ಬೀದರ್: ‘ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪ್ರತಿ ಪರೀಕ್ಷೆಯಲ್ಲಿ ನಮ್ಮ ರಾಜ್ಯದ 100 ವಿದ್ಯಾರ್ಥಿಗಳು ಯಶಸ್ವಿಯಾಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವೂ ನಡೆಯುತ್ತಿದೆ’ ಎಂದು ‘ಇನ್‌ಸೈಟ್ ಐಎಎಸ್’ ಸಂಸ್ಥೆ ಸಂಸ್ಥಾಪಕ ಮತ್ತು ನಿರ್ದೇಶಕರೂ ಆದ ವಿನಯ್ ಕುಮಾರ್ ಜಿ.ಬಿ. ಹೇಳಿದರು.
ಐಎಎಸ್, ಐಪಿಎಸ್ ಪಾಸು ಮಾಡುವುದು ಕಷ್ಟ. ಆದರೆ, ಕಠಿಣ ಪರಿಶ್ರಮದಿಂದ ಅದು ಸಾಧ್ಯ ಎಂಬುದು ನನ್ನ ಅನುಭವಕ್ಕೆ ಬಂದಿದೆ. ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಕಾಣದಿರಬಹುದು. ಆದರೆ, ಅದಕ್ಕಾಗಿ ಹಾಕಿರುವ ಶ್ರಮ, ಅನುಭವ ಅನೇಕ ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗಿದೆ. ನಾನು ಆರಂಭದಲ್ಲಿ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಐಎಎಸ್ ತರಬೇತಿ ಕೊಟ್ಟೆ. ಅವರಲ್ಲಿ ನಾಲ್ಕು ಜನ ಈಗ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಸಾಧನೆ ನನಗೆ ಇನ್ನಷ್ಟು ಪ್ರೇರಣೆ ನೀಡಿತು. ಈಗ ಬೆಂಗಳೂರು, ದೆಹಲಿ, ಹೈದರಾಬಾದ್ ಸೇರಿದಂತೆ ವಿವಿಧೆಡೆಯ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮ
ಸಂಸ್ಥೆಯಲ್ಲಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಫ್‌ಲೈನ್ ಹೊರತಾಗಿ ಅನೇಕರು ವೆಬ್‌ಸೈಟ್, ಟೆಲಿಗ್ರಾಂ, ಯೂಟ್ಯೂಬ್ ಚಾನೆಲ್, ವೆಬಿನಾರ್ ಮೂಲಕ ಆನ್‌ಲೈನ್‌ನಲ್ಲಿ ಮಾರ್ಗದರ್ಶನ ಪಡೆಯುತ್ತಿರುವುದು ನಾನು ಹೆಮ್ಮೆಪಡುವಂತಾಗಿದೆ ಎಂದು ತಿಳಿಸಿದರು.
ಯುಪಿಎಸ್ಸಿ ಪರೀಕ್ಷೆಯಲ್ಲಿ 2014ರ ಮೊದಲು ನಮ್ಮ ರಾಜ್ಯದಿಂದ 4ರಿಂದ 5 ವಿದ್ಯಾರ್ಥಿಗಳು ಮಾತ್ರ ಯಶಸ್ವಿಯಾಗುತ್ತಿದ್ದರು. ಆದರೆ, ಈಗ 2015ರ ನಂತರ 30 ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಅವರಲ್ಲಿ ನಮ್ಮ ಸಂಸ್ಥೆಯ 25 ವಿದ್ಯಾರ್ಥಿಗಳಿದ್ದಾರೆ. ನಮಗೆ ಇಷ್ಟಕ್ಕೆ ಸಮಾಧಾನ ಆಗಿಲ್ಲ. 100 ವಿದ್ಯಾರ್ಥಿಗಳು ಪಾಸು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಾವು ವಿಶೇಷ ಗಮನ ಹರಿಸಿದ್ದೇವೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಬುರ್ಗಿಯಲ್ಲೂ ಒಂದು ಐಎಎಸ್ ತರಬೇತಿ ಕೇಂದ್ರ ತೆರೆಯುತ್ತೇವೆ ಎಂದು ಹೇಳಿದರು.
ಮನಸ್ಸು ಮಾಡಿದರೆ ಸಮಸ್ಯೆ ಮತ್ತು ಸವಾಲುಗಳ ನಡುವೆಯೇ ನಾವು ದೊಡ್ಡ ಸಾಧನೆ ಮಾಡಬಹುದು. ಎಷ್ಟೋ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಗುರಿ ಮುಟ್ಟಲು ಆಗದಿದ್ದರೂ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಗುರಿ ಸ್ಪಷ್ಟ ಹಾಗೂ ಕಠಿಣ ಪರಿಶ್ರಮ ಇದ್ದರೆ ಖಂಡಿತ ಸಾಧನೆ ದಾರಿ ಸುಗಮವಾಗುತ್ತದೆ ಎಂದು ವಿನಯ್ ಕುಮಾರ್ ಜಿ.ಬಿ. ಐಎಎಸ್, ಐಪಿಎಸ್ ಪಾಸು ಮಾಡುವ ವಿಧಾನವನ್ನು ವಿವರವಾಗಿ ಹೇಳಿದರು.
‘ಯುಪಿಎಸ್‌ಸಿ ಪ್ರಿಲಿಮ್ಸ್ ಕನ್ನಡದಲ್ಲಿ‘
‘ಕೇಂದ್ರ ಲೋಕಸೇವಾ ಆಯೋಗದ ಪ್ರಿಲಿಮ್ಸ್ ಪರೀಕ್ಷೆ ಕನ್ನಡದಲ್ಲಿ ಆದರೆ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ, ಹೋರಾಟ ನಡೆಯುತ್ತಿದೆ. ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಬೆಂಬಲಿಸಿದರೆ ನಮ್ಮ ಬೇಡಿಕೆ ಈಡೇರುತ್ತದೆ’ ಎಂದು ವಿನಯ್ ಕುಮಾರ್ ಜಿ.ಬಿ. ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.