ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಹೊರಗಿದ್ದೇ ಜಿಲ್ಲೆಯ ಮುಖಂಡರೊಂದಿಗೆ ಜನಾರ್ದನರೆಡ್ಡಿ ಸಭೆ!

ಬಳ್ಳಾರಿ ಬಿಜೆಪಿ ರಾಜಕೀಯ ಮೊಳಕಾಲ್ಮೂರಿಗೆ ಸ್ಥಳಾಂತರ
Last Updated 26 ಏಪ್ರಿಲ್ 2018, 8:41 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಬಿಜೆಪಿ ಚುನಾವಣಾ ರಾಜಕೀಯ ಮೊಳಕಾಲ್ಮುರು ಗಡಿಭಾಗಕ್ಕೆ ಸ್ಥಳಾಂತರಗೊಂಡಿದೆ. ಜಿಲ್ಲೆ ಪ್ರವೇಶಿಸುವುದಕ್ಕೆ ಅನುಮತಿ ಇಲ್ಲವಾದ್ದರಿಂದ ಬಳ್ಳಾರಿ ಮತ್ತು ಮೊಳಕಾಲ್ಮುರು ಗಡಿಭಾಗದಲ್ಲಿ ವಾಸ್ತವ್ಯ ಹೂಡಿರುವ ಜಿ.ಜನಾರ್ದನ ರೆಡ್ಡಿ, ಬಳ್ಳಾರಿಯ ವಿವಿಧ ಕ್ಷೇತ್ರಗಳ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ತಮ್ಮಲ್ಲಿಗೇ ಕರೆಸಿಕೊಂಡು ಗೆಲುವಿನ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಮೊಳಕಾಲ್ಮುರಿನಲ್ಲಿ ಪಕ್ಷದ ಅಭ್ಯರ್ಥಿ ಬಿ.ಶ್ರೀರಾಮುಲು ಮತ್ತು ಕೂಡ್ಲಿಗಿಯಲ್ಲಿ ಎನ್‌.ವೈ.ಗೋಪಾಲಕೃಷ್ಣ ಅವರ ಗೆಲುವಿಗಾಗಿ ಪ್ರಯತ್ನಿಸುತ್ತಿರುವ ರೆಡ್ಡಿ, ಕೂಡ್ಲಿಗಿ ಮುಖಂಡರನ್ನು ಓಲೈಸುವ ಪ್ರಯತ್ನ ನಡೆಸಿದ್ದಾರೆ. ಅದರ ಅಂಗವಾಗಿ ಎರಡು ದಿನದ ಹಿಂದೆ ಆ ಭಾಗದ ಮುಖಂಡರ ಸಭೆಯನ್ನೂ ನಡೆಸಿದ್ದಾರೆ.

ಮೊಳಕಾಲ್ಮುರಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ದೊರಕದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಗೋಪಾಲಕೃಷ್ಣ ಅವರಿಗೆ ಕೂಡ್ಲಿಗಿ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಮುಖಂಡರನ್ನು ಸಮಾಧಾನಗೊಳಿಸುವ ಸವಾಲು ಪಕ್ಷಕ್ಕೆ ಎದುರಾಗಿದೆ.

ಶ್ರೀರಾಮುಲು ಗೆಲ್ಲಬೇಕಾದರೆ, ಅಲ್ಲಿನವರೇ ಆಗಿರುವ ಗೋಪಾಲಕೃಷ್ಣ ಅವರ ಬೆಂಬಲ ಪಡೆಯುವುದು ಅನಿವಾರ್ಯ. ಹೀಗಾಗಿ ಅವರಿಗೆ ಕೂಡ್ಲಿಗಿಯಲ್ಲಿ ಸಂಪೂರ್ಣ ಬೆಂಬಲ ನೀಡಬೇಕು ಎಂದು, ಸೋಮವಾರದ ಸಭೆಯಲ್ಲಿ ರೆಡ್ಡಿ ಮನವಿ ಮಾಡಿದ್ದಾಗಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಬುಧವಾರ ತಿಳಿಸಿದರು.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮುಖಂಡರೊಂದಿಗೂ ರೆಡ್ಡಿ ಬುಧವಾರ ಸಭೆ ನಡೆಸಿದರು. ಪಕ್ಷವನ್ನು ತೊರೆದು ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಬಿ.ನಾಗೇಂದ್ರ ಅವರನ್ನು ಸೋಲಿಸಲು ಅನುಸರಿಸಬೇಕಾದ ತಂತ್ರ, ರೂಪಿಸಬೇಕಾದ ಕಾರ್ಯಾಚರಣೆ ಕುರಿತು ಚರ್ಚಿಸಿದ್ದಾರೆ.

‘ನಾಗೇಂದ್ರ ಅದೇ ಕ್ಷೇತ್ರದವರಾಗಿರುವುದರಿಂದ, ಬಿಜೆಪಿ ಅಭ್ಯರ್ಥಿ ಫಕ್ಕೀರಪ್ಪ ಅವರಿಗೆ ತೀವ್ರ ಪೈಪೋಟಿ ನೀಡುತ್ತಾರೆ. ಅದನ್ನು ಮುಖಂಡರು ಮತ್ತು ಕಾರ್ಯಕರ್ತರು ಸಮರ್ಥವಾಗಿ ಎದುರಿಸಬೇಕು’ ಎಂದು ಮನವಿ ಮಾಡಿದ್ದಾಗಿ ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಗ್ರಾಮೀಣ ಕ್ಷೇತ್ರದ ವಿವಿಧ ಭಾಗಗಳಿಂದ ಸಾವಿರಾರು ಮಂದಿ, 100ಕ್ಕೂ ಹೆಚ್ಚು ವಾಹನಗಳಲ್ಲಿ ತೆರಳಿದ್ದಾಗಿ ತಿಳಿದುಬಂದಿದೆ.

ಪಕ್ಷದ ಅಧ್ಯಕ್ಷರೊಂದಿಗೆ ಚರ್ಚೆ ಇಲ್ಲ!

ಬಳ್ಳಾರಿ: ಜಿಲ್ಲೆಯ ಬಿಜೆಪಿ ಮುಖಂಡರ ಜೊತೆ ಮೊಳಕಾಲ್ಮುರಿನಲ್ಲಿ ಸಭೆ ನಡೆಸುತ್ತಿರುವ ಜನಾರ್ದನ ರೆಡ್ಡಿ, ಆ ಬಗ್ಗೆ ಇದುವರೆಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ ಅವರೊಂದಿಗೆ ಚರ್ಚಿಸಿಯೇ ಇಲ್ಲ! ‘ಪ್ರಜಾವಾಣಿ’ಗೆ ಈ ವಿಷಯವನ್ನು ಸ್ಪಷ್ಟಪಡಿಸಿದ ಚನ್ನಬಸವನಗೌಡ, ‘ನಮ್ಮ ಜಿಲ್ಲೆಯ ಮುಖಂಡರೊಂದಿಗೆ ರೆಡ್ಡಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂಬುದು ತಿಳಿದಿದೆ. ಆದರೆ ಆ ಬಗ್ಗೆ ಅವರು ನನ್ನೊಂದಿಗೆ ಚರ್ಚಿಸಿಲ್ಲ. ಅಲ್ಲಿ ಸಭೆ ನಡೆಸಲು ಅನುಮತಿ ಪಡೆದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT