ಭಾನುವಾರ, ಜನವರಿ 19, 2020
20 °C

ಮಾಣಿಕಪ್ರಭುಗಳ 202ನೇ ಜನ್ಮದಿನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಸಮೀಪದ ಮಾಣಿಕನಗರದಲ್ಲಿ ದತ್ತ ಜಯಂತಿ ಮತ್ತು ಮಾಣಿಕಪ್ರಭುಗಳ 202ನೇ ಜನ್ಮದಿನೋತ್ಸವ ಕಾರ್ಯಕ್ರಮ ಲಕ್ಷಾಂತರ ಭಕ್ತರ ಮಧ್ಯೆ ಗುರುವಾರ ಸಂಭ್ರಮದಿಂದ ಜರುಗಿತು.

ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಮಹಾರಾಜರ ಸಾನ್ನಿಧ್ಯದಲ್ಲಿ ಬೆಳಿಗ್ಗೆ ಶಹನಾಯಿ ವಾದನ, ನಂತರ ನೂರಾರು ವೈದಿಕರಿಂದ ಮಾಣಿಕಪ್ರಭುಗಳ ಸಂಜೀವಿನಿ ಸಮಾಧಿಗೆ ಮಹಾರುದ್ರಾಭಿಷೇಕ ಹಾಗೂ ಕಾಕಡಾರತಿ ನೆರವೇರಿತು.

ಮಧ್ಯಾಹ್ನ ಶ್ರೀಗಳ ಪಾದಪೂಜೆ ಸಂಜೆ ಪ್ರಭುಗಳ ರಾಜೋಪಚಾರ ಸೇವೆ ಮತ್ತು ನಾಲ್ಕು ವೇದ, ಪುರಾಣ ಶಾಸ್ತ್ರ, ವ್ಯಾಕರಣ, ಮಿಮಾಂಸೆ, ನೃತ್ಯ, ಸಂಗೀತ ಹಾಗೂ ವಾದ್ಯ ಸೇವೆಗಳು ಜರುಗಿದವು.

ಮಾಣಿಕನಗರ ಗ್ರಾಮಸ್ಥರಿಂದ ರಾತ್ರಿ ಮಾಧುಕರಿ ಸೇವೆ ಜರುಗಿತು.

ದತ್ತ ಕ್ಷೇತ್ರದಲ್ಲಿ ಮಧುಕರಿಗೆ ವಿಶೇಷ ಮಹತ್ವವಿದೆ. ಅಂದಿನ ಕಾಲದಲ್ಲಿ ಮಾಣಿಕಪ್ರಭುಗಳು ಎಂದೂ ಮಧುಕರಿ ಊಟ ಬಿಟ್ಟು, ಬೇರೆ ಊಟ ಮಾಡುತ್ತಿರಲ್ಲಿಲ್ಲ. ನಿತ್ಯ ಅವರ ಇಬ್ಬರು ಶಿಷ್ಯರು ಮಧುಕರಿ ಬೇಡಿ ತರುತ್ತಿದ್ದರು.

ಶ್ರೀಗಳು ಮಧುಕರಿಯಲ್ಲಿ ಬಂದರೊಟ್ಟಿ, ಪಲ್ಯ, ಚಟ್ನಿ-ಚಪಾತಿ, ಪುಂಡಿ ಪಲ್ಯ, ಹಿಂಡಿ-ಖಾರ ಮಾತ್ರ ಶ್ರೀ ದತ್ತನಿಗೆ ನೈವೈದ್ಯ ಮಾಡಿ, ಅದನ್ನೇ ರಾತ್ರಿ 11 ಗಂಟೆಯ ಬಳಿಕ ದತ್ತ ಪ್ರಸಾದ ಎಂದು ಸ್ವೀಕರಿಸುತ್ತಿದ್ದರು. ಇಂದಿಗೂ ನಿತ್ಯ ಮಧುಕರಿ ನೈವೈದ್ಯವನ್ನು ಶ್ರೀ ಮಾಣಿಕಪ್ರಭುಗಳ ಸಮಾಧಿಗೆ ಅರ್ಪಿಸಿದ ನಂತರ ಜಾತ್ರೆಗೆ ಬಂದಂತಹ ಭಕ್ತರಿಗೆ ದಾಸೋಹದಲ್ಲಿ ಅದನ್ನು ವಿತರಿಸಲಾಗುತ್ತಿದೆ.

ಮಾಣಿಕನಗರ ಗ್ರಾಮಸ್ಥರು ತಯಾರಿಸಿದ ರೊಟ್ಟಿ, ಪಲ್ಯ ಸವಿಯಲು ಸಾವಿರಾರು ಭಕ್ತರು ಸರತಿಯಲ್ಲಿ ಬಂದು ಮಧುಕರಿ ಪ್ರಸಾದ ಸೇವಿಸಿದರು. ರಾತ್ರಿ8 ರಿಂದ ಬೆಳಿಗ್ಗೆ 5 ರವರೆಗೆ ಮಹಾಪ್ರಸಾದ ದಾಸೋಹ ನಡೆಯಿತು.

ಸಂಸ್ಥಾನ ಅಧ್ಯಕ್ಷ ಆನಂದರಾಜ ಪ್ರಭುಗಳು, ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭುಗಳ ನೇತೃತ್ವದಲ್ಲಿ ಮಹಾಪ್ರಸಾದ ವಿತರಣೆ ನಡೆಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು