ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Prajavani phone in: ಆನ್‌ಲೈನ್‌ನಲ್ಲೇ ನೇರ ಕಲಿಕಾ ಲೈಸೆನ್ಸ್

Last Updated 1 ಡಿಸೆಂಬರ್ 2021, 4:06 IST
ಅಕ್ಷರ ಗಾತ್ರ

ಬೀದರ್‌: ‘ಪ್ರಜಾವಾಣಿ’ ವತಿಯಿಂದ ಇಲ್ಲಿಯ ಆರ್‌ಟಿಒ ಕಚೇರಿಯಲ್ಲಿ ಮಂಗಳವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನ ಲೈಸೆನ್ಸ್ ಸರಳ ರೀತಿ ದೊರಕುವಂತಾಗಬೇಕು, ಕಚೇರಿಯಲ್ಲಿನ ಏಜೆಂಟರ ಹಾವಳಿ ತಪ್ಪಿಸಬೇಕು ಹಾಗೂ ಆಟೊ ಚಾಲಕರಿಗೆ ಸಂಚಾರ ನಿಯಮಗಳ ಸರಿಯಾದ ತಿಳಿವಳಿಕೆ ಕೊಡಬೇಕು ಎಂಬ ಬೇಡಿಕೆಗಳುಳ್ಳ ಕರೆಗಳು ಜಿಲ್ಲೆಯ ವಿವಿಧೆಡೆಯಿಂದ ಬಂದವು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಅವರು ಕ್ಲಿಷ್ಟಕರ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುವ ಮೂಲಕ ಕೇಳುಗರ ವಿಶ್ವಾಸ ಗಳಿಸಿದರು. ಅಂತರರಾಜ್ಯ ಮಧ್ಯೆ ಸಂಚರಿಸುವ ವಾಹನಗಳ ಮಾಲೀಕರ ಸಮಸ್ಯೆಗಳ ಇತ್ಯರ್ಥಕ್ಕೆ ಕೆಲ ನಿರ್ಧಾರಗಳನ್ನು ಸರ್ಕಾರದ ಮಟ್ಟದಲ್ಲೇ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಉತ್ತರಿಸಿದರು.

ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ, ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು. ಅನೇಕ ಜೀವಗಳನ್ನೂ ಉಳಿಸಲು ಸಾಧ್ಯವಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

l ಪದವಿ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ಆಯಾ ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ಚಾಲನಾ ಪರವಾನಗಿ (ಡ್ರೈವಿಂಗ್‌ ಲೈಸೆನ್ಸ್) ಕೊಡಲು ಸಾಧ್ಯವಿದೆಯೇ?

-ಶ್ವೇತಾ ರೆಶೆಟ್ಟಿ, ಬೀದರ್‌ನ ಪದವಿ ಕಾಲೇಜಿನ ವಿದ್ಯಾರ್ಥಿನಿ

ಉತ್ತರ: ಇದೊಂದು ಒಳ್ಳೆಯ ಸಲಹೆ. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಇನ್ನು 18 ವರ್ಷ ಮೇಲ್ಪಟ್ಟವರು ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ (https://parivahan.gov.in/parivahan/) ಮೂಲಕವೇ ಅರ್ಜಿ ಸಲ್ಲಿಸಿ ಕಲಿಕಾ ಲೈಸೆನ್ಸ್ ಪಡೆದುಕೊಳ್ಳಬಹುದು. ಯಾರೂ ಕಚೇರಿಗೆ ಬರುವ ಅಗತ್ಯ ಇಲ್ಲ. ಡಿಎಲ್‌ ಪಡೆಯಲು ಒಂದು ಬಾರಿ ಪರೀಕ್ಷೆಗಾಗಿ ಕಡ್ಡಾಯವಾಗಿ ಬರಬೇಕಾಗಲಿದೆ.

l ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗೆ ಸ್ವಂತ ಕಟ್ಟಡ ಏಕೆ ಇಲ್ಲ?

-ಬಸವರಾಜ ಗುಡಪಳ್ಳಿ, ಔರಾದ್

ಉತ್ತರ: ಆರ್‌ಟಿಒ ಕಚೇರಿ ಪ್ರಸ್ತುತ ಹೌಸಿಂಗ್‌ ಬೋರ್ಡ್‌ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾಹನ ಚಾಲನಾ ಪರೀಕ್ಷೆಗೆ ಮೈದಾನ ಬೇಕು. ನೌಬಾದ್‌ನಲ್ಲಿಯೇ ಮೂರು ತಿಂಗಳಲ್ಲಿ ₹ 7.5 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಜಿಲ್ಲಾಧಿಕಾರಿ ರಾಮಚಂದ್ರನ್‌ ಅವರು ಡ್ರೈವಿಂಗ್‌ ಟ್ರ್ಯಾಕ್‌ಗೆ ಬೀದರ್‌ ತಾಲ್ಲೂಕಿನ ಅಯಾಜಪುರದಲ್ಲಿ 7.32 ಎಕರೆ ಜಾಗ ಮಂಜೂರು ಮಾಡಿದ್ದಾರೆ.

l ರಾತ್ರಿ ವೇಳೆ ರಸ್ತೆ ಮಧ್ಯೆ ಬ್ಯಾರಿಕೇಡ್‌ ಅಡ್ಡಲಾಗಿ ಇಡುವುದು ಸರಿಯೇ?

-ಆನಂದ ಪಾಟೀಲ, ಚೌಳಿ

ಉತ್ತರ: ರಾತ್ರಿ ವೇಳೆಯಲ್ಲಿ ತಪಾಸಣೆಗೆ ಪೊಲೀಸರು ಬ್ಯಾರಿಕೇಡ್‌ ಹಾಕುವುದು ಸಹಜ. ಬ್ಯಾರಿಕೇಡ್‌ ಇಡುವ ಸ್ಥಳದಲ್ಲಿ ಪೊಲೀಸರು ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಈ ವಿಷಯವನ್ನು ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

l ಆರ್‌ಟಿಒ ಕಚೇರಿಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದ್ದು. ಅದನ್ನು ತಡೆಯಲು ಸಾಧ್ಯವಿಲ್ಲವೆ?

-ರಮೇಶ ಕುಲಕರ್ಣಿ, ಬೀದರ್‌ನ ಮಾತೆ ಮಾಣಿಕೇಶ್ವರಿ ಕಾಲೇಜು ಅಧ್ಯಕ್ಷ

ಉತ್ತರ: ಈಗ ಎಲ್ಲವೂ ಆನ್‌ಲೈನ್‌ ಮೂಲಕ ನಡೆಯುತ್ತಿದೆ. ಲೈಸೆನ್ಸ್‌ಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ಯಾವ ದಿನ ಪರೀಕ್ಷೆಗೆ ಹಾಜರಾಗಬೇಕು ಎನ್ನುವ ಸಂದೇಶವೂ ಅದರಲ್ಲೇ ಬರುತ್ತದೆ. ಯಾರೂ ಏಜೆಂಟರ ಮೊರೆ ಹೋಗಬೇಕಾಗಿಲ್ಲ. ಅನಕ್ಷರಸ್ಥರಿಗಾಗಿಯೇ ಒಂದು ಪ್ರತ್ಯೇಕ ಕೌಂಟರ್‌ ಇದೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕೆಲವರು ಡಿಟಿಪಿ ಅಂಗಡಿ ಇಟ್ಟುಕೊಂಡಿದ್ದಾರೆ. ಅವರಿಗೂ ಆರ್‌ಟಿಒ ಕಚೇರಿಗೂ ಸಂಬಂಧವಿಲ್ಲ. ಆದರೂ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕಚೇರಿ ಸಿಬ್ಬಂದಿ ಅವ್ಯವಹಾರದಲ್ಲಿ ತೊಡಗಿದ್ದರೆ ಮುಲಾಜಿಲ್ಲದೆ ಶಿಸ್ತುಕ್ರಮ ಕ್ರಮ ಕೈಗೊಳ್ಳಲಾಗುವುದು.

l ಹಿರಿಯ ನಾಗರಿಕರು ಎಷ್ಟು ಅವಧಿಯ ವರೆಗೆ ಡ್ರೈವಿಂಗ್‌ ಲೈಸೆನ್ಸ್‌ ಪಡೆಯಬಹುದು.

-ವೀರಭದ್ರಪ್ಪ ಉಪ್ಪಿನ್, ನಿವೃತ್ತ ಉಪ ಹಣಕಾಸು ನಿಯಂತ್ರಣ ಅಧಿಕಾರಿ

ಉತ್ತರ: ವಯಸ್ಸಿನ ಗರಿಷ್ಠ ಮಿತಿ ಇಲ್ಲ. ಆದರೆ, 50 ವರ್ಷಗಳ ನಂತರ ಪ್ರತಿ ಐದು ವರ್ಷಕ್ಕೊ‌ಮ್ಮೆ ಹೆಲ್ತ್ ಫಿಟ್‌ನೆಸ್‌ ಸರ್ಟಿಫಿಕೆಟ್‌ ಕೊಟ್ಟು ಚಾಲನಾ ಪರವಾನಗಿ ನವಿಕರಣ ಮಾಡಿಕೊಳ್ಳಬಹುದು.

l ರಾತ್ರಿ ವೇಳೆ ಹುಮನಾಬಾದ್‌ ಆರ್‌ಟಿಒ ಕಚೇರಿ ಬಳಿ ಸಿಬ್ಬಂದಿಯೇ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆಯಲ್ಲ?

-ಸಚಿನ್‌ ವಿಶ್ವಕರ್ಮ, ಬೀದರ್

ಜಿಲ್ಲೆಯೊಳಗಿನ ಚೆಕ್‌ಪೋಸ್ಟ್‌ಗಳನ್ನು ಬಂದ್ ಮಾಡುವ ಪ್ರಕ್ರಿಯೆ ಪರಿಶೀಲನಾ ಹಂತದಲ್ಲಿ ಇದೆ. ಇನ್ನು ಯಾವುದೇ ಚೆಕ್‌ಪೋಸ್ಟ್‌ ಇರಲಾರದು. ಆದರೂ, ನಿರ್ದಿಷ್ಟವಾದ ಲಿಖಿತ ದೂರು ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.

l ಜೂನ್‌ನಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ಡ್ರೈವಿಂಗ್‌ ಲೈಸೆನ್ಸ್‌ ರಿನಿವಲ್‌ ಅರ್ಜಿ ಹಾಕಿದ್ದೇನೆ. ಈ ವರೆಗೂ ರಿನಿವಲ್‌ ಆಗಿಲ್ಲ.

-ವಿನೋದ ಕುಮಾರ್‌, ಕಮಲನಗರ ನಿವಾಸಿ

ಉತ್ತರ: ಯಾವುದೇ ಅರ್ಜಿ ಒಂದು ತಿಂಗಳಲ್ಲಿ ವಿಲೇವಾರಿ ಆಗಲೇ ಬೇಕು. ಎಲ್ಲಿ ಸಮಸ್ಯೆಯಾಗಿದೆ ಪರಿಶೀಲಿಸಬೇಕಾಗುತ್ತದೆ. ಕಚೇರಿಗೆ ಬಂದು ನೇರವಾಗಿ ನನ್ನ ಭೇಟಿಯಾದರೆ ಸಮಸ್ಯೆ ಪರಿಹರಿಸಲಾಗುವುದು.

l ಆರ್‌.ಟಿ.ಒ ಕಚೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ ತಪ್ಪಿಸಿ

-ಟಿ.ಎಂ.ಮಚ್ಚೆ, ಎಂ.ಎಸ್‌.ಮನೋಹರ

ಉತ್ತರ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದ ನಂತರ ಶೇಕಡ 60ರಷ್ಟು ಜನ ಆರ್‌ಟಿಒ ಕಚೇರಿಗೆ ಬರುವುದು ಕಡಿಮೆಯಾಗಿದೆ. ಶೇಕಡ 40ರಷ್ಟು ಜನ ಮಾತ್ರ ಕಚೇರಿಗೆ ಬರುತ್ತಿದ್ದಾರೆ. ಬರುವ ದಿನಗಳಲ್ಲಿ ಈ ಸಂಖ್ಯೆಯೂ ಕಡಿಮೆಯಾಗಲಿದೆ. ಕಚೇರಿ ಇರುವ ಕಾಂಪ್ಲೆಕ್ಸ್‌, ಹೌಸಿಂಗ್‌ ಡಿಪಾರ್ಟ್‌ಮೆಂಟ್‌ಗೆ ಸೇರಿದೆ. ಕಚೇರಿ ಸಮೀಪ ಇರುವ ಇಂಟರ್‌ನೆಟ್‌ ಸೆಂಟರ್‌ಗೂ ನಮಗೂ ಸಂಬಂಧವಿಲ್ಲ. ಯಾರೂ ಮಧ್ಯವರ್ತಿಗಳ ಮೂಲಕ ಬರುವ ಅಗತ್ಯವಿಲ್ಲ. ನೇರವಾಗಿ ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಿ ಲೈಸೆನ್ಸ್‌ ಪಡೆಯಬಹುದಾಗಿದೆ.

l ಬೀದರ್‌ನ ಅಂಬೇಡ್ಕರ್, ಬಸವೇಶ್ವರ ವೃತ್ತದ ಬಳಿ ಆಟೊಗಳ ಬೇಕಾಬಿಟ್ಟಿ ನಿಲುಗಡೆ ತಡೆಯಲು ಸಾಧ್ಯವಿಲ್ಲವೆ?

-ಶ್ರೀಕಾಂತ, ಬೀದರ್,

ಉತ್ತರ: ನಗರಸಭೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಸಂಚಾರ ನಿಯಮ ಉಲ್ಲಂಘಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಸಂಚಾರ ನಿಯಮಗಳ ಜಾಗೃತಿಗಾಗಿ ಪೊಲೀಸರ ಸಹಕಾರದೊಂದಿಗೆ ಆಟೊ ಚಾಲಕರಿಗೆ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

ನಿವೃತ್ತ ಪ್ರಾಧ್ಯಾಪಕ ಗುಂಡೇರಾವ್‌ ಪಾಟೀಲ, ಔರಾದ್‌ನ ಆಶೋಕ ಶೆಂಬಳ್ಳಿ, ಖಟಕಚಿಂಚೋಳಿಯ ರೇವಣಸಿದ್ದ ಜಾಡರ, ನಾಗರಾಜ, ಚೇತನ ಸೋರಳ್ಳಿ ಆಣದೂರ್, ಶ್ರೀನಿವಾಸ ರೆಡ್ಡಿ ಚಿಲ್ಲರ್ಗಿ, ರೂಪಾವತಿ,ಮಹೇಶ ಗೋರನಾಳಕರ್, ವಿಜಯಕುಮಾರ ಅಂಬಾರಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ ನೇರವಾಗಿ ಕರೆ ಮಾಡಿ ಪ್ರಶ್ನೆಗಳನ್ನು ಕೇಳಿ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡರು.

ಆನ್‌ಲೈನ್‌ನಲ್ಲಿ ಡಿಎಲ್‌ ಸ್ವೀಕೃತಿ ವ್ಯವಸ್ಥೆ

ಚಾಲನಾ ಲೈಸೆನ್ಸ್ ಪಡೆಯಲು ಮಧ್ಯವರ್ತಿಗಳ ಅಗತ್ಯವಿಲ್ಲ. ಮನೆಯಿಂದಲೇ ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಈಗ ಸುಲಭವಾಗಿ ಪಡೆಯಬಹುದು. ಈ ಹಿಂದೆ ಆನ್‌ಲೈನ್ ಮೂಲಕ ಡಿಎಲ್‌ಗೆ ಅರ್ಜಿ ಸಲ್ಲಿಸಿದ್ದರೂ ದಾಖಲೆಗಳ ಪರಿಶೀಲನೆಗೆ ಕಚೇರಿಗೆ ಹೋಗಬೇಕಾಗಿತ್ತು. ಈಗ ಎಲ್ಲ ದಾಖಲೆಗಳನ್ನು ಆನ್‌ಲೈನ್ ಮುಖಾಂತರವೇ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

http://transport.karnataka.gov.in/index.php/ ವೆಬ್‌ಸೈಟ್ ಬಲಭಾಗದಲ್ಲಿ ಎಲ್‌ಎಲ್‌ ಹಾಗೂ ಡಿಎಲ್‌ ಪಡೆಯುವ ಆಯ್ಕೆ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ ಪ್ರಶ್ನೆಗಳಿಗೆ ಉತ್ತರಿಸಿ, ದಾಖಲೆಗಳನ್ನು ಅಪ್ಲೋಡ್‌ ಮಾಡಿ ಆನ್‌ಲೈನ್ ಮೂಲಕ ಡಿಎಲ್ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

₹ 100 ಶುಲ್ಕ

ಬೀದರ್: ವಾಹನ ಮಾಲೀಕರು ಬಳಕೆ ಮಾಡದ ವಾಹನಗಳ ನೋಂದಣಿ ರದ್ದು ಮಾಡಿಸಿಕೊಳ್ಳಬೇಕು. ಕಳ್ಳತನದ ವಾಹನಗಳಿಗೆ ಈ ಸಂಖ್ಯೆ ಬಳಸುವ ಸಾಧ್ಯತೆ ಇರುತ್ತದೆ. ₹ 100 ಶುಲ್ಕ ಪಾವತಿಸಿ ಗುಜರಿ ವಾಹನಗಳ ನೋಂದಣಿ ರದ್ದು ಮಾಡಿಕೊಂಡು ದಾಖಲೆ ಇಟ್ಟುಕೊಳ್ಳಬೇಕು. ಹಳೆಯ ವಾಹನಗಳನ್ನು ಖರೀದಿಸಿದ್ದರೆ ಮಾಲೀಕರು ಎಚ್ಚರ ವಹಿಸಬೇಕು. ಬಿಎಸ್‌3, 4 ನೋಂದಣಿ
ಮಾಡುತ್ತಿಲ್ಲ. ವಾಹನ ಖರೀದಿಸಿರುವ ವ್ಯಕ್ತಿ ಅಪಘಾತ ಮಾಡಿದರೆ ಮೂಲ ಮಾಲೀಕನಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಖರೀದಿಸಿದ ಮಾಲೀಕನ ವಾಹನ ವಶಪಡಿಸಿಕೊಂಡರೆ, ನೇರವಾಗಿ ಗುಜರಿಗೆ ಹಾಕಲಾಗುತ್ತದೆ. ನೋಂದಣಿ ರದ್ದು ಮಾಡಿಸಿ, ಅಪಾಯದಿಂದ ತಪ್ಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT