ಮಂಗಳವಾರ, ಮಾರ್ಚ್ 9, 2021
30 °C
ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಸೂಚನೆ

ಖಾಲಿ ನಿವೇಶನದಲ್ಲಿ ಸ್ವಚ್ಛತೆ ಕಾಪಾಡಿ: ನಾರಾಯಣರಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಸವಕಲ್ಯಾಣ: ‘ಪಟ್ಟಣದಲ್ಲಿ ಖಾಲಿ ನಿವೇಶನಗಳಲ್ಲಿ ಹುಲ್ಲು, ಮುಳ್ಳುಕಂಟಿಗಳು ಬೆಳೆದಿವೆ. ಸ್ವಚ್ಛತೆ ಕಾಪಾಡುವಂತೆ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಬೇಕು’ ಎಂದು ಶಾಸಕ ಬಿ.ನಾರಾಯಣರಾವ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

`ಉದ್ಯಾನಕ್ಕಾಗಿ ಜಾಗ ಮತ್ತು ಸಿ.ಎ ಸೈಟ್ ಕಾಯ್ದಿರಿಸಿ ಅದರ ದಾಖಲೆಗಳನ್ನು ನಗರಸಭೆಗೆ ಸಲ್ಲಿಸದೆ ನಿವೇಶನ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಉದ್ಯಾನದ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೆ ಅವುಗಳನ್ನು ನೆಲಸಮ ಮಾಡಬೇಕು’ ಎಂದರು.

 ‘ರಸ್ತೆ, ಚರಂಡಿ ನಿರ್ಮಾಣಕ್ಕೆ ಟೆಂಡರ್ ಪಡೆದು ನಿಗದಿತ ಸಮಯಕ್ಕೆ ಕೆಲಸ ನಿರ್ವಹಿಸದವರ ವಿರುದ್ಧ ಪ್ರಕರಣ ದಾಖಲಿಸಬೇಕು' ಎಂದು ತಾಕೀತು ಮಾಡಿದರು.

`ಪ್ರತಿ ವಾರ್ಡ್‌ನಲ್ಲಿ ಬಾಕಿ ಉಳಿದ ಕೆಲಸ ಮತ್ತು ಸಮಸ್ಯೆಗಳ ಬಗ್ಗೆ ನಗರಸಭೆ ಎಂಜಿನಿಯರ್‌ಗಳು ಎರಡು ವಾರದಲ್ಲಿ ಪಟ್ಟಿ ಸಿದ್ಧಪಡಿಸಬೇಕು.  ನಗರಸಭೆಯ ಸೌಲಭ್ಯಗಳು, ಸಾಲದ ಯೋಜನೆ ಹಾಗೂ ಮಂಜೂರಾದ ಮನೆಗಳ ಮಾಹಿತಿ ಸದಸ್ಯರಿಗೆ ಹಾಗೂ ಇತರ ಜನಪ್ರತಿನಿಧಿಗಳಿಗೆ ಸುಲಭವಾಗಿ ದೊರಕುವುದಿಲ್ಲ. ಆದರೆ, ಈ ಬಗ್ಗೆ ದಲ್ಲಾಳಿಗಳ ಹತ್ತಿರ ಸಂಪೂರ್ಣ ವಿವರ ಇರುತ್ತದೆ. ಇಂಥ ವ್ಯವಸ್ಥೆ ಸಲ್ಲದು' ಎಂದು ಕಿಡಿ ಕಾರಿದರು.

`ಅಟೊ ನಗರದಲ್ಲಿ ಟಿಪ್ಪುಸುಲ್ತಾನ್ ವೃತ್ತ ನಿರ್ಮಿಸುವ ಬಗ್ಗೆ ಹಿಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿ ಒದಗಿಸಿದರೆ ಅದಕ್ಕಾಗಿ ಅನುದಾನ ಒದಗಿಸಲಾಗುವುದು. ಪಟ್ಟಣದಲ್ಲಿ ಇನ್ನೂ ಎರಡು ಇಂದಿರಾ ಕ್ಯಾಂಟೀನ್ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು' ಎಂದು ಹೇಳಿದರು.

ಸದಸ್ಯ ರವಿ ಗಾಯಕವಾಡ, `ನಗರೋತ್ಥಾನ ಯೋಜನೆಯಲ್ಲಿನ ಕುಂಬಾರಪಾಳಿ ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರ ಬಾಕಿ ಇರುವ ವೇತನ ಪಾವತಿಸಬೇಕು' ಎಂದು ಆಗ್ರಹಿಸಿದರು.

ಅನಿಲ ಕುಲಕರ್ಣಿ ಮಾತನಾಡಿ, `ಪಟ್ಟಣದ ನಿವಾಸಿಗಳನ್ನು ಮಾತ್ರ ಪೌರಕಾರ್ಮಿಕರನ್ನಾಗಿ ನೇಮಿಸಿಕೊಳ್ಳಬೇಕು. 20 ಕಿ.ಮೀ ದೂರದಿಂದ ಬರುವವರಿಂದ ಕೆಲಸ ಆಗುವುದಿಲ್ಲ' ಎಂದರು.

ರವಿ ಕೊಳಕೂರ, `18 ನೇ ವಾರ್ಡ್‌ನ ಉದ್ಯಾನದಲ್ಲಿ ಪೈಪ್‌ಗಳನ್ನು ಇಡಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಅಗುತ್ತಿದೆ. ಶೀಘ್ರ ಅವುಗಳನ್ನು ತೆರವುಗೊಳಿಸಬೇಕು' ಎಂದು ಒತ್ತಾಯಿಸಿದರು.

`24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ ಎಲ್ಲ ಓಣಿಗಳಲ್ಲಿ ಪೈಪ್‌ಲೈನ್‌ ಅಳವಡಿಸಿಲ್ಲ' ಎಂದು ಮುಜಮಿಲ್ ಸಗ್ಗೆ, ಪೇಶಮಾಮ್ ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ಅಜರಅಲಿ ನವರಂಗ ಮಾತನಾಡಿ, ` ಪ್ರತಿ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು' ಎಂದರು.

ಪೌರಾಯುಕ್ತ ಸುರೇಶ ಬಬಲಾದ ಸಭೆಯ ನಿರ್ಣಯಗಳನ್ನು ಓದಿದರು. ಅಕ್ತರ್ ಬಾಗ್, ಹಾಜರಾಬಿ ಇದ್ದರು. ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಸ್ವಚ್ಛ ಮತ್ತು ಸುಂದರ ಬಸವಕಲ್ಯಾಣ ಆಗಬೇಕು. ಅದಕ್ಕಾಗಿ ರಸ್ತೆ, ಚರಂಡಿ ವ್ಯವಸ್ಥೆ ಉತ್ತಮಗೊಳಿಸಲು, ಉದ್ಯಾನಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ
-ಬಿ.ನಾರಾಯಣರಾವ್, ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು