ಶನಿವಾರ, ಜುಲೈ 2, 2022
21 °C
ವಡಗಾಂವ್‍ನಲ್ಲಿ ಗ್ರಾಮ ವಾಸ್ತವ್ಯ; ಪ್ರದರ್ಶನ ಮಳಿಗೆಗಳ ಆಕರ್ಷಣೆ

ಕಂದಾಯ ಸಚಿವರಿಗೆ ಅದ್ದೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ವಡಗಾಂವ್‍ (ಡಿ) ಗ್ರಾಮಕ್ಕೆ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಲು ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು.

ಮಟ ಮಟ ಮಧ್ಯಾಹ್ನ ಸುಡು ಬಿಸಿಲಲ್ಲಿ ಆಗಮಿಸಿದ ಸಚಿವರನ್ನು ಟ್ರ್ಯಾಕ್ಟರ್ ಮೇಲೆ ಕೂಡಿಸಿ ಮೆರವಣಿಗೆ ಮಾಡಲಾಯಿತು. ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ಶಾಸಕ ಶರಣು ಸಲಗರ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸಚಿವರ ಜತೆ ಮೆರವಣಿಗೆಯಲ್ಲಿ ನಿಂತ ಜನರತ್ತ ಕೈ ಬೀಸಿದರು.

ಬಂಜಾರಾ ಮಹಿಳೆಯರ ನೃತ್ಯ, ಡೊಳ್ಳು ಕುಣಿತ, ಮಕ್ಕಳ ಕೋಲಾಟ ಮೆರವಣಿಗೆಯ ಸಂಭ್ರಮ ಹೆಚ್ಚಿಸಿತ್ತು. ಕಾರ್ಯಕರ್ತರ ಜಯ ಘೋಷ ಮುಗಿಲು ಮುಟ್ಟಿತು. ಮೆರವಣಿಗೆ ಮುಂದೆ ಬಿಜೆಪಿ ಕಾರ್ಯಕರ್ತರ ಬೈಕ್ ರ‍್ಯಾಲಿ ಗಮನ ಸೆಳೆಯಿತು.

ಮೆರವಣಿಗೆ ಬರುವ ದಾರಿಯಲ್ಲಿರುವ ಡಾ. ಅಂಬೇಡ್ಕರ್ ಹಾಗೂ ಬಸವೇಶ್ವರ ಪ್ರತಿಮೆಗೆ ಕಂದಾಯ ಸಚಿವರು ಮಾಲಾರ್ಪಣೆ ಮಾಡಿ ಗೌರವಿಸಿದರು.

ಸಚಿವರ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ವಡಗಾಂವ್ ಗ್ರಾಮದ ಎಲ್ಲೆಡೆ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ರಸ್ತೆಯ ಅಲ್ಲಲ್ಲಿ ರಂಗೋಲಿ ಬಿಡಿಸಲಾಗಿದೆ. ವಿವಿಧ ಗ್ರಾಮಗಳಿಂದ ಜನ ಆಗಮಿಸಿ ಸಚಿವರನ್ನು ಭೇಟಿ ಮಾಡಲು ಕುಳಿತ ದೃಶ್ಯ ಸಾಮಾನ್ಯವಾಗಿತ್ತು.

ಸಚಿವರ ಕಾಲಿಗೆ ಗಾಯ: ಮೊಟಕುಗೊಂಡ ಎತ್ತಿನ ಬಂಡಿ ಮೆರವಣಿಗೆ

ಔರಾದ್: ತಾಲ್ಲೂಕಿನ ವಡಗಾಂವ್ (ಡಿ) ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ ಅವರ ಸ್ವಾಗತಕ್ಕಾಗಿ ಸಿದ್ಧಪಡಿಸಲಾದ ಎತ್ತಿನ ಬಂಡಿ ಮೆರವಣಿಗೆ ಕೊನೆ ಕ್ಷಣದಲ್ಲಿ ಮೊಟಕುಗೊಳಿಸಲಾಯಿತು.

ಸಚಿವರ ಬರುವಿಕೆಗಾಗಿ ಬೆಳಿಗ್ಗೆ 11 ಗಂಟೆಯಿಂದಲೇ ಊರು ಹೊರಗೆ ಜನ ಸ್ವಾಗತಕ್ಕಾಗಿ ಸೇರಿದ್ದರು. ಮೆರವಣಿಗೆ ನಡೆಸಲು ಎತ್ತಿನ ಬಂಡಿ ಸಿದ್ಧಪಡಿಸಲಾಗಿತ್ತು. ಸಚಿವರು ಆಗಮಿಸುತ್ತಿದ್ದಂತೆ ಜನ ಜಂಗುಳಿ ಜಾಸ್ತಿಯಾಯಿತು. ಬಾಜಾ ಭಜಂತ್ರಿ ಧ್ವನಿ ಹೆಚ್ಚಾಗಿ ಎತ್ತುಗಳು ಹೆದರಿ ಓಡಲು ಆರಂಭಿಸಿದವು. ಇದರಿಂದ ಬಂಡಿ ಏರಿದ ಸಚಿವರು ಹಾಗೂ ಅಧಿಕಾರಿಗಳು ಕ್ಷಣ ಕಾಲ ಆತಂಕಗೊಂಡರು. ಇದೇ ವೇಳೆ ಕೆಳಗೆ ಕುಳಿತಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರ ಕಾಲು ಬಂಡಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ತಕ್ಷಣ ಅಲ್ಲಿದ್ದವರು ಅವರನ್ನು ಸುರಕ್ಷಿತವಾಗಿ ತೆಗೆದರು. ಆಗ ಬಂಡಿಯಲ್ಲಿದ್ದ ಎಲ್ಲರೂ ಕೆಳಗಿಳಿದು ನಂತರ ಟ್ರ್ಯಾಕ್ಟರ್ ಮೆರಣಿಗೆಯಲ್ಲಿ ಪಾಲ್ಗೊಂಡರು.

ಜನರನ್ನು ಆಕರ್ಷಿಸಿದ ಪ್ರದರ್ಶನ ಮಳಿಗೆ

ಔರಾದ್: ತಾಲ್ಲೂಕಿನ ವಡಗಾಂವ್‍ನಲ್ಲಿ ಶುಕ್ರವಾರ ನಡೆದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ವೇದಿಕೆ ಕಾರ್ಯಕ್ರಮದ ಬಳಿ ಹಾಕಲಾದ ವಿವಿಧ ಪ್ರದರ್ಶನ ಮಳಿಗೆಗಳು ಜನರನ್ನು ಆಕರ್ಷಿಸಿದವು.

ಪಶು ಸಂಗೋಪನೆ ಇಲಾಖೆಯಿಂದ ಹಾಕಲಾದ ಮಳಿಗೆಯಲ್ಲಿ ದೇವಣಿ ತಳಿ ಕರುಗಳು ಗಮನ ಸೆಳೆದವು. ಬಣ್ಣ ಬಣ್ಣದ ಕರುಗಳು ನೋಡಲು ಜನ ಮುಗಿ ಬಿದ್ದರು. ವಿವಿಧ ತಳಿಯ ಜಾನುವಾರಗಳ ಚಿತ್ರ ಪ್ರದರ್ಶನ ರೈತರಿಗೆ ಹಿಡಿಸಿತು. ಕೃಷಿ ಇಲಾಖೆಯಿಂದ ಬೀಜ, ಗೊಬ್ಬರ, ಸಾವಯವ ಕೃಷಿ ಮಾದರಿ ಪ್ರದರ್ಶನದಲ್ಲಿ ಕಂಡು ಬಂತು.

ತೋಟಗಾರಿಕೆ ಬೆಳೆ ಪ್ರದರ್ಶನದಲ್ಲಿ ಯಶಸ್ವಿ ರೈತರ ಸಾಧನೆ ಮಾದರಿ, ವಿವಿಧ ತೋಟಗಾರಿಕೆ ಬೆಳೆ ಮಾಹಿತಿ ನೀಡಲಾಯಿತು. ಮೀನುಗಾರಿಕೆ, ಆರೋಗ್ಯ ಇಲಾಖೆ, ಉದ್ಯೋಗ ಖಾತರಿ, ಆಧಾರ್ ನೊಂದಣಿ, ಪಹಣಿ ತಿದ್ದುಪಡಿ, ಸಂಧ್ಯಾ ಸುರಕ್ಷಾ ಯೋಜನೆ ಪ್ರದರ್ಶನ ಮಳಿಗೆ ಮುಂದೆ ಜನ ಸೇರಿ ಮಾಹಿತಿ ಪಡೆದುಕೊಂಡರು.

ವೇದಿಕೆ ಕಾರ್ಯಕ್ರಮ ಆರಂಭವಾದರೂ ಜನ ಮಳಿಗೆ ಮುಂದೆ ಮಾಹಿತಿ ಪಡೆಯುವುದರಲ್ಲಿಯೇ ಹೆಚ್ಚು ಆಸಕ್ತರಾಗಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.