ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ: ಅನಧಿಕೃತ ಕೋಚಿಂಗ್ ಕೇಂದ್ರ ಮುಚ್ಚಲು ಸೂಚನೆ

ಹುಲಸೂರನಲ್ಲಿನ ತರಬೇತಿ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ದಿಢೀರ್ ಭೇಟಿ
Published 4 ಜುಲೈ 2024, 14:12 IST
Last Updated 4 ಜುಲೈ 2024, 14:12 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನಲ್ಲಿ ನಡೆಯುವ ಅನಧಿಕೃತ ಶಾಲೆಗಳು ಹಾಗೂ ಕೋಚಿಂಗ್ ಸೆಂಟರ್ ಮುಚ್ಚುವಂತೆ ಬಿಇಒ ಸಿದ್ದವೀರಯ್ಯ ರುದನೂರ ಮಾಲೀಕರಿಗೆ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದ ತಂಡವು ಬುಧವಾರ ವಾಸು ಕೋಚಿಂಗ್ ಸೆಂಟರ್‌ಗೆ ದಿಢೀರ್ ದಾಳಿ ನಡೆಸಿ ತರಬೇತಿ ನೆಪದಲ್ಲಿ ನಡೆಸುತ್ತಿರುವ ನವೋದಯ ಕೇಂದ್ರಗಳ ಮಾಲೀಕರ ಹಾಗೂ ಅನಧಿಕೃತ ಶಾಲೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

‘ಪಟ್ಟಣದ ವಿವಿಧ ಕಡೆಗಳಲ್ಲಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ, ಮಕ್ಕಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್‌ಗಳು ಅನಧಿಕೃತವಾಗಿ ತಲೆ ಎತ್ತಿ, ಪಾಲಕರಿಂದ ಹಣ ವಸೂಲಿಗಿಳಿದಿವೆ. ಸರ್ಕಾರದ ಅನುಮತಿ ಪಡೆಯದೆ ಶಾಲಾ ಮಕ್ಕಳಿಗೆ ತರಬೇತಿ ನೀಡುವುದು ಗಂಭೀರ ಅಪರಾಧ. ಕ್ರಿಮಿನಲ್ ಮೊಕದ್ದಮೆಯಾಗುತ್ತದೆ’ ಎಂದು ಸಿದ್ದವೀರಯ್ಯ ಹೇಳಿದರು.

‘ನೀವು ನಿಯಮಬಾಹಿರವಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದು, ಮೂಲ ಸೌಲಭ್ಯ, ಗಾಳಿ, ಬೆಳಕು ಇರದ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿಸುತ್ತಿರುದು ಕಂಡುಬಂದಿದೆ. ಕೆಲ ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಬಂದಿದ್ದಾರೆ. ಈ ಮಕ್ಕಳ ದಾಖಲಾತಿ ಯಾವ ಶಾಲೆಯಲ್ಲಿದೆ. ಈ ಮಕ್ಕಳ ಹಾಜರಾತಿ ಯಾವ ಶಿಕ್ಷಕರು ಹಾಕುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅವರ ವಿರುದ್ಧ ಸೂಕ್ತ ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದರು.

‘ವಾಸು ಕೋಚಿಂಗ್‌ ಸೆಂಟರ್, ಹಾಗೂ ಜ್ಞಾನದೀಪ ಕೋಚಿಂಗ್ ಸೆಂಟರ್‌ ಸೇರಿ ಖಾಸಗಿ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದು ಶಾಲೆಗೆ ಬಾರದೆ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿಗೆ ತೆರಳುತಿದ್ದು ಹಾಗೂ ಹಾಜರಾತಿ ಹಾಕುತ್ತಿರುವುದು ಕಂಡು ಬಂದರೆ ಮುಖ್ಯಗುರುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಇಒ ಎಚ್ಚರಿಕೆ ನೀಡಿದ್ದಾರೆ.

‘ತಾಲ್ಲೂಕಿನಲ್ಲಿ ಎಲ್ಲೆಲ್ಲಿ ಇಂತಹ ಅನಧಿಕೃತ ಕೇಂದ್ರಗಳು ನಡೆಯುತ್ತಿವೆ ಎಂಬುದರ ಬಗ್ಗೆ ನಮಗೆ ಮಾಹಿತಿ ನೀಡಬೇಕು’ ಎಂದು ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಮನೋಹರ ಕಂಟಿಕೊರೆ , ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಹಾವಣ್ಣ ಹಾಗೂ ಶಿಕ್ಷಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT