ಬೀದರ್: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಪೋಸ್ಟರ್ ಹಾಗೂ ಬ್ಯಾನರ್‍ಗಳನ್ನು ಮುದ್ರಿಸುವ ಮುನ್ನ ಅಭ್ಯರ್ಥಿಗಳಿಂದ ಕಡ್ಡಾಯವಾಗಿ ಆರ್.ಒ. ಅನುಮತಿ ಪತ್ರ ಪಡೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಹಾಗೂ ಮುದ್ರಕರ ಸಭೆಯಲ್ಲಿ ಅವರು ಮಾತನಾಡಿದರು.
ಕರಪತ್ರ ಮುದ್ರಿಸಲು ಬರುವವರಿಂದ ಅಧಿಕೃತ ಅನುಮತಿ ಪತ್ರ ಪಡೆದ ನಂತರವೇ ಮುದ್ರಣ ಮಾಡಬೇಕು. ಕರ ಪತ್ರದ ಕೆಳಗೆ ಮುದ್ರಕರ ಹೆಸರು ನಮೂದಿಸಬೇಕು. ಪ್ರತಿ ಪುಟದ ಮುದ್ರಣಕ್ಕೆ ಈಗಾಗಲೇ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಪ್ರಿಂಟಿಂಗ್ ಪ್ರೆಸ್‍ನವರು ತಾವು ಮುದ್ರಿಸಿದ ಪ್ರತಿಗಳ ಒಂದು ಪ್ರತಿಯನ್ನು ಆರ್‍ಒ ಅವರಿಗೆ ಸಲ್ಲಿಸಬೇಕು. ಯಾವುದೇ ಜಾತ್ರೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕರಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಹಾಕಬಾರದು. ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಚುನಾವಣೆ ನೀತಿ ಸಂಹಿತೆ ಚಾಚೂತಪ್ಪದೆ ಪಾಲಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಮಾತನಾಡಿ, ಕರಪತ್ರಗಳ ಕೆಳಗಡೆ ಪ್ರಿಂಟಿಂಗ್ ಪ್ರೆಸ್ ಹೆಸರು ಮುದ್ರಿಸುವುದರಿಂದ ಪರಿಶೀಲನೆ ನಡೆಸಲು ಅನುಕೂಲವಾಗುತ್ತದೆ. ಅವು ಎಲ್ಲಿ ಮುದ್ರಣಗೊಂಡಿವೆ, ಎಷ್ಟು ಸಂಖ್ಯೆಯಲ್ಲಿ ಮುದ್ರಣಗೊಂಡಿವೆ ಎನ್ನುವ ಮಾಹಿತಿ ಸ್ಪಷ್ಟವಾಗಿ ಲಭಿಸುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಶೀಲವಂತ, ಬೀದರ್ ಪ್ರಿಂಟಿಂಗ್ ಪ್ರೆಸ್ ಅಸೋಸಿಯೇಷನ್ ಅಧ್ಯಕ್ಷ ರೇವಣಸಿದ್ದಯ್ಯ ಜಿ. ಸ್ವಾಮಿ, ಉಪಾಧ್ಯಕ್ಷ ವಿಶ್ವನಾಥ ತೋರಣೆ, ವಿವಿಧ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.