ಭಾನುವಾರ, ಜೂನ್ 26, 2022
21 °C

ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ: ಪ್ರತಿಭಾವಂತರಿಗೆ ಬೇಸರ, ದುರ್ಬಲರಿಗೆ ಸಂತಸ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಗೊಂದಲ ಮುಂದುವರಿದ ಸಂದರ್ಭದಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಮನೆಯಲ್ಲೇ ಕುಳಿತು ಪರೀಕ್ಷೆ ಬರೆಯುವಂತೆ ಹೊರಡಿಸಿದ ಆದೇಶ ವಿದ್ಯಾರ್ಥಿಗಳು, ಪಾಲಕರು ಹಾಗೂ ಉಪನ್ಯಾಸಕರನ್ನು ದಿಗ್ಭ್ರಮೆಗೊಳಿಸಿದೆ.

ವಿದ್ಯಾರ್ಥಿಗಳಿಗೆ ಎರಡು ಪ್ರಶ್ನೆ ಪತ್ರಿಕೆಗಳನ್ನು ನೀಡಿ ಅವರು ಮನೆಯಲ್ಲಿ ಕುಳಿತು ಬರೆದು ಕಳಿಸಿದರೆ ಸಾಕು ಎಂದು ಸೂಚಿಸಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಪರೀಕ್ಷೆ ವಿಶ್ವಾಸಾರ್ಹತೆಗೂ ಧಕ್ಕೆ ಉಂಟು ಮಾಡಿದೆ.

ಕೋವಿಡ್‌ ಸಂದರ್ಭದಲ್ಲಿನ ಪರೀಕ್ಷೆ ನಕಲು ಮಾಡಲು ಸರ್ಕಾರ ಒದಗಿಸಿದ ಅವಕಾಶ ಎಂದು ಕೆಲ ವಿದ್ಯಾರ್ಥಿಗಳು ಟೀಕಿಸಿದರೆ, ಚೆನ್ನಾಗಿ ಓದಿದವರಿಗೆ ಮಾಡಿದ ಅವಮಾನ ಎಂದು ಪ್ರತಿಭಾವಂತ ವಿದ್ಯಾರ್ಥಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಪಾಲಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈಗಾಗಲೇ ಕಾಲೇಜು ಹಂತದಲ್ಲಿ ತ್ರೈಮಾಸಿಕ ಪರೀಕ್ಷೆ ಹಾಗೂ ಅರ್ಧ ವಾರ್ಷಿಕ ಪರೀಕ್ಷೆ ನಡೆಸಲಾಗಿದೆ. ಈ ವರ್ಷದ ಪ್ರಥಮ ಪಿಯುಸಿ ಫಲಿತಾಂಶ ನಿರ್ಧರಿಸುವಾಗ ತ್ರೈಮಾಸಿಕ ಪರೀಕ್ಷೆ ಹಾಗೂ ಅರ್ಧ ವಾರ್ಷಿಕ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿದರೆ ಉತ್ತಮ’ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಅಭಿಪ್ರಾಯಪಡುತ್ತಾರೆ.

ಬೀದರ್‌ನ ಒಂದೇ ಕಾಲೇಜಿನಲ್ಲಿ 400 ವಿದ್ಯಾರ್ಥಿಗಳು ಇದ್ದಾರೆ. ಒಬ್ಬ ವಿದ್ಯಾರ್ಥಿ ಒಂದು ವಿಷಯದ ಹತ್ತು ಪುಟಗಳ ಉತ್ತರ ಪತ್ರಿಕೆ ಕಳಿಸಬಹುದು. ಒಬ್ಬ ಉಪನ್ಯಾಸಕರ ಮೊಬೈಲ್‌ನಲ್ಲಿ 400 ವಿದ್ಯಾರ್ಥಿಗಳ ಪಶ್ನೆಪತ್ರಿಕೆ ಸಂಗ್ರಹ ಸಾಧ್ಯವಿಲ್ಲ. ಕಳಿಸಿದರೂ ಅದನ್ನು ಇಂತಹವರದ್ದೇ ಎಂದು ಗುರುತಿಸಿಕೊಳ್ಳುವುದು ಹಾಗೂ ಹೊಂದಿಸಿಕೊಳ್ಳುವುದು ಹೇಗೆ? ಇಲಾಖೆ ಅಧಿಕಾರಿಗಳು ವಿವೇಚನೆ ಬಳಸದೆ ತೀರ್ಮಾನ ಕೈಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಪಾಲಕರು.

‘ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಕುಳಿತು ಪರೀಕ್ಷೆ ಬರೆಯುವುದರಿಂದ ಸಹಜವಾಗಿ ನಕಲು ಮಾಡಲಿದ್ದಾರೆ. ನೂರಕ್ಕೆ ನೂರು ಅಂಕ ಅಥವಾ ತೊಂಬತ್ತಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರೂ ಅಚ್ಚರಿ ಇಲ್ಲ. ಇದರಿಂದ ಸರ್ಕಾರದ ಆದೇಶ ನಗೆಪಾಟಿಲಿಗೆ ಗುರಿಯಾಗಲಿದೆ’ ಎಂದು ಹಳ್ಳಿಖೇಡ(ಬಿ) ಕಾಲೇಜಿನ ವಿದ್ಯಾರ್ಥಿನಿ ಅಂಬಿಕಾ ಸಂಜುಕುಮಾರ ಹೇಳುತ್ತಾರೆ.

‘ನನ್ನ ಮಗಳು ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಇದ್ದಾಳೆ. ತ್ರೈಮಾಸಿಕ, ಅರ್ಧ ವಾರ್ಷಿಕೆ ಪರೀಕ್ಷೆ ನಡೆಸಲಾಗಿದೆ. ಮನೆಯಲ್ಲಿ ಕುಳಿತು ವಾರ್ಷಿಕ ಪರೀಕ್ಷೆ ಬರೆಯುವುದು ಹಾಸ್ಯಾಸ್ಪದ. ಇದರಿಂದ ಶೈಕ್ಷಣಿಕ ಗುಣಮಟ್ಟ ಕುಸಿಯಲಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೀದರ್‌ನ ಪ್ರಭಾ ಏಕಲಾರಕರ್‌.

‘ಸರ್ಕಾರಿ ಪಿಯು ಕಾಲೇಜಿನ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರ ಬಳಿ ಸ್ಮಾರ್ಟ್‌ ಪೋನ್ ಇರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತರ ಪತ್ರಿಕೆಗಳನ್ನು ಕಳಿಸಿಕೊಡಲು ಸಾಧ್ಯವಾಗುವುದಿಲ್ಲ. ನೆಟವರ್ಕ್‌ ಸಮಸ್ಯೆಯಿಂದ ಅಪ್‌ಲೋಡ್‌, ಡೌನ್‌ಲೌಡ್‌ ಎರಡೂ ಆಗುವುದಿಲ್ಲ. ಇದರಿಂದ ಪರೀಕ್ಷೆ ನಡೆಸಲು ತಾಂತ್ರಿಕವಾಗಿ ಸಮಸ್ಯೆಯಾಗಲಿದೆ’ ಎಂದು ಹೇಳುತ್ತಾರೆ ಔರಾದ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು.

‘ಉತ್ತರ ಪತ್ರಿಕೆಗಳನ್ನು ಫೋನ್ ನಲ್ಲಿ ನೋಡಿಕೊಂಡು ಮೌಲ್ಯಮಾಪನ ಮಾಡಲು ಸಾಧ್ಯವಾಗದು. ಉಪನ್ಯಾಸಕರು ಮೌಲ್ಯಮಾಪನ ಮಾಡದೆ ಅಂಕ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅವೈಜ್ಞಾನಿಕ ಪರೀಕ್ಷಾ ಪದ್ಧತಿಯನ್ನು ತಕ್ಷಣ ಕೈಬಿಡಬೇಕು’ ಎಂದು ಪಾಲಕರು ಆಗ್ರಹಿಸಿದ್ದಾರೆ.

***

16,905 ವಿದ್ಯಾರ್ಥಿಗಳು

ಬೀದರ್‌ ಜಿಲ್ಲೆಯಲ್ಲಿ ಪ್ರಥಮ ಪಿಯುಸಿಯಲ್ಲಿ 8,156 ವಿದ್ಯಾರ್ಥಿಗಳು ಹಾಗೂ 8,749 ವಿದ್ಯಾರ್ಥಿನಿಯರು ಸೇರಿ ಒಟ್ಟು 16,905 ಜನ ಇದ್ದಾರೆ. ಅವೈಜ್ಞಾನಿಕ ಪರೀಕ್ಷಾ ಪದ್ಧತಿ ಕೈಬಿಡುವಂತೆ ಉಪನ್ಯಾಸಕರು ಮನವಿ ಕೊಟ್ಟಿದ್ದಾರೆ. ಅದನ್ನು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಹಬಾದಕರ್ ಹೇಳುತ್ತಾರೆ.

ಕೋವಿಡ್‌ ಕಾರಣ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ನೆಟ್‌ವರ್ಕ್ ಸಮಸ್ಯೆ ಇದ್ದರೆ ವಿದ್ಯಾರ್ಥಿಗಳು ಮನೆಯಲ್ಲೇ ಬರೆದ ಉತ್ತರ ಪತ್ರಿಕೆಯನ್ನು ಉಪನ್ಯಾಸಕರಿಗೆ ತಲುಪಿಸಬಹುದು. ಇಲಾಖೆಯ ಆದೇಶವನ್ನು ಪಾಲಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.