ಬೀದರ್: ಹನ್ನೆರಡನೆಯ ಶತಮಾನದಲ್ಲಿ ಬಾಳು ಬದುಕಿದ ನುಲಿಯ ಚಂದಯ್ಯ ಅವರು ಕಾಯಕ ನಿಷ್ಠೆಯಿಂದಲೇ ಪ್ರಸಿದ್ಧಿ ಪಡೆದರು ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನುಲಿಯ ಚಂದಯ್ಯನವರು ನಿತ್ಯ ಹಳ್ಳಕ್ಕೆ ಹೋಗಿ ಹುಲ್ಲನ್ನು ಕೊಯ್ದು ತಂದು ಹಗ್ಗ ತಯಾರಿಸಿ ಮಾರಾಟ ಮಾಡಿ ಬಂದಿದ್ದ ಹಣದಲ್ಲಿ ತಮ್ಮ ಜೀವನ ನಡೆಸುವುದರ ಜತೆಗೆ ದಾಸೋಹ ಮಾಡುತ್ತಿದ್ದರು. ದಾನಿಗಳು ಶ್ರೀಮಂತರೇ ಇರಬೇಕಂತಿಲ್ಲ ದಾನ ಮಾಡುವ ಗುಣವಿರಬೇಕು ಎನ್ನುವುದನ್ನು ತೋರಿಸಿಕೊಟ್ಟರು. ಕಾಯಕದ ಮಹತ್ವ ಸಾರಿದರು ಎಂದರು ತಿಳಿಸಿದರು.
ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಅಂದು ಎಲ್ಲರಿಗೂ ಕೊಡುವ ಮನಸ್ಸು ಇತ್ತು. ಕೇಳುವವರು ಇರಲಿಲ್ಲ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊಡುವುದಕ್ಕಿಂತ ಬೇಡುವ ಮನಸ್ಥಿತಿಗಳೇ ಹೆಚ್ಚಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಯಕ ಸಿದ್ಧಾಂತದ ಮೂಲಕ ಬದುಕು ರೂಪಿಸಿಕೊಳ್ಳಬೇಕಿದೆ. ಪ್ರತಿಯೊಂದಕ್ಕೂ ಕೈಚಾಚುವುದು ಕಡಿಮೆಯಾಗಬೇಕಿದೆ ಎಂದು ಹೇಳಿದರು.
ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಮಾತನಾಡಿದರು.
ಬಸವಾ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅವರು ನುಲಿಯ ಚಂದಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಬೀದರ್ ಜಿಲ್ಲಾ ಕೊರವ ಸಮಾಜದ ಜಿಲ್ಲಾ ಘಟಕದ. ಗೌರವಾಧ್ಯಕ್ಷ ವಿಶ್ವನಾಥ ಜಾಧವ, ಅಧ್ಯಕ್ಷ ಸಂತೋಷ ಕೊರವ, ಕಾರ್ಯದರ್ಶಿ ಸಂಜುಕುಮಾರ ಬೇಲೂರ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಮಹಾಂತೇಶ ಭಜಂತ್ರಿ, ಚಿಂತಕ ಶಿವಶರಣಪ್ಪ ಹುಗ್ಗೆ ಪಾಟೀಲ, ವೈಜನಾಥ ಸಾಳೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.