ್ತು, ಗೌರವ ಭಾವ, ಸೌಜನ್ಯ ಮನೆ ಮಾಡಿದೆ’ ಎಂದು ಬಣ್ಣಿಸಿದರು.

ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ‘ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಎಲ್ಲ ಧರ್ಮಗಳನ್ನು ಸಮನಾಗಿ ಗೌರವಿಸುತ್ತದೆ. ವಿಶ್ವದ 146 ದೇಶಗಳಲ್ಲಿ ಕೇವಲ ಮಹಿಳೆಯರೇ ಮುಂದಾಳತ್ವ ವಹಿಸಿಕೊಂಡು ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಸಾನ್ನಿಧ್ಯ ವಹಿಸಿದ್ದರು. ಕೇಂದ್ರದ ಪ್ರವರ್ತಕ ಬಿ.ಕೆ ಪ್ರಭಾಕರ್ ಮಾತನಾಡಿದರು. ಬಿ.ಕೆ ಗುರುದೇವಿ, ಬಿ.ಕೆ ಮಹಾನಂದಾ ಇದ್ದರು.

ಉಷಾ ಪ್ರಭಾಕರ್ ಸಾರಥ್ಯದ ನೂಪುರ ನೃತ್ಯ ಅಕಾಡೆಮಿ ಮಕ್ಕಳು ಶಿವನ ನೃತ್ಯ ಪ್ರದರ್ಶಿಸಿದರು. ಬಿ.ಕೆ ವಿಜಯಲಕ್ಷ್ಮಿ ಬಹೆನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT