ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಇವಿಎಂನಲ್ಲಿ ಬಹು ಸದಸ್ಯರ ಆಯ್ಕೆ

ಬೀದರ್‌ ಜಿಲ್ಲೆಯಲ್ಲಿ ವಿಶಿಷ್ಟ ಮಾದರಿಯ ಮತಯಂತ್ರ ಬಳಕೆಗೆ ಸಿದ್ಧತೆ
Last Updated 3 ಡಿಸೆಂಬರ್ 2020, 11:54 IST
ಅಕ್ಷರ ಗಾತ್ರ

ಬೀದರ್‌: ಚುನಾವಣಾ ಆಯೋಗದ ನಿರ್ದೇಶನದಂತೆ 2015ರಲ್ಲಿ ಪ್ರಾಯೋಗಿಕವಾಗಿ ವಿಶಿಷ್ಟ ಮಾದರಿಯ ಇವಿಎಂ ಬಳಸಿ ಯಶ ಕಂಡಿರುವ ಬೀದರ್ ಜಿಲ್ಲೆ ಇದೀಗ ಮತ್ತೆ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಅದೇ ಪ್ರಯೋಗಕ್ಕೆ ಮುಂದಾಗಿದೆ.

ಸಾಮಾನ್ಯ ಇವಿಎಂನಲ್ಲಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಬಹುದು. ಆದರೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಳಸುವ ವಿಶಿಷ್ಟ ಇವಿಎಂನಲ್ಲಿ ಐವರು ಸದಸ್ಯರ ವರೆಗೂ ಆಯ್ಕೆ ಮಾಡಲು ಅವಕಾಶ ಇದೆ.

ಗ್ರಾಮ ಪಂಚಾಯಿತಿಯ ಒಂದು ವಾರ್ಡ್‌ನಲ್ಲಿ 400 ಮತದಾರರಿಗೆ ಒಂದು ಸದಸ್ಯ ಸ್ಥಾನ ಇರುತ್ತವೆ. ಆ ವಾರ್ಡ್‌ನಲ್ಲಿ ಹೆಚ್ಚು ಮತದಾರರು ಇದ್ದರೆ 3ರಿಂದ 5 ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ಒಂದು ಬ್ಯಾಲೆಟ್‌ ಯುನಿಟ್‌ನಲ್ಲಿ 15 ಸ್ಪರ್ಧಿಗಳ ಹೆಸರು ದಾಖಲಿಸಲು ಅವಕಾಶ ಇದೆ. ಹೀಗೆ ಒಂದು ಇವಿಎಂಗೆ ನಾಲ್ಕು ಬ್ಯಾಲೆಟ್‌ ಯುನಿಟ್‌ಗಳನ್ನು ಜೋಡಿಸಬಹುದು. ಒಂದು ವಾರ್ಡ್‌ನಲ್ಲಿ 60 ಅಭ್ಯರ್ಥಿಗಳಿದ್ದರೂ ಇವುಗಳನ್ನು ಬಳಸಬಹುದಾಗಿದೆ.

‘ಒಂದು ವಾರ್ಡ್‌ನಲ್ಲಿ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೆ,ಮತದಾರ ಒಬ್ಬ ಅಥವಾ ಇಬ್ಬರು ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಬಯಸಿದರೆ, ಅವರಿಗೆ ಮತ ಕೊಟ್ಟು ನಂತರ ಕಡ್ಡಾಯವಾಗಿ ಎಂಡ್ ಬಟನ್ ಒತ್ತಬೇಕು. ಮೂವರು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದವರು ತಮ್ಮ ಪೂರ್ಣ ಹಕ್ಕು ಚಲಾಯಿಸಿದರೆ ಮತಯಂತ್ರದಿಂದ ಬೀಪ್ ಶಬ್ದ ಬರುತ್ತದೆ. ಇದೇ ಈ ಯಂತ್ರದ ವಿಶೇಷತೆ’ ಎನ್ನುತ್ತಾರೆ ಮಾಸ್ಟರ್‌ ಟ್ರೇನರ್‌ ಡಾ.ಗೌತಮ ಅರಳಿ.

‘ಯಾವ ಅಭ್ಯರ್ಥಿಗೂ ಮತದಾನ ಮಾಡಲು ಇಚ್ಛಿಸದವರು ನೇರವಾಗಿ ಎಂಡ್ ಬಟನ್ ಒತ್ತಬಹುದು. ಇದು ನೋಟಾದಂತೆಯೂ ಕಾರ್ಯನಿರ್ವಹಿಸುತ್ತದೆ. ಸಾಮಾನ್ಯ ಇವಿಎಂನಲ್ಲಿ ಒಂದು ಮತ ಹಾಕಿದ ನಂತರ ತಾನಾಗಿಯೇ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ, ಪಂಚಾಯಿತಿ ಚುನಾವಣೆಯಲ್ಲಿ ಬಳಸಲಾಗುವ ಇವಿಎಂನ ಬ್ಯಾಲೆಟ್‌ ಯುನಿಟ್‌ನಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮತ ಹಾಕಿದರೆ ಕಡ್ಡಾಯವಾಗಿ ಎಂಡ್‌ ಬಟನ್ ಒತ್ತಿದ ನಂತರ ಹಾಗೂ ಎಲ್ಲ ಸ್ಥಾನಗಳಿಗೆ ಮತ ಚಲಾಯಿಸಿದರೆ ಬೀಪ್‌ ಶಬ್ದ ಕೇಳಿ ಬಂದು ತಾನಾಗಿಯೇ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ’ ಎಂದು ಅವರು ಹೇಳುತ್ತಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿರಾಜ್ಯದ ಬೀದರ್‌ ಜಿಲ್ಲೆಯಲ್ಲಿ ಮಾತ್ರ ಇವಿಎಂ ಬಳಸುತ್ತಿದ್ದು, ಉಳಿದೆಡೆ ಮತಪತ್ರ‌‌ ಬಳಸಲಾಗುತ್ತಿದೆ.

ಬೀದರ್‌ ಜಿಲ್ಲೆಯಲ್ಲೇ ಇವಿಎಂ ಏಕೆ?:

2015ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಾಗಿಯೇ ಹೊಸ ವಿಧಾನದ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಿದ್ಧಪಡಿಸಲಾಗಿತ್ತು. ಆಗ ಚುನಾವಣಾ ಆಯೋಗ ದೇಶದ ಪ್ರತಿಯೊಂದು ರಾಜ್ಯದಲ್ಲಿ ಒಂದು ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿತ್ತು.

ಈ ಇವಿಎಂಗಳು ಹೈದರಾಬಾದ್‌ನಲ್ಲಿ ಉತ್ಪಾದನೆಯಾಗಿದ್ದು, ಹೈದರಾಬಾದ್‌ ಬೀದರ್‌ಗೆ (160 ಕಿ.ಮೀ) ಸಮೀಪ ಇದ್ದ ಕಾರಣ ತಾಂತ್ರಿಕ ಸಮಸ್ಯೆಯಾದರೂ ತ್ವರಿತವಾಗಿ ದುರಸ್ತಿ ಮಾಡಲು ಹಾಗೂ ಚುನಾವಣಾ ಸಿಬ್ಬಂದಿಗೂ ನೆರವಾಗಲು ಅನುಕೂಲವಾಗಲಿದೆ ಎನ್ನುವ ಕಾರಣಕ್ಕೆ ರಾಜ್ಯದಲ್ಲಿ ಬೀದರ್‌ ಜಿಲ್ಲೆ ಆಯ್ಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT