ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಕಾಡುತ್ತಿರುವ ಮಂಗನ ಬಾವು: ಮಕ್ಕಳು ಹೈರಾಣ

ಗುರುಪ್ರಸಾದ ಮೆಂಟೇ
Published 15 ಫೆಬ್ರುವರಿ 2024, 6:46 IST
Last Updated 15 ಫೆಬ್ರುವರಿ 2024, 6:46 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನ ಹಳ್ಳಿಗಳಲ್ಲಿ ಮಕ್ಕಳಿಗೆ ಮಂಗನಬಾವು ಕಾಯಿಲೆ ಕಾಡುತ್ತಿದೆ. ದಿನದಿಂದ ದಿನಕ್ಕೆ ಈ ಕಾಯಿಲೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ತಾಲ್ಲೂಕಿನ ಸಮೀಪದ ಅಳವಾಯಿ, ಹಲಸಿ ತುಗಾಂವ, ಮೇಹಕರ, ಅಂಬೇವಾಡಿ, ಅಟ್ಟರಗಾ, ಮಿರಖಲ ತಾಂಡ, ಬೇಲೂರ ಸೇರಿ ಹಲವು ಗ್ರಾಮಗಳಲ್ಲಿ ರೋಗ ಅಂಟಿಕೊಂಡ ಮಕ್ಕಳು ಪಾಲಕರ ಜೊತೆ ಸ್ಥಳೀಯ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಮತ್ತು ಕೆಲವು ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೂ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾಯಿಲೆ ಒಂದು ವಾರದವರೆಗೆ ಇರುತ್ತದೆ.

ಸಾಮಾನ್ಯವಾಗಿ ಚಳಿಗಾಲದ ಅವಧಿಯಲ್ಲಿ ಹೆಚ್ಚಾಗುವ ಮಂಗನಬಾವು ಸೋಂಕು, ಚಳಿಗಾಲ ಮುಗಿಯುವ ಹಂತದಲ್ಲಿದ್ದರೂ ಕಡಿಮೆಯಾಗುತ್ತಿಲ್ಲ. ಹೀಗಾಗಿ ಯಾವುದೇ ಪ್ರತ್ಯೇಕ ಚಿಕಿತ್ಸೆ ಇರದ ಕಾಯಿಲೆ ಹತೋಟಿಗೆ, ಜ್ವರ ಮತ್ತು ನೋವು ಕಡಿಮೆ ಮಾಡಲು ಮಾತ್ರ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಮಂಗನಬಾವು ಸೋಂಕು ತಗುಲಿದ ವ್ಯಕ್ತಿಯ ಕಿವಿಯ ಕೆಳಭಾಗ ಹಾಗೂ ಅರ್ಧ ಭಾಗದಷ್ಟು ಕೆನ್ನೆ ಊದಿಕೊಳ್ಳುತ್ತದೆ. ಮಂಗನ ಮೂತಿಯ ಹಾಗೆ ಕಾಣುವುದರಿಂದ ಮಂಗನಬಾವು ಎನ್ನುತ್ತಾರೆ. ಕೆಲವೆಡೆ ‘ಗದ್ದಬಾವು’, ‘ಕೆಪ್ಪಟೆ’ ಎಂದೂ ಕರೆಯುತ್ತಾರೆ. ಕಿವಿಯ ಕೆಳಗಿರುವ ಲಾಲಾರಸ ಸ್ರವಿಸುವ ಗ್ರಂಥಿಯು ಸೋಂಕಿನಿಂದ ಊದಿಕೊಳ್ಳುವುದರಿಂದ ಬಾವು ಉಂಟಾಗುತ್ತದೆ.

‘ಮಂಗನಬಾವು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ವಾರದಿಂದ ಈಚೆಗೆ ಈ ಕಾಯಿಲೆಗಳ ಪ್ರಕರಣ ಹೆಚ್ಚುತ್ತಿದ್ದು, ಆಸ್ಪತ್ರೆಗೆ ಬರುವವರ ಸಂಖ್ಯೆ ಸಹ ಹೆಚ್ಚಾಗಿದೆ. ಸಾಮಾನ್ಯ ಅಥವಾ ಜೋರು ಜ್ವರ, ಕೆನ್ನೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಇದರ ಲಕ್ಷಣ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಆರಿಫೋದ್ದಿನ್ ಹೇಳಿದರು.

‘ರುಬುಲಾವೈರಸ್‌ನಿಂದ ಸೋಂಕು ಉಂಟಾಗಿ, ಕಿವಿಯ ಕೆಳಗಿನ ಭಾಗ ಊದಿಕೊಳ್ಳುತ್ತದೆ. ಸಾಮಾನ್ಯವಾಗಿ ಐದರಿಂದ ಹದಿನೈದು ವರ್ಷದ ಒಳಗಿನ ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ವಯಸ್ಕರಲ್ಲಿ ಇದು ಕಂಡು ಬರುವುದು ಅಪರೂಪ. ಪ್ರಾಣಾಪಾಯದ ಕಾಯಿಲೆಯಲ್ಲ. ಸೋಂಕು ಪತ್ತೆಯಾದ ತಕ್ಷಣ ವಿಶ್ರಾಂತಿ ಪಡೆಯಬೇಕು. ಸಾಮಾನ್ಯ ಜ್ವರಕ್ಕೆ ನೀಡುವ ಔಷಧಿಯನ್ನೇ ನೀಡಲಾಗುತ್ತದೆ. ವಿಶ್ರಾಂತಿ ಪಡೆಯುವುದೊಂದೇ ಇದಕ್ಕೆ ಉತ್ತಮ ಪರಿಹಾರ’ ಎಂದು ಸಲಹೆ ನೀಡಿದರು.

ಮಂಗನಬಾವು ತಾಲ್ಲೂಕಿನ ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಬಾವು ಮಕ್ಕಳನ್ನು ಹೈರಾಣಾಗಿಸಿದೆ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಆರೋಗ್ಯ ಇಲಾಖೆ ಜಾಗೃತಿ ಮೂಡಿಸಬೇಕು
ಮಂಗನಬಾವು ಮಮ್ಸ್‌ ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಪ್ಯಾರೋಟಿಡ್‌ ಗ್ರಂಥಿಗಳನ್ನು ದೊಡ್ಡದಾಗಿಸಿ ನೋವುಂಟು ಮಾಡಲಿದೆ. ಪೋಷಕರು ಆತಂಕ ಪಡದೆ ಮಕ್ಕಳ ಆರೈಕೆಗೆ ಮುಂದಾಗಬೇಕಿದೆ.
ಎಂ.ಡಿ.ಆರಿಫೋದ್ದಿನ್ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ಹುಲಸೂರ
ಶಾಲೆಗೆ ಹೋಗುವುದು ಮತ್ತು ಕೂಡಿ ಆಟವಾಡುವುದರಿಂದ ಮಕ್ಕಳಲ್ಲಿ ವೇಗವಾಗಿ ಮಂಗನಬಾವು ಸೋಂಕು ಹರಡಲಿದೆ. ಸೋಂಕು ಇರುವ ಮಕ್ಕಳು ಕೆಲದಿನ ಶಾಲೆಗೆ ಹೋಗದೆ ಪ್ರತ್ಯೇಕವಾಗಿದ್ದರೆ ಸೋಂಕು ಹಬ್ಬದಂತೆ ನೋಡಿಕೊಳ್ಳಬಹುದು.
ಡಾ.ಮಲ್ಲಿಕಾರ್ಜುನ ಹುಮನಾಬಾದೆ ಮಕ್ಕಳ ತಜ್ಞ
ಸೋಂಕು ತಡೆಗೆ ಮಾರ್ಗ
ಸೋಂಕಿತರಲ್ಲಿ ಒಂದು ವಾರದಿಂದ ಎರಡು ವಾರಗಳ ಕಾಲ ಸೋಂಕು ಸಕ್ರಿಯವಾಗಿರಲಿದ್ದು ಸ್ವಯಂ ನಿಯಂತ್ರಣ ಕ್ರಮಗಳಿಂದ ಸೋಂಕು ನಿಯಂತ್ರಿಸಬಹುದು. ಹೆಚ್ಚಾಗಿ ದ್ರವ ಆಹಾರ ನೀಡುವುದು ಜೊಲ್ಲುಹೆಚ್ಚಿಸುವ ಹುಳಿ ಹೆಚ್ಚಿಸುವ ಆಹಾರ ನೀಡಬಾರದು. ಹೆಚ್ಚಾಗಿ ಮಕ್ಕಳಲ್ಲಿಸೋಂಕು ಕಂಡುಬರುವುದರಿಂದ ಕೆಲ ದಿನ ಕೂಡಿ ಆಡುವುದಕ್ಕೆ ಶಾಲೆಗೆ ಕಳಿಸಬಾರದು. ಪ್ರತ್ಯೇಕವಾಗಿ ಇರುವುದರಿಂದ ಸೋಂಕು ಹಬ್ಬದಂತೆ ತಡೆಯಬಹುದು ಎನ್ನುತ್ತಾರೆ ವೈದ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT