ಮಂಗಳವಾರ, ನವೆಂಬರ್ 24, 2020
21 °C
ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಸೋಮಶೇಖರ ಹೇಳಿಕೆ

ನ.11 ರಂದು ಸರ್ಕಾರದಿಂದ ನಾಗಮಾರಪಳ್ಳಿ ಜನ್ಮದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಗುರುಪಾದಪ್ಪ ನಾಗಮಾರಪಳ್ಳಿ ಅವರು ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಪ್ರಗತಿಯನ್ನು ರಾಜ್ಯದ ಜನತೆಗೆ ಪರಿಚಯಿಸುವ ದಿಸೆಯಲ್ಲಿ ಪ್ರತಿ ವರ್ಷ ನವೆಂಬರ್ 11 ರಂದು ಅವರ ಜನ್ಮದಿನವನ್ನು ಸರ್ಕಾರದಿಂದ ಆಚರಿಸುವಂತೆ ಸಹಕಾರ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಹೇಳಿದರು.

ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದಲ್ಲಿ ಬುಧವಾರ ಡಿಸಿಸಿ ಬ್ಯಾಂಕ್‌ ವತಿಯಿಂದ ಆಯೋಜಿಸಿದ್ದ ‘ಆರ್ಥಿಕ ಸ್ಪಂದನ‘ ಹಾಗೂ ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆಯನ್ನು ಪ್ರತಿ ವರ್ಷ ನವೆಂಬರ್ 14ರಿಂದ 20ರ ವರೆಗೆ ಅಖಿಲ ಭಾರತ ಸಹಕಾರ ಸಪ್ತಾಹದ ರೂಪದಲ್ಲಿ ಆಚರಿಸುತ್ತಿದ್ದೇವೆ. ಅದರಂತೆ ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನ ಪ್ರಯುಕ್ತ ನ.11ರಂದು ಸ್ವಸಹಾಯ ಗುಂಪುಗಳ ದಿನ ಆಚರಿಸಲಾಗುವುದು’ ಎಂದು ಘೋಷಣೆ ಮಾಡಿದರು.

‘ಮಹಿಳಾ ಸ್ವಸಹಾಯ ಸಂಘ ಹಾಗೂ ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸಲು ಗುರುಪಾದಪ್ಪ ಅವರು ರೂಪಿಸಿದ ಕಾರ್ಯಕ್ರಮಗಳು ಮಾದರಿಯಾಗಿವೆ. ಅವರ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ಮುನ್ನಡೆಸಿಕೊಂಡು ಸಹಕಾರ ಸಂಘಗಳನ್ನು ಬಲಪಡಿಸುತ್ತಿರುವ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಪ್ರಕಟಿಸಿದರು.

‘67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ನೀಡಲು ಕೃಷಿ ಸಚಿವ ಬಿ.ಎಸ್‌.ಪಾಟೀಲ, ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಒಳಗೊಂಡ ಸಮಿತಿಯಲ್ಲಿ ಉಮಾಕಾಂತ ನಾಗಮಾರಪಳ್ಳಿ ಅವರ ಹೆಸರನ್ನು ಪ‌್ರಸ್ತಾಪ ಮಾಡಿದಾಗ ಎಲ್ಲರೂ ಸಹಮತ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.

ಮಾದರಿ ಇಲಾಖೆಗೆ ಕ್ರಮ

‘ರಾಷ್ಟ್ರಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ ಗುಜರಾತ ಹಾಗೂ ಮಹಾರಾಷ್ಟ್ರ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನದಲ್ಲಿವೆ. ತೃತೀಯ ಸ್ಥಾನದಲ್ಲಿರುವ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ತರಲು ಪ್ರಯತ್ನಿಸಲಾಗುವುದು. ಮಾರ್ಚ್‌, ಏಪ್ರಿಲ್ ವೇಳೆಗೆ ಸಹಕಾರ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪುತ್ತಿರುವುದನ್ನು ಖಚಿತ ಪಡಿಸಿಕೊಳ್ಳಲು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗುವುದು’ ಎಂದು ತಿಳಿಸಿದರು.

‘ಗ್ರಾಹಕರ ಹಾಗೂ ಠೇವಣಿದಾರರ ವಿಶ್ವಾಸವನ್ನು ಗಮನದಲ್ಲಿರಿಸಿಕೊಂಡು ಸಹಕಾರ ಕಾನೂನುಗಳಿಗೆ ಕೆಲವೊಂದು ಬದಲಾವಣೆ ಮಾಡುವ ಚಿಂತನೆ ನಡೆದಿದೆ. ಕಾಮನ್‌ ಕೇಡರ್‌ ಸಮಿತಿಯಲ್ಲೂ ಬದಲಾವಣೆ ಮಾಡಲಾಗುವುದು. ಸಹಕಾರ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು’ ಎಂದು ಮುನ್ಸೂಚನೆ ನೀಡಿದರು.

ಬಿಜೆಪಿಗೆ ಬಂದಿದ್ದರೆ ಸಚಿವರಾಗುತ್ತಿದ್ದ ಖಾನ್

‘ಶಾಸಕ ರಹೀಂ ಖಾನ್‌ ನಮ್ಮೊಂದಿಗೆ ಮಂಗಳೂರಿಗೆ ಬಂದಿದ್ದರು. ಕೊನೆಯಲ್ಲಿ ಅವರಿಗೆ ರಾಹುಕಾಲ, ಗುಳಿಕ ಕಾಲ ಕೈಕೊಟ್ಟಿತು. ಬೆಂಗಳೂರಿನಿಂದ ಬೀದರ್‌ ವರೆಗೆ ಒಬ್ಬರೂ ಅಲ್ಪಸಂಖ್ಯಾತ ಶಾಸಕರಿಲ್ಲ. ಹೀಗಾಗಿ ಖಾನ್‌ ಅವರನ್ನೂ ಸಚಿವರನ್ನಾಗಿ ಮಾಡಲು ಮ್ಯಾಪ್ ರೆಡಿ ಮಾಡಲಾಗಿತ್ತು’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ ಬಹಿರಂಗ ಪಡಿಸಿದರು.

‘ಕೊನೆಯ ಕ್ಷಣದಲ್ಲಿ ಹಿಂದಕ್ಕೆ ನಿಂತು ಬಿಟ್ಟರು. ನಮ್ಮೊಂದಿಗೆ ಬಂದಿದ್ದರೆ ಖಾನ್‌ ಅವರೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗುತ್ತಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.