ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಎಂಎಲ್‌ಸಿ ಅರಳಿ: ಬಿಜೆಪಿ ಮುಖಂಡ ಬಾಬುವಾಲಿ

Published 22 ಫೆಬ್ರುವರಿ 2024, 16:18 IST
Last Updated 22 ಫೆಬ್ರುವರಿ 2024, 16:18 IST
ಅಕ್ಷರ ಗಾತ್ರ

ಬೀದರ್‌: ‘ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಹಿಂದಿನ ಆಯುಕ್ತ ಅಭಯ್‌ ಕುಮಾರ್‌ ಅವರನ್ನು ಅಮಾನತುಗೊಳಿಸಿದ್ದಾರೆ’ ಎಂದು ಬುಡಾ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಬಾಬುವಾಲಿ ಆರೋಪಿಸಿದರು.

ಬುಡಾದಲ್ಲಿ ಆಗಿರುವ ಕೆಲಸಗಳ ಕುರಿತು ಆರೋಪಗಳು ಕೇಳಿ ಬಂದ ನಂತರ ತನಿಖೆ ನಡೆಸಲಾಗಿತ್ತು. ತನಿಖಾ ತಂಡವು ಅಭಯ್‌ ಕುಮಾರ್‌ ಅವರ ಹೇಳಿಕೆ ಪಡೆದಿಲ್ಲ. ಆದರೆ, ಅರಳಿ ಅವರು ಉದ್ದೇಶಪೂರ್ವಕವಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಅಮಾನತುಗೊಳಿಸಿದ್ದಾರೆ. ಅರಳಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನನಗೆ ವೈಯಕ್ತಿಕವಾಗಿ ಕಿರುಕುಳ ಕೊಡಲು, ನನ್ನ ಹೆಸರು ಕೆಡಿಸಲು ಪದೇ ಪದೇ ಬುಡಾದಲ್ಲಿ ಅಕ್ರಮವಾಗಿದೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳುತ್ತಾರೆ. ನಾನು ಅಧ್ಯಕ್ಷನಾಗಿದ್ದ 2021ರಿಂದ 2023ರ ಅವಧಿಯಲ್ಲಿ ಸಭೆಯಲ್ಲಿ ಎಲ್ಲರ ಒಪ್ಪಿಗೆಯೊಂದಿಗೆ ಕೆಲಸಗಳಾಗಿವೆ. ಕೆಲ ಕಾನೂನಾತ್ಮಕ ಹೆಜ್ಜೆಗಳು ತಪ್ಪಾಗಿರಬಹುದು. ಅದಕ್ಕೆ ಸರ್ಕಾರಿ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ತಿಳಿಸಿದರು.

ಅರಳಿ ಹಾಗೂ ನಾನು ಸ್ನೇಹಿತರು. ಆದರೆ, ರಾಜ್ಯದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಅದನ್ನು ದುರ್ಬಳಕೆ ಮಾಡಿಕೊಂಡು ವೈಯಕ್ತಿಕವಾಗಿ ಹಗೆ ಸಾಧಿಸುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಬುಡಾ ಅಧ್ಯಕ್ಷನಿದ್ದಾಗ ಅರಳಿ ಅವರು ಅದರ ಸದಸ್ಯರಾಗಿದ್ದರು. ನಾನು ವೈಯಕ್ತಿವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಲ್ಲಿ ಕೈಗೊಂಡಿರುವ ‘ರೆಸುಲೂಷನ್‌’ ಮೇಲೆ ಸಹಿ ಹಾಕಿರುವೆ. ಯಾವುದೇ ಪತ್ರದ ಮೇಲೆ ವೈಯಕ್ತಿಕವಾಗಿ ಸಹಿ ಹಾಕಿಲ್ಲ. ಒಂದುವೇಳೆ ತಪ್ಪು ಮಾಡಿದರೆ ನೇಣಿಗೇರಲು ಸಿದ್ಧ. ಬುಡಾದಲ್ಲಿ ಅನೇಕರು ಸದಸ್ಯರಿರುತ್ತಾರೆ. ಎಲ್ಲಾ ತೀರ್ಮಾನ ಎಲ್ಲರ ಸಮ್ಮುಖದಲ್ಲಿಯೇ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಯಡಿಯೂರಪ್ಪ ಲೇಔಟ್‌ ಮಾಡಿ ಕಾನೂನು ಪ್ರಕಾರ ನಿವೇಶನಗಳನ್ನು ಹಂಚಿಕೆ ಮಾಡಿರುವೆ. ಒಬ್ಬರೂ ಅದರ ಬಗ್ಗೆ ತಕರಾರು ತೆಗೆದಿಲ್ಲ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ‘ವ್ಯಾಲಿವ್ಯೂವ್‌’ ಲೇಔಟ್‌ಗೆ ಒಪ್ಪಿಗೆ ಪಡೆದು ಅದನ್ನು ಸರಿಪಡಿಸಿದೆ. ಸಿದ್ರಾಮಯ್ಯ ಲೇಔಟ್‌ನಲ್ಲಿ ನಿವೇಶನಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಸರಿಪಡಿಸಿದೆ. ಹಿಂದೆ ಸಿದ್ರಾಮಯ್ಯ ಲೇಔಟ್‌ನಲ್ಲಿ ಒಬ್ಬರಿಗೆ ಎರಡೆರಡು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಅದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಅರಳಿ ದೊಡ್ಡ ಕ್ರಿಮಿನಲ್‌ ಇರುವುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡುವುದೇ ಅವರ ಕೆಲಸವಾಗಿದೆ. ಅವರ ಆಸ್ತಿ ಹಾಗೂ ಹಗಲು ದರೋಡೆ ಬಗ್ಗೆ ತನಿಖೆ ನಡೆಸಬೇಕೆಂದು ಸರ್ಕಾರದ ವಿವಿಧ ಸಂಸ್ಥೆಗಳಿಗೆ ದೂರು ಸಲ್ಲಿಸುವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ‘ಕ್ಲೀನ್‌ ಹ್ಯಾಂಡ್‌’. ಅರಳಿ ಅಂತಹವರನ್ನು ಜತೆಯಲ್ಲಿ ಕೂರಿಸಿಕೊಂಡು ಮಾನ ಹರಾಜು ಮಾಡಿಕೊಳ್ಳಬಾರದು.
–ಬಾಬುವಾಲಿ ಬುಡಾ ಮಾಜಿ ಅಧ್ಯಕ್ಷ

‘ರಹೀಂ ಖಾನ್‌ ಮಲ್ಕಾಪುರೆ ಮೌನವೇಕೆ?’

‘ನಾನು ಬುಡಾ ಅಧ್ಯಕ್ಷನಿದ್ದಾಗ ಹಾಲಿ ಪೌರಾಡಳಿತ ಸಚಿವ ರಹೀಂ ಖಾನ್‌ ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ್‌ ಮಲ್ಕಾಪುರೆ ಅರವಿಂದಕುಮಾರ ಅರಳಿ ಅವರು ಅದರ ಸದಸ್ಯರಾಗಿದ್ದರು. ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಎಲ್ಲರೂ ಸಹಿ ಹಾಕಿದ್ದರು. ನನ್ನ ಕೆಲಸಕ್ಕೆ ಸಹಕಾರ ನೀಡಿದ್ದರು. ಜೊತೆಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಆದರೆ ಅರಳಿ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದರೂ ಈಗೇಕೆ ಮೌನವಾಗಿದ್ದಾರೆ ಗೊತ್ತಾಗುತ್ತಿಲ್ಲ’ ಎಂದು ಬಾಬುವಾಲಿ ಪ್ರಶ್ನಿಸಿದರು.

‘ನಿರ್ಗಮಿಸುವಾಗ ಬುಡಾ ಖಾತೆಯಲ್ಲಿ ₹23 ಕೋಟಿ’

‘ನಾನು ಬುಡಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ಖಾತೆಯಲ್ಲಿ ಸುಮಾರು ₹1 ಕೋಟಿ ಹಣ ಇತ್ತು. ನಾನು ಅಧಿಕಾರದಿಂದ ನಿರ್ಗಮಿಸುವಾಗ ಖಾತೆಯಲ್ಲಿ ₹23 ಕೋಟಿ ಇತ್ತು. ಬುಡಾ ಇತಿಹಾಸದಲ್ಲಿ ಇಷ್ಟೊಂದು ಆದಾಯ ಎಂದೂ ಬಂದಿಲ್ಲ’ ಎಂದು ಬಾಬುವಾಲಿ ಹೇಳಿದರು.

ನನ್ನ ಅವಧಿಯಲ್ಲಿ 250ಕ್ಕೂ ಹೆಚ್ಚು ಲೇಔಟ್‌ಗಳಿಗೆ ಒಪ್ಪಿಗೆ ನೀಡಲಾಯಿತು. 15 ಉದ್ಯಾನಗಳ ಅಭಿವೃದ್ಧಿಗೆ ತಲಾ ₹10 ಲಕ್ಷ ಕೊಡಲಾಯಿತು. ಪಾಪನಾಶ ಕೆರೆ ಪರಿಸರದ ಅಭಿವೃದ್ಧಿಗೆ ₹2 ಕೋಟಿ ಮೀಸಲಿಡಲಾಯಿತು. ಗೋರನಳ್ಳಿ ಸಮೀಪದ ಕೆರೆಯಲ್ಲಿ ಗಣಪನ ಮೂರ್ತಿಗಳ ವಿಸರ್ಜನೆಗೆ ಹೊಂಡ ನಿರ್ಮಾಣಕ್ಕೆ ₹2 ಕೋಟಿ ಕೊಟ್ಟಿದ್ದೆ. ಇಷ್ಟೆಲ್ಲ ಮಾಡಿದರೂ ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ನಾನು ತಪ್ಪು ಮಾಡಿದರೆ ಜೈಲಿಗೆ ಹೋಗುವೆ. ಅವರು ತಪ್ಪೆಸಗಿದರೆ ಅವರು ಜೈಲಿಗೆ ಹೋಗಲಿ ಎಂದು ಸವಾಲು ಹಾಕಿದರು.

ಅರಳಿ–ಸಹೋದರರ ವಿರುದ್ಧ ದೂರು

‘ಅರವಿಂದಕುಮಾರ ಅರಳಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ. ಅವರು ಹಾಗೂ ಅವರ ಸಹೋದರರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಬಂಧಿಸಿದ ಸಂಸ್ಥೆಗಳಿಗೆ ದೂರು ಸಲ್ಲಿಸುವೆ’ ಎಂದು ಬಾಬುವಾಲಿ ಹೇಳಿದರು.

ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅದಕ್ಕೆ ಅರಳಿ ಶ್ರೀರಕ್ಷೆ ಇದೆ. ಅವರ ಸಹೋದರ ಗೌತಮ್‌ ಅರಳಿ 14 ವರ್ಷಗಳಿಂದ ಜಿಲ್ಲೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಕ್ರೀಡಾ ವಸತಿ ಶಾಲೆಯಲ್ಲಿ ಮಕ್ಕಳ ಹೆಸರಲ್ಲಿ ಅಕ್ರಮ ಎಸಗುತ್ತಿದ್ದಾರೆ. ಕ್ರೀಡಾಪಟುಗಳ ಹೆಸರಲ್ಲಿ ಹಣ ಎತ್ತುತ್ತಿದ್ದಾರೆ. ಇವರ ಇನ್ನೊಬ್ಬ ಸಹೋದರ ಸೂರ್ಯಕಾಂತ ಅರಳಿ ಎಂಬುವರು ಕಲಬುರಗಿಯಲ್ಲಿ ಕೋಟ್ಯಂತರ ಮೌಲ್ಯದ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದರು. ಸರ್ಕಾರ ಈಚೆಗೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಅರಳಿ ಅವರ ಕಿರುಕುಳದಿಂದ ಸರ್ಕಾರಿ ಅಧಿಕಾರಿಗಳು ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT