ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತುವಾರಿ ಸಚಿವ ಪ್ರಭು ಚವಾಣ್ ಗರಂ

ಬ್ರಿಮ್ಸ್‌ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಕಾಣದ ವೈದ್ಯರು, ಸಿಬ್ಬಂದಿ
Last Updated 9 ಮೇ 2021, 6:38 IST
ಅಕ್ಷರ ಗಾತ್ರ

ಬೀದರ್: ಬ್ರಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಾಣದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಗರಂ ಆದರು.

ಬ್ರಿಮ್ಸ್ ನೂತನ ಬೋಧಕ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ನಂತರ ಅಧಿಕಾರಿಗಳ ಸಭೆ ನಡೆಸಿದ ಆವರು, ಮೊಬೈಲ್‍ನಲ್ಲೇ ಕೋವಿಡ್ ವಾರ್ಡ್‍ಗಳ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದರು.
ಹಾಜರಾತಿ ಸರಿ ಇದ್ದರೂ, ಆಸ್ಪತ್ರೆಯಲ್ಲಿ ಅಗತ್ಯಕ್ಕೆ ತಕ್ಕಂತೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕಾಣುತ್ತಿಲ್ಲವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ದಿನ ಎರಡು ಬಾರಿ ಕೋವಿಡ್ ವಾರ್ಡ್‍ಗೆ ಭೇಟಿ ಕೊಟ್ಟು ಅಲ್ಲಿನ ಸ್ಥಿತಿಗತಿ ಪರಿಶೀಲಿಸಬೇಕು. ಕೋವಿಡ್ ಸೋಂಕಿತರನ್ನು ನೋಡಲು ಖುದ್ದು ವೈದ್ಯರೇ ಹೋಗಬೇಕು. ಜವಾಬ್ದಾರಿಯನ್ನು ಕೇವಲ ನರ್ಸ್‍ಗಳ ಮೇಲೆ ವಹಿಸಬಾರದು ಎಂದು ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಅವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ರೆಮ್‍ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರಿಗೆ ಸೂಚಿಸಿದರು.
ಆಮ್ಲಜನಕ ಹಾಗೂ ರೆಮ್‍ಡಿಸಿವಿರ್ ಇಂಜೆಕ್ಷನ್ ಜಿಲ್ಲೆಗೆ ಬೇಡಿಕೆಗೆ ಅನುಸಾರವಾಗಿ ಬರುತ್ತಿವೆ. ಸಚಿವ ಜಗದೀಶ್ ಶೆಟ್ಟರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಈ ಸಂಬಂಧ ಮಾತನಾಡಿದ್ದೇನೆ ಎಂದು ತಿಳಿಸಿದರು.

ಕೋವಿಡ್ ನಿಯಂತ್ರಣಕ್ಕಾಗಿ ಸೋಮವಾರದಿಂದ ವಿಧಿಸಲಾಗುವ ಲಾಕ್‍ಡೌನ್‍ಗೆ ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿಗಳಾದ ಭುವನೇಶ ಪಾಟೀಲ, ಗರಿಮಾ ಪನ್ವಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ರತಿಕಾಂತ ಸ್ವಾಮಿ ಇದ್ದರು.

ಆಮ್ಲಜನಕ ಸಂಗ್ರಹ ಟ್ಯಾಂಕ್ ವೀಕ್ಷಣೆ

ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಆಮ್ಲಜನಕ ಸಂಗ್ರಹ ಟ್ಯಾಂಕ್ ವೀಕ್ಷಿಸಿದರು.

ಬ್ರಿಮ್ಸ್‌ನಲ್ಲಿ 14 ಕೆ.ಎಲ್. ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಟ್ಯಾಂಕ್ ಇದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ ಇನ್ನೂ 5 ಕೆ.ಎಲ್. ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಘಟಕ ಸ್ಥಾಪನೆ ಕಾಮಗಾರಿ ಪ್ರಗತಿಯಲ್ಲಿದ್ದು, ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಸಚಿವರಿಗೆ ಮಾಹಿತಿ ನೀಡಿದರು.

ಬ್ರಿಮ್ಸ್‌ಗೆ ಪ್ರತಿ ದಿನ 12.15 ಕೆ.ಎಲ್. ಆಮ್ಲಜನಕದ ಅವಶ್ಯಕತೆ ಇದೆ ಎಂದು ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ತಿಳಿಸಿದರು.

ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆಯ 2 ಸಾವಿರ ಕ್ಯುಸೆಕ್ ಮೀಟರ್ ಸಾಮರ್ಥ್ಯದ ವೆಪ್‍ರೈಟರ್ ಯಂತ್ರವನ್ನು ಸಹ ಸಚಿವರು ವೀಕ್ಷಿಸಿದರು. ಯಂತ್ರದ ಕುರಿತು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT