ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೊಟಂಗಿ ಹೊಡೆಯುವವರಿಗೆ ಯಾರೂ ಹೆಣ್ಣು ಕೊಡಲ್ಲ: ವ್ಯಂಗ್ಯವಾಡಿದ ಸಚಿವ ಖೂಬಾ

Published 10 ಏಪ್ರಿಲ್ 2024, 8:29 IST
Last Updated 10 ಏಪ್ರಿಲ್ 2024, 8:29 IST
ಅಕ್ಷರ ಗಾತ್ರ

ಬೀದರ್‌: ‘ಎಲ್ಲದಕ್ಕೂ ಅಪ್ಪ, ಅಪ್ಪ ಎಂದು ಅಪ್ಪನ ನಂಬಿಕೊಂಡು, ಅಪ್ಪನ ಸಾಮರ್ಥ್ಯದ ಮೇಲೆ ಏನಾದರೂ ಸಾಧಿಸುತ್ತೇನೆ, ಅಪ್ಪನ ಆಸ್ತಿ ನೋಡಿ ಹೆಣ್ಣು ಕೊಡಿ ಎಂದು ಲೊಟಂಗಿ ಹೊಡೆಯುವವರಿಗೆ ಯಾರೂ ಕೂಡ ಹೆಣ್ಣು ಕೊಡಲ್ಲ. ಮದುವೆಯಾಗುವ ಹೆಣ್ಣು ಸಹ ಇಷ್ಟಪಡುವುದಿಲ್ಲ’ ಎಂದು ಬಿಜೆಪಿ ಅಭ್ಯರ್ಥಿಯೂ ಆದ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಕುರಿತು ವ್ಯಂಗ್ಯವಾಡಿದರು.

ನಗರದ ಸಿದ್ದಾರೂಢ ಮಠ ಸಮೀಪದ ರಿಂಗ್‌ರೋಡ್‌ ಬಳಿ ಏರ್ಪಡಿಸಿದ್ದ ಬಿಜೆಪಿ–ಜೆಡಿಎಸ್‌ ಜಂಟಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ, ಬೀದರ್‌ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳನ್ನು ಜನರೆಲ್ಲರೂ ನೋಡಿದ್ದಾರೆ. ಆದರೆ, ಆತ್ಮಸಾಕ್ಷಿಯಿಲ್ಲದ ಸಚಿವ ಈಶ್ವರ ಖಂಡ್ರೆ ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಅವರ ಸುಳ್ಳು, ಅವರ ಅಪಪ್ರಚಾರವೆ ಅವರ ಮಗನ ಸೋಲಿಗೆ ಕಾರಣವಾಗಲಿದೆ ಎಂದರು.

ಬೀದರ್‌ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಶ್ರಮಿಸಿದ್ದು ನಾನು. ಈಶ್ವರ ಖಂಡ್ರೆ ಅವರು ಪೌರಾಡಳಿತ ಸಚಿವರಿದ್ದಾಗ ಈ ಕೆಲಸ ಮಾಡಲು ಆಗಿರಲಿಲ್ಲ. ಜಿಲ್ಲೆಗೆ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದರು.

ಈಶ್ವರ ಖಂಡ್ರೆ ಅವರು ಕುಟುಂಬ ರಾಜಕಾರಣ ಬೆಳೆಸಲು, ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರ, ಮುಖಂಡರ ಬಲಿಕೊಟ್ಟಿದ್ದಾರೆ. ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವುದಿಲ್ಲ ಎಂದು ಹೇಳಿದರು.

ಜೆಡಿಎಸ್‌ ಮುಖಂಡರೂ ಆದ ಮಾಜಿಸಚಿವ ಬಂಡೆಪ್ಪ ಕಾಶೆಂಪುರ್‌ ಮಾತನಾಡಿ, ಎನ್.ಡಿ.ಎ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಗೆಲ್ಲಿಸಿ, ದೇವೆಗೌಡರ ಮಾತು ಉಳಿಸಿಕೊಳ್ಳುತ್ತೇವೆ. ಬಿಜೆಪಿಯವರ ಜೊತೆ ನಮ್ಮ ಕಾರ್ಯಕರ್ತರು ಹಗಲಿರುಳು ದುಡಿದು ಗೆಲ್ಲಿಸುತ್ತೇವೆ. 10 ವರ್ಷ ಕಾಲ ಸಂಸದರಾಗಿ, ಕೇಂದ್ರ ಸಚಿವರಾಗಿ ಅನುಭವ ಇರುವ ಖೂಬಾ ಅವರಿಗೆ ಗೆಲ್ಲಿಸುವುದರಿಂದ ಬೀದರ್‌ ಲೋಕಸಭಾ ಕ್ಷೇತ್ರದ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಮುಖಂಡರಾದ ಎಮ್‌.ಜಿ.ಮುಳೆ, ಶಶಿ ಹೊಸಳ್ಳಿ, ಈಶ್ವರ ಸಿಂಗ್ ಠಾಕೂರ್, ಬಸವರಾಜ ಆರ್ಯ, ವಿಶ್ವನಾಥ ಪಾಟೀಲ ಮಾಡಗೂಳ, ಬಾಬುವಾಲಿ, ಬಸವರಾಜ ಪಾಟೀಲ ಅಷ್ಟೂರ, ಪೀರಪ್ಪ ಯರನಳ್ಳಿ, ಕಿರಣ ಪಾಟೀಲ, ರಾಜರಾಮ ಚಿಟ್ಟಾ, ಉಪೇಂದ್ರ ದೇಶಪಾಂಡೆ, ಅಶೋಕ ಕೋಡಗೆ, ಗಣೇಶ ಭೋಸ್ಲೆ, ಸಂಗಮೇಶ ಹುಮನಾಬಾದೆ, ಜಗನ್ನಾಥ ಜಮಾದಾರ, ಮಹೇಶ್ವರ ಸ್ವಾಮಿ, ಸುಭಾಷ ಮಡಿವಾಳ, ನಿತಿನ್‌ ನವಲಕೇಲೆ, ನವೀನ್‌ ಚಿಟ್ಟಾಕರ್‌, ನಿತಿನ್‌ ಕರ್ಪೂರ, ರಾಜು ಚಿಂತಾಮಣಿ, ಶಿವಕುಮಾರ ಭಾವಿಕಟ್ಟಿ, ಬೊಮಗೊಂಡ, ಬಸವರಾಜ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT