ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ಈರುಳ್ಳಿ ಬೆಲೆ– ಗ್ರಾಹಕ ನಿರಾಳ

Last Updated 27 ಸೆಪ್ಟೆಂಬರ್ 2019, 15:29 IST
ಅಕ್ಷರ ಗಾತ್ರ

ಬೀದರ್‌: ಕಳೆದ ವಾರ ಏರುಗತಿಯಲ್ಲಿದ್ದ ತರಕಾರಿ ಬೆಲೆ ಇದೀಗ ದಿಢೀರ್‌ ಇಳಿದಿದೆ. ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದ್ದ ಈರುಳ್ಳಿ ಬೆಲೆಯೂ ಕುಸಿದಿದೆ. ಇದು, ಈರುಳ್ಳಿ ಬೆಳೆಗಾರರು ಕಣ್ಣೀರು ಸುರಿಸುವಂತೆ ಮಾಡಿದರೆ, ಗ್ರಾಹಕರು ಮಂದಹಾಸ ಬೀರುವಂತಾಗಿದೆ.

ಪ್ರತಿ ಕ್ವಿಂಟಲ್‌ಗೆ ₹ 6 ಸಾವಿರ ಇದ್ದ ಈರುಳ್ಳಿ ಬೆಲೆ ₹ 4,500ಕ್ಕೆ ಇಳಿದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ ₹ 40 ರಿಂದ ₹ 45ಗೆ ಮಾರಾಟವಾಗುತ್ತಿದೆ. ನಿತ್ಯ ಅಡುಗೆಗೆ ಬಳಕೆಯಾಗುವ ಹಸಿ ಮೆಣಸಿನಕಾಯಿ ಬೆಲೆ ಕೂಡ ಪ್ರತಿ ಕ್ವಿಂಟಲ್‌ಗೆ ₹ 500 ಕಡಿಮೆಯಾಗಿದೆ.

ಆಲೂಗಡ್ಡೆ, ಎಲೆಕೋಸು, ಹೂಕೋಸು ಹಾಗೂ ಬೆಂಡೆಕಾಯಿ ಬೆಲೆ ಸ್ಥಿರವಾಗಿದೆ. ಬದನೆಕಾಯಿ, ಬೀಟ್‌ರೂಟ್ ಹಾಗೂ ಕೊತ್ತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ ಕುಸಿದಿದೆ. ಹೂಕೋಸು ₹ 2 ಸಾವಿರ, ಹಿರೇಕಾಯಿ, ತೊಂಡೆಕಾಯಿ ಹಾಗೂ ಪಾಲಕ್‌ ಬೆಲೆ ₹ 1 ಸಾವಿರ ಕಡಿಮೆಯಾಗಿದೆ.

ಹೈದರಾಬಾದ್‌ನಿಂದ ಬೀನ್ಸ್, ಗಜ್ಜರಿ, ಆಲೂಗಡ್ಡೆ, ಬೀಟ್‌ರೂಟ್, ಹೂಕೋಸು, ಎಲೆಕೋಸು, ತೊಂಡೆಕಾಯಿ,ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಜಿಲ್ಲೆಯ ಹುಮನಾಬಾದ್, ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನ ಗ್ರಾಮಗಳಿಂದ ಬೆಂಡೆಕಾಯಿ, ಹಿರೇಕಾಯಿ, ಬದನೆಕಾಯಿ, ಟೊಮೆಟೊ, ಪಾಲಕ್‌, ಕೊತಂಬರಿ, ಸಬ್ಬಸಗಿ ಮಾರುಕಟ್ಟೆಗೆ ಬಂದಿವೆ.

ಪುಣೆಯಲ್ಲಿ ನದಿಗೆ ಪ್ರವಾಹ ಬಂದಿರುವ ಕಾರಣ ಸೋಲಾಪುರದಿಂದ ಪುಣೆ ಹಾಗೂ ಪುಣೆ ಮಾರ್ಗವಾಗಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ತರಕಾರಿಯನ್ನು ಬೇರೆ ಕಡೆಗೆ ಪೂರೈಸಲಾಗುತ್ತಿದೆ. ಹೀಗಾಗಿ ಸೋಲಾಪುರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹಠಾತ್ ಕುಸಿದಿದೆ.

ಬೀದರ್‌, ಕಲಬುರ್ಗಿ ಹಾಗೂ ನೆರೆಯ ತೆಲಂಗಾಣದಲ್ಲಿ 15 ದಿನಗಳಿಂದ ಸಾಧಾರಣ ಮಳೆಯಾಗುತ್ತಿದೆ. ರೈತರು ಸ್ವಲ್ಪಮಟ್ಟಿಗೆ ಬೆಳೆದ ತರಕಾರಿಯನ್ನು ಮಾತ್ರ ಮಾರುಕಟ್ಟೆಗೆ ತರುತ್ತಿದ್ದಾರೆ. ಹೀಗಾಗಿ ಸಾಮಾನ್ಯ ಗ್ರಾಹಕನ ಕೈಗೆಟಕುವ ದರದಲ್ಲಿ ಕೊತಂಬರಿ ಹಾಗೂ ಸಬ್ಬಸಗಿ ಸೊಪ್ಪು ದೊರೆಯುತ್ತಿದೆ.

‘ಈ ವಾರ ಬಹುತೇಕ ಎಲ್ಲ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನೆಮ್ಮದಿಯ ಉಸಿರು ಬಿಡುವಂತಾಗಿದೆ. ಈರುಳ್ಳಿ ಬೆಲೆ ಕಡಿಮೆಯಾಗಿರುವ ಕಾರಣ ಹೋಟೆಲ್‌ಗಳ ಮಾಲೀಕರು ಈರುಳ್ಳಿ ಮೂಟೆಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಗಾಂಧಿ ಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದ್ದಾರೆ.

ತರಕಾರಿ(ಪ್ರತಿಕೆಜಿ) ಕಳೆದ ವಾರ ಈ ವಾರ
ಈರುಳ್ಳಿ 50-60 40-45
ಮೆಣಸಿನಕಾಯಿ 20-25 15-20
ಆಲೂಗಡ್ಡೆ 15-20 15-20
ಎಲೆಕೋಸು 25-30 25-30
ಬೆಳ್ಳುಳ್ಳಿ 150-160 160-170
ಗಜ್ಜರಿ 50-60 40-45
ಬೀನ್ಸ್‌ 70-80 60-70
ಬದನೆಕಾಯಿ 60-70 35-40
ಮೆಂತೆ ಸೊಪ್ಪು 60-70 50-60
ಹೂಕೋಸು 60-70 40-50
ಸಬ್ಬಸಗಿ 30-40 30-40
ಬೀಟ್‌ರೂಟ್‌ 60-70 30-40
ತೊಂಡೆಕಾಯಿ 40-50 30-40
ಕರಿಬೇವು 20-30 20-30
ಕೊತ್ತಂಬರಿ 60-70 30-40
ಟೊಮೆಟೊ 10-15 15-20
ಪಾಲಕ್‌ 30-40 25-30
ಬೆಂಡೆಕಾಯಿ 30-40 30-40
ಹಿರೇಕಾಯಿ 40-50 30-40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT