ಶುಕ್ರವಾರ, ಜುಲೈ 30, 2021
26 °C
ಕ್ಷೇಮಕ್ಕಾಗಿ ಯೋಗ ಕಾರ್ಯಾಗಾರ: ಪ್ರೊ. ವಿನಾಯಕ ಕೊತಮಿರ ಹೇಳಿಕೆ

ಯೋಗದಿಂದ ಮನೋಬಲ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನ್ನಳ್ಳಿ (ಜನವಾಡ): ನಿಯಮಿತ ಯೋಗದಿಂದ ಮನೋಬಲ ವೃದ್ಧಿಸುತ್ತದೆ ಎಂದು ಪ್ರಾಚಾರ್ಯ ಪ್ರೊ. ವಿನಾಯಕ ಕೊತಮಿರ ಅಭಿಪ್ರಾಯಪಟ್ಟರು.

ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಕ್ಷೇಮಕ್ಕಾಗಿ ಯೋಗ ಕುರಿತು ಆನ್‍ಲೈನ್‍ನಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯೋಗವು ಮನುಷ್ಯನ ಮಾನಸಿಕ ಒತ್ತಡ ನಿವಾರಿಸುತ್ತದೆ. ಸಮಚಿತ್ತ ಕಾಯ್ದುಕೊಳ್ಳಲು ನೆರವಾಗುತ್ತದೆ. ದೈಹಿಕವಾಗಿ ಸದೃಢಗೊಳಿಸಿ ರೋಗಗಳಿಂದ ದೂರ ಇರಿಸುತ್ತದೆ ಎಂದು ತಿಳಿಸಿದರು.

ಓದಿನಲ್ಲಿ ಏಕಾಗ್ರತೆ ಕಾಯ್ದುಕೊಳ್ಳಲು ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ಯೋಗದ ಅನೇಕ ಪ್ರಕಾರಗಳು ಸ್ಮರಣ ಶಕ್ತಿ ಹೆಚ್ಚಳಕ್ಕೆ ಕೂಡ ಸಹಕಾರಿಯಾಗಿವೆ ಎಂದು ಹೇಳಿದರು.

ಧ್ಯಾನದಿಂದ ಶಾಂತಿ, ನೆಮ್ಮದಿ, ವಿಶ್ರಾಂತಿ ದೊರಕುತ್ತದೆ. ಪರೀಕ್ಷೆ ಸಮಯದಲ್ಲಿ ಯೋಗ ಹಾಗೂ ಧ್ಯಾನ ಮಾಡುವುದರಿಂದ ಒತ್ತಡ, ಆತಂಕ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಯೋಗಕ್ಕೆ ಬಹಳ ಮಹತ್ವ ಇದೆ ಎಂದು ಸಂಪನ್ಮೂಲ ವ್ಯಕ್ತಿ ಪ್ರೊ. ಗುರುನಾಥ ಮೂಲಗೆ ಹೇಳಿದರು.

ಯೋಗ ಮನಸ್ಸನ್ನು ಸದಾ ಉಲ್ಲಸಿತವಾಗಿಡುತ್ತದೆ. ಅಧ್ಯಯನ, ಕೆಲಸ, ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ ಊರ್ವಶಿ ಕೊಡ್ಲಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಮನ್ವಯಾಧಿಕಾರಿ ಡಾ. ಸಂಜೀವಕುಮಾರ ತಾಂದಳೆ ಇದ್ದರು.

ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು