ಮಂಗಳವಾರ, ಜೂನ್ 2, 2020
27 °C
ಜಿಲ್ಲೆಯ ಎಲ್ಲ ನಗರ, ಪಟ್ಟಣಗಳು ಸ್ತಬ್ಧ

ಬೀದರ್: ಆಸ್ಪತ್ರೆ ಒಪಿಡಿ, ಸಾರಿಗೆ ಸೇವೆ, ತರಕಾರಿ ಮಾರಾಟ ಇಲ್ಲ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೋವಿಡ್‌ 19 ಭೀತಿಯ ಕಾರಣ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಶನಿವಾರ ಎಂಎಸ್‌ಐಎಲ್‌ ಮದ್ಯದ ಅಂಗಡಿ, ಮೆಡಿಕಲ್‌, ಕಿರಾಣಿ ಹಾಗೂ ತರಕಾರಿ ಅಂಗಡಿಗಳನ್ನು ಬಿಟ್ಟರೆ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಹೋಟೆಲ್‌, ಖಾನಾವಳಿ ಬಂದ್‌ ಇದ್ದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸಿದರು. ‘ಜನತಾ ಕರ್ಫ್ಯೂ’ ಪ್ರಯುಕ್ತ ಜನರು ತರಕಾರಿ, ಕಿರಾಣಿ ಅಂಗಡಿಗಳಿಗೆ ತೆರಳಿ ಕಿರಾಣಿ ಸಾಮಗ್ರಿಗಳನ್ನು ಖರೀದಿಸಿದರು.
ಬೀದರ್‌ ನಗರ, ಬಸವಕಲ್ಯಾಣ, ಹುಮನಾಬಾದ್‌, ಭಾಲ್ಕಿ, ಔರಾದ್, ಕಮಲನಗರದಲ್ಲಿ ಎಲ್ಲ ಅಂಗಡಿಗಳು ಮುಚ್ಚಿದ್ದವು. ಬಸ್‌,ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆ ಇತ್ತು. ಭಾನುವಾರ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಸರ್ಕಾರಿ, ಖಾಸಗಿ ಆಸ್ಪತ್ರೆ ಒಪಿಡಿ ಬಂದ್

‘ಜನತಾ ಕರ್ಫ್ಯೂ’ ಪ್ರಯುಕ್ತ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ’ ಎಂದು ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ ಬೀದರ್‌ ಶಾಖೆಯ ಅಧ್ಯಕ್ಷ ಡಾ.ನಾಗರಾಜ್‌ ವಿ.ವಿ. ತಿಳಿಸಿದ್ದಾರೆ.

‘ಒಳ ರೋಗಿಗಳ ವಿಭಾಗ ಹಾಗೂ ತುರ್ತು ಸೇವೆಗಳು ಮಾತ್ರ ಮುಂದುವರಿಯಲಿವೆ. ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ದೂರದ ಊರಿನ ಸಾರಿಗೆ ಸೇವೆ ಸ್ಥಗಿತ

ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಂದ ಊರುಗಳಿಗೆ ಹೊರಡುವ ಎಲ್ಲ ಬಸ್‌ಗಳ ಸಂಚಾರವನ್ನು ಶನಿವಾರ ರಾತ್ರಿಯಿಂದ ಸ್ಥಗಿತಗೊಳಿಸಲಾಗಿದೆ. ಭಾನುವಾರ (ಮಾ. 22) ರಸ್ತೆ ಸಾರಿಗೆ ಸಂಸ್ಥೆಯ ಬಸ್, ನಗರಸಾರಿಗೆ ಬಸ್ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಮಾರ್ಚ್‌ 23 ರಂದು ಪಿಯುಸಿ ಪರೀಕ್ಷೆಗಳು ನಡೆಯಲಿರುವುದರಿಂದ ಸಾರಿಗೆ ಸಂಚಾರ ಎಂದಿನಂತೆ ಪ್ರಾರಂಭವಾಗಲಿದೆ. ಕೋವಿಡ್‌ 19 ಸೋಂಕಿನ ಭಯದಿಂದಾಗಿ ಹಿರಿಯ ನಾಗರಿಕರಿಗೆ ನೀಡಿದ ರಿಯಾಯಿತಿ ದರ ಹಿಂಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ವಾಹನ ಸಂಚಾರ ನಿಷೇಧ

ಕೋವಿಡ್‌ 19 ಸೋಂಕಿನ ಭೀತಿಯಿಂದಾಗಿ ಮಾರ್ಚ್‌ 31ರ ವರೆಗೆ ದ್ವಿಚಕ್ರ ವಾಹನ ಹಿಂಬದಿ ಸವಾರಿ, ಆಟೊರಿಕ್ಷಾ, ಕ್ರೂಸರ್‌ ಹಾಗೂ ಜೀಪ್‌ಗಳ ಓಡಾಟ ಸಂಪೂರ್ಣ ನಿಷೇಧಿಸಲಾಗಿದೆ.
ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾಹೇವ ನಿರ್ದೇಶನ ನೀಡಿದ್ದಾರೆ.

ತುರ್ತು ಸಂದರ್ಭದಲ್ಲಿ ಆಟೊರಿಕ್ಷಾಗಳಲ್ಲಿ ಕೇವಲ ಇಬ್ಬರನ್ನು ಮಾತ್ರ ಸಾಗಿಸಬಹುದಾಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಚೆಕ್‌ ಪೋಸ್ಟ್‌ಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಗಿದೆ.

ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ, ಬೀದರ್‌ನ ಶಹಾಪುರ್‌ ಗೇಟ್, ಭಂಗೂರ್, ಕಮಲನಗರ ತಾಲ್ಲೂಕಿನ ಕಮಲನಗರ, ಬಾದಲಗಾಂವ, ದಾಬಕಾ, ಮುರ್ಕಿ, ಔರಾದ್‌ ತಾಲ್ಲೂಕಿನ ಜಮಗಿ, ನಾಗಮಾರಪಳ್ಳಿ, ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ, ಮೆಹಕರ್, ಭಾಲ್ಕಿ ಬಸ್‌ ನಿಲ್ದಾಣ, ಹುಮನಾಬಾದ್‌ ಬಸ್‌ ನಿಲ್ದಾಣ, ಹುಮನಾಬಾದ್‌ ಆರ್‌ಟಿಒ ಚೆಕ್‌ಪೋಸ್ಟ್, ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ, ಮುಚಳಂಬ ಹಾಗೂ ಕಲಬುರ್ಗಿ ಜಿಲ್ಲೆಯ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ತೀ‌ವ್ರಗೊಳಿಸಲಾಗಿದೆ.

ಈವರೆಗೆ ಒಟ್ಟು 415 ಜನರ ವೈದ್ಯಕಿಯ ತಪಾಸಣೆ ನಡೆಸಲಾಗಿದೆ. 203 ಜನರ ಮೇಲೆ ಮನೆಯಲ್ಲಿ ನಿಗಾ ಇಡಲಾಗಿದೆ. 212 ಜನರು ನಿಗಾ ದಿನವನ್ನು ಪೂರೈಸಿದ್ದಾರೆ. 11 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ರಕ್ತ ಮಾದರಿ ಪಡೆಯಲಾಗಿದ್ದು, 7 ಜನರ ವರದಿ ನೆಗೆಟಿವ್‌ ವರದಿ ಬಂದಿದೆ. 4 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು