ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ವರ್ಷಗಳಲ್ಲಿ ಮೋದಿ ಸಾಧನೆ ಶೂನ್ಯ: ಸಚಿವ ಎಂ.ಬಿ. ಪಾಟೀಲ

Published 28 ಏಪ್ರಿಲ್ 2024, 12:40 IST
Last Updated 28 ಏಪ್ರಿಲ್ 2024, 12:40 IST
ಅಕ್ಷರ ಗಾತ್ರ

ಬೀದರ್‌: ‘ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಶೂನ್ಯ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು.

‘ನನಗೆ ನೋಡಿ ಮತ ಹಾಕಬೇಡಿ, ಮೋದಿಯವರಿಗೆ ನೋಡಿ ಮತ ಹಾಕಿ ಎಂದು ಹಲವು ಬಿಜೆಪಿ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಆದರೆ, ಮೋದಿಯವರು ಹತ್ತು ವರ್ಷಗಳಲ್ಲಿ ಏನೂ ಮಾಡಿಲ್ಲ’ ಎಂದು ನಗರದಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೋದಿಯವರು ಹತ್ತು ವರ್ಷಗಳ ಅವಧಿ ಘೋಷಣೆಗಳಲ್ಲಿ ಕಳೆದು ಹೋಯಿತು. ‘ಅಚ್ಛೆ ದಿನ್‌’, ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ’, ‘ನಾ ಖಾವೂಂಗ ನಾ ಖಾನೆ ದುಂಗಾ’ ಎಂದು ಹೇಳುತ್ತಿದ್ದರು. ಈಗ ಏನಾಗಿದೆ. ಚುನಾವಣಾ ಬಾಂಡ್‌ ಕುರಿತು ಸೂಕ್ತ ತನಿಖೆ ನಡೆದರೆ ಇವರೆಲ್ಲ ಜೈಲಿಗೆ ಹೋಗುತ್ತಾರೆ ಎಂದು ತಿಳಿಸಿದರು.

ಮೋದಿಯವರ ಸಂಪೂರ್ಣ ಮುಖವಾಡ ಕಳಚಿದೆ. ಬಂಡವಾಳ ಬಯಲಾಗಿದೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ ರಾಜಕೀಯ ಮಾಡಲು ಹೊರಟಿದ್ದಾರೆ. ಹೆಣ್ಣು ಮಕ್ಕಳ ಮಾಂಗಲ್ಯದ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ನಮ್ಮ ದೇಶದಲ್ಲಲ್ಲ ಇಡೀ ಜಗತ್ತಿನಲ್ಲಿ ಮಾಂಗಲ್ಯದ ಬಗ್ಗೆ ಯಾವ ಪ್ರಧಾನಿಯೂ ಮಾತನಾಡಿಲ್ಲ. ಚುನಾವಣೆ ಅಸ್ತ್ರ ಮಾಡಿಕೊಳ್ಳಲು, ಮತಗಳ ಧ್ರುವೀಕರಣಕ್ಕೆ ಇದನ್ನೆಲ್ಲ ಮಾಡುತ್ತಿದ್ದಾರೆ. ಮೋದಿ ಎಷ್ಟೊಂದು ಹತಾಶರಾಗಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ರಾಜ್ಯದ ಎಲ್ಲ ಕಡೆ ಕಾಂಗ್ರೆಸ್‌ ಪರ ಉತ್ತಮವಾದ ವಾತಾವರಣ ಇದೆ. 20 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜವಾಹರಲಾಲ್‌ ನೆಹರೂ, ಲಾಲ್‌ ಬಹಾದ್ದೂರ ಶಾಸ್ತ್ರಿ, ಇಂದಿರಾ ಗಾಂಧಿ ಅವರ ಕಾಲದಲ್ಲಿ ಪಂಚವಾರ್ಷಿಕ ಸೇರಿದಂತೆ ಹಲವು ಯೋಜನೆಗಳು ಜಾರಿಗೆ ಬಂದವು. ಆದರೆ, ಬಿಜೆಪಿಯವರಿಗೆ ಏನೂ ಮಾಡಲಾಗಲಿಲ್ಲ. ಇಂದಿರಾ ಗಾಂಧಿಯವರು ಅಂಗವಿಕಲರ ವೇತನ, ವಿಧವಾ ವೇತನ, ರೇಷನ್‌ ವ್ಯವಸ್ಥೆ ಜಾರಿಗೆ ತಂದಿದ್ದರು. ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಇದ್ದಾಗ ದೇಶದ ರೈತರ ಸಾಲ ಮನ್ನಾ ಮಾಡಿದ್ದರು. ಬಸವರಾಜ ಬೊಮ್ಮಾಯಿ ಅವರು ಸಿಎಂ ಇದ್ದಾಗ ರಾಜ್ಯದಲ್ಲಿ ಒಂದೇ ಒಂದು ಮನೆ ಕಟ್ಟಿಸಿಕೊಡಲಿಲ್ಲ. ಆದರೆ, ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಬಸವರಾಜ ಬುಳ್ಳಾ, ಬಸವರಾಜ ಧನ್ನೂರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT