ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಒಂದೂ ಮಲೇರಿಯಾ ಪ್ರಕರಣ

ರೋಗ ಸಂಪೂರ್ಣ ನಿವಾರಣೆಗೆ ವಿವಿಧ ಜಾಗೃತಿ ಕಾರ್ಯಕ್ರಮ
Last Updated 8 ಜೂನ್ 2021, 14:47 IST
ಅಕ್ಷರ ಗಾತ್ರ

ಬೀದರ್: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಂದೂ ಮಲೇರಿಯಾ ಪ್ರಕರಣ ಪತ್ತೆಯಾಗಿಲ್ಲ. ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ವಿಡಿಯೊ ಸಂವಾದದ ಮೂಲಕ ನಡೆದ ಜಿಲ್ಲಾಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಸಂಜೀವಕುಮಾರ ಪಾಟೀಲ ಈ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 2018 ರಲ್ಲಿ 22, 2019 ರಲ್ಲಿ 16 ಹಾಗೂ 2020 ರಲ್ಲಿ 3 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು ಎಂದು ಹೇಳಿದರು.

2020 ರಲ್ಲಿನ ಮೂರೂ ಪ್ರಕರಣಗಳು ಹೊರ ರಾಜ್ಯಗಳಿಂದ ವಲಸೆ ಬಂದವರಲ್ಲಿ ಕಂಡು ಬಂದಿವೆ. ಚಿಕಿತ್ಸೆ ಮೂಲಕ ಎಲ್ಲರನ್ನೂ ಗುಣಪಡಿಸಲಾಗಿದೆ. ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದರು.

2025 ರ ವೇಳೆಗೆ ರಾಜ್ಯದಲ್ಲಿ ಮಲೇರಿಯಾ ಸಂಪೂರ್ಣ ನಿವಾರಣೆ ಗುರಿ ನಿಗದಿಪಡಿಸಲಾಗಿದೆ. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಡಿಡಿಟಿ ಸಿಂಪರಣೆ, ಜ್ವರ ಪೀಡಿತರ ಸಮೀಕ್ಷೆ, ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ನಿಯಂತ್ರಣ ಕ್ರಮಗಳಲ್ಲಿ ಸೇರಿವೆ ಎಂದು ತಿಳಿಸಿದರು.

ತೀವ್ರ ಜ್ವರ, ಮೈ ಕೈ ನೋವು, ತೀವ್ರ ತರ ತಲೆ ನೋವು, ಮೈ ಬೆವರುವುದು, ಬಿಟ್ಟು ಬಿಟ್ಟು ಚಳಿಯಾಗುವುದು, ರಕ್ತ ಹೀನತೆ, ಕೆಲ ಸಂದರ್ಭಗಳಲ್ಲಿ ವಾಂತಿ ಆಗುವುದು ಮಲೇರಿಯಾ ಲಕ್ಷಣಗಳಾಗಿವೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ಪರೀಕ್ಷೆ ವ್ಯವಸ್ಥೆ ಇದೆ. ಯಾವುದೇ ಜ್ವರವಿದ್ದಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬಹುದು. ಮಲೇರಿಯಾ ದೃಢಪಟ್ಟಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗದಗೆಪ್ಪ ಕುಕೋಟೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಟಿ.ಆರ್. ದೊಡ್ಡೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ, ತಹಶೀಲ್ದಾರ್ ಗಂಗಾದೇವಿ, ಡಾ. ಭೀಮಾಶಂಕರ ಬಿ, ಗೌತಮ ಅರಳಿ, ಡಾ. ಶರಣಯ್ಯ ಸ್ವಾಮಿ ಇದ್ದರು.

ಸೊಳ್ಳೆ ಉತ್ಪತ್ತಿ ನಿರ್ಮೂಲನೆಯಿಂದ ರೋಗ ನಿಯಂತ್ರಣ
ಬೀದರ್: ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಿದ್ದಲ್ಲಿ ಮಲೇರಿಯಾ ಹಾಗೂ ಇತರ ಸೊಳ್ಳೆ ಜನಿತ ರೋಗಗಳನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಹೇಳಿದರು.

‘ಶೂನ್ಯ ಮಲೇರಿಯಾ ಗುರಿ ಸಾಧಿಸೋಣ’ ಎನ್ನುವ ಘೋಷವಾಕ್ಯದೊಂದಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದರೊಂದಿಗೆ ಜಿಲ್ಲೆಯಲ್ಲಿ ಮಲೇರಿಯಾ ಜಾಗೃತಿ ಜಾಥಾ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸೊಳ್ಳೆ ತಾಣಗಳ ಸಮೀಕ್ಷೆ ನಡೆಸಬೇಕು. ನಗರದ ಪ್ರದೇಶಗಳಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಕೈಗೊಂಡು ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲ ಆರಂಭವಾಗಿರುವ ಕಾರಣ ಗ್ರಾಮ ಪಂಚಾಯಿತಿ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮಗಳಲ್ಲಿ ಅಲ್ಲಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT