ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಲ್ಲೂಕಿಗೆ ಹೆಚ್ಚಿನ ಪರಿಹಾರ ತರುವ ಪ್ರಯತ್ನ’

ರೈತರನ್ನು ಪರಿಹಾರದಿಂದ ವಂಚಿತರನ್ನಾಗಿಸುವುದು ಕಂಪನಿ ಉದ್ದೇಶ; ಆರೋಪ
Last Updated 11 ಅಕ್ಟೋಬರ್ 2021, 2:25 IST
ಅಕ್ಷರ ಗಾತ್ರ

ಭಾಲ್ಕಿ: ‘ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಿದ ಬೆಳೆಹಾನಿ ಮಾಹಿತಿಯನ್ನು ಪ್ರಸ್ತಾವ ರೂಪದಲ್ಲಿ ತಕ್ಷಣಕ್ಕೆ ಸಲ್ಲಿಸಿದರೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ತಾಲ್ಲೂಕಿಗೆ ಹೆಚ್ಚಿನ ಪರಿಹಾರ ತರುತ್ತೇನೆ’ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಾಪಕ ಮಳೆಯಾಗಿ ರೈತರು ಬೆಳೆದ ಎಲ್ಲ ಬೆಳೆಗಳು ನೀರು ಪಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಮನೆಗಳು ಕುಸಿದು ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಹೆಸರು, ಉದ್ದು, ತೊಗರಿ ಸೇರಿ ಬಹುತೇಕ ಫಸಲು ಕೈಕೊಟ್ಟಿದೆ ಎಂದರು.

ಕಾರಂಜಾ ಮತ್ತು ಮಾಂಜ್ರಾ ನದಿಯ ಹೆಚ್ಚುವರಿ ನೀರು ಹರಿದು ನದಿ ದಡದಲ್ಲಿ ಬೆಳೆದ ಬೆಳೆಗಳು ಜಲಾವೃತಗೊಂಡು ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿಸುವ ಕೆಲಸ ಆಗಬೇಕಿದೆ. ಬೆಳೆವಿಮೆ ಕಂಪನಿಯವರು ರೈತರ ಬೆಳೆಹಾನಿ ಮಾಹಿತಿ ಸರಿಯಾಗಿ ಸ್ವೀಕರಿಸುತ್ತಿಲ್ಲ. ರೈತರನ್ನು ಪರಿಹಾರದಿಂದ ವಂಚಿತರನ್ನಾಗಿ ಮಾಡುವುದು ಬೆಳೆ ವಿಮೆ ಕಂಪನಿಯ ಉದ್ದೇಶ ಆಗಿದೆ ಎಂದು ದೂರಿದರು.

ಕೃಷಿ ಇಲಾಖೆ ಸಿಬ್ಬಂದಿ ಬೆಳೆವಿಮೆ ಕಂಪನಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಬೆಳೆಹಾನಿ ನೈಜ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸಲು ಅಭಿವೃದ್ಧಿ ಅಧಿಕಾರಿಗಳು ಹಣದ ಬೇಡಿಕೆ ಇಡುತ್ತಿದ್ದಾರೆ. ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಳ್ಳಲು ನರೇಗಾ ಸಿಬ್ಬಂದಿ ಶೇ.30-50 ರಷ್ಟು ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ತಕ್ಷಣಕ್ಕೆ ವ್ಯವಸ್ಥೆ ಸುಧಾರಣೆ ಆಗಬೇಕು. ಇಲ್ಲದಿದ್ದರೆ ಅಕ್ರಮದಲ್ಲಿ ಭಾಗಿಯಾಗಿರುವ ಪಿಡಿಒಗಳನ್ನು ಮುಲಾಜಿಲ್ಲದೇ ಅಮಾನತು ಮಾಡಬೇಕು ಎಂದು ಶಾಸಕರು ತಾ.ಪಂ. ಇಒಗೆ ಸೂಚನೆ ನೀಡಿದರು.

ಕೋವಿಡ್‌ ಲಸಿಕಾ ಪ್ರಕ್ರಿಯೆ ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ ಶೇ.81 ರಷ್ಟು ಮತ್ತು ಎರಡನೇ ಹಂತದಲ್ಲಿ ಶೇ.51 ರಷ್ಟು ಆಗಿರುವ ಬಗ್ಗೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡೆ ಶಾಸಕರ ಗಮನಕ್ಕೆ ತಂದರು.

ಎಪಿಎಂಸಿ ಅಧ್ಯಕ್ಷ ವೀರಶೆಟ್ಟಿ ಖಂಡ್ರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಹಾಗೂ ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT