ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಟನ್ ಕಬ್ಬಿಗೆ ₹ 2,400 ಬೆಲೆ ಘೋಷಣೆ

ಸಚಿವರ ಅಧ್ಯಕ್ಷತೆಯಲ್ಲಿ ರೈತರು, ಕಾರ್ಖಾನೆಗಳ ಅಧ್ಯಕ್ಷರ ಸಭೆ
Last Updated 2 ಜನವರಿ 2021, 13:27 IST
ಅಕ್ಷರ ಗಾತ್ರ

ಬೀದರ್‌: 2020-21ನೇ ಸಾಲಿನಲ್ಲಿ ರೈತರು ಸರಬರಾಜು ಮಾಡಿದ ಪ್ರತಿ ಟನ್‌ ಕಬ್ಬಿಗೆ ₹ 2,400 ಬೆಲೆ ನಿಗದಿ ಪಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಘೋಷಣೆ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೊ ಕಾನ್ಫರೆನ್ಸ್‌ ಹಾಲ್‌ನಲ್ಲಿ ಶನಿವಾರ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಎರಡೂವರೆ ತಾಸು ಸಮಾಲೋಚನೆ ನಡೆಸಿ ಕಬ್ಬಿಗೆ ಬೆಲೆ ನಿಗದಿ ಮಾಡಿದರು.

‘ರಾಜ್ಯ ಸರ್ಕಾರ ರೈತರು ಮತ್ತು ಕಾರ್ಖಾನೆಗಳ ಪರವಾಗಿದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಿದೆ.
ರೈತರಿಗೆ ನ್ಯಾಯಯುತವಾದ ಬೆಲೆ ನೀಡಲು ಸಹಕರಿಸಬೇಕು’ ಎಂದು ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರಿಗೆ ಮನವಿ ಮಾಡಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರ ಸಭೆ ನಡೆಸಿ ಸುದೀರ್ಘವಾಗಿ ಸಮಾಲೋಚನೆ ನಡೆಸುವ ಮೂಲಕ ಪ್ರತಿ ಟನ್ ಕಬ್ಬಿಗೆ ₹ 2,400 ಬೆಲೆ ನಿಗದಿ ಪಡಿಸಲಾಗಿದೆ. ಕಾರ್ಖಾನೆಗಳು ಸಹ ಉಳಿಯಬೇಕಾಗಿರುವುದರಿಂದ ರೈತರು ಒಪ್ಪಿಕೊಳ್ಳಬೇಕು’ ಎಂದು ಕೋರಿದರು.

ಸಭೆಯ‌ ನಿರ್ಣಯಕ್ಕೆ ರೈತ ಮುಖಂಡರು ಸಹಮತ ವ್ಯಕ್ತಪಡಿಸಿದರು. ಕಬ್ಬು ಪೂರೈಕೆ ಮಾಡಿದ 15 ದಿನಗಳಲ್ಲಿ ರೈತರಿಗೆ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುವಂತೆ ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಕಬ್ಬಿಗೆ ಯೋಗ್ಯ ಬೆಲೆ ನಿಗದಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ’ ಎಂದು ತಿಳಿಸಿದರು.

‘ಹಿಂದೆ ಕೆಲವರು ಕಬ್ಬು ಬೆಲೆ ನಿಗದಿ ವಿಷಯದಲ್ಲೂ ರಾಜಕೀಯ ಮಾಡಿಕೊಂಡು ಬಂದಿದ್ದರು. ಆದರೆ ನಾವು ಕಳೆದ ವರ್ಷ ₹ 250 ಹಾಗೂ ಪ್ರಸಕ್ತ ವರ್ಷ ₹ 400 ಹೆಚ್ಚುವರಿ ಬೆಲೆ ನಿಗದಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ’ ಎಂದು ಹೇಳಿದರು.

ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಜನಪ್ರತಿನಿಧಿಗಳು ಸುದೀರ್ಘ ಸಮಾಲೋಚನೆ ನಡೆಸಿ ಕಬ್ಬಿಗೆ ಗರಿಷ್ಠ ಬೆಲೆ ಕೊಡಲು ಕಾರ್ಖಾನೆ ಆಡಳಿತ ಮಂಡಳಿಗಳನ್ನು ಒಪ್ಪಿಸಿದ್ದೇವೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ವಿಡಿಯೊ ಕಾನ್ಫರೆನ್ಸ್‌ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಡಿ.ಕೆ.ಸಿದ್ರಾಮ, ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಮರ ಖಂಡ್ರೆ, ಬೀದರ್‌ ಕಿಸಾನ್‌ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಸೀಮೊದ್ದಿನ್ ಪಟೇಲ್ ಹಾಜರಿದ್ದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಲ್ಲಾ ‍ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಬೀದರ್‌ ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ್, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಬಿ.ಬಾಬುರೆಡ್ಡಿ ಇದ್ದರು.

ಎರಡೂವರೆ ತಾಸು ಸಭೆ ವಿಳಂಬ
ಸಕ್ಕರೆ ಕಾರ್ಖಾನೆಗಳಿಗೆ ರೈತರು ಪೂರೈಕೆ ಮಾಡಿರುವ ಕಬ್ಬಿಗೆ ಬೆಲೆ ನಿಗದಿ ಪಡಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ರೈತರ ಸಭೆ ಎರಡೂವರೆ ತಾಸು ವಿಳಂಬವಾದರೂ ಕೇವಲ 15 ನಿಮಿಷದಲ್ಲೇ ಮುಗಿಯಿತು.

ಮಲ್ಲಿಕಾರ್ಜುನ ಸ್ವಾಮಿ ಹಾಗೂ ಸಿದ್ರಾಮಪ್ಪ ಆಣದೂರೆ ನೇತೃತ್ವದ ರೈತ ಸಂಘದ ಬಣಗಳ ಸದಸ್ಯರು ನಿಗದಿಪಡಿಸಿದ ಸಮಯಕ್ಕೆ ಮೊದಲೇ ಸಭಾಂಗಣದಲ್ಲಿ ಹಾಜರಿದ್ದರು. ಸಚಿವರು ಅರ್ಧಗಂಟೆ ಗಂಟೆ ವಿಳಂಬ ಮಾಡಿ ಬಂದು ನೇರವಾಗಿ ಜಿಲ್ಲಾಧಿಕಾರಿ ಕೊಠಡಿಗೆ ತೆರಳಿದರು.

ವಿಡಿಯೊ ಕಾನ್ಫೆರನ್ಸ್‌ ಹಾಲ್‌ನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿದರು. ಕಾರ್ಖಾನೆಗಳು ರೈತರ ಮನವಿಯಂತೆ ಪ್ರತಿ ಟನ್‌ ಕಬ್ಬಿಗೆ ₹ 3,200 ಬೆಲೆ ಕೊಡಬೇಕು ಎಂದು ಸಚಿವರು ಕೋರಿದರು.

ಆದರೆ, ಕಾರ್ಖಾನೆಗಳ ಅಧ್ಯಕ್ಷರು ಆರಂಭದಲ್ಲಿ ಕೇವಲ ₹2,100 ಕೊಡುವುದಾಗಿ ಹೇಳಿದರು. ಬೆಲೆಗಾಗಿ ಹಗ್ಗ ಜಗ್ಗಾಟ ನಡೆದು ಕೊನೆಗೆ ₹ 2,400 ಕೊಡಲೇ ಬೇಕು ಎಂದು ಸಚಿವರು ಒತ್ತಡ ಹಾಕಿದಾಗ ಕಾರ್ಖಾನೆಗಳು ಒಪ್ಪಿಕೊಂಡವು.

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು
ಎರಡೂವರೆ ತಾಸು ಕಳೆದರೂ ಸಚಿವರು ರೈತರ ಸಭೆಗೆ ಬಾರದಿದ್ದಾಗ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೊಲೀಸರು ಸಭೆಯೊಳಗೆ ಬಂದು ಎಲ್ಲರನ್ನೂ ಸಮಾಧಾನ ಪಡಿಸಿದರು.

ಪ್ರಸ್ತುತ ಸಕ್ಕರೆ ಕಾರ್ಖಾನೆಗಳೇ ಸರ್ಕಾರ ನಡೆಸುತ್ತಿವೆ. ಅಧಿಕಾರಿಗಳು ಕಾರ್ಖಾನೆಗಳ ಆಡಳಿತ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವ ಸಾಧ್ಯತೆ ಇದೆ. ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಗುಪ್ತ ಸಮಾಲೋಚನೆ ನಡೆಸುವುದಾದರೆ ರೈತರನ್ನು ಸಭೆಗೆ ಕರೆಯುವ ಅವಶ್ಯಕತೆಯೇ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬಾಯಾರಿಕೆಯಿಂದ ಬಳಲಿ ಸಭೆ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ ಕೊನೆಯ ಕ್ಷಣದಲ್ಲಿ ಅವರಿಗೆ ನೀರು, ಪೇರಲ ಹಾಗೂ ಮೊಸಂಬಿ ತುಣುಕುಗಳನ್ನು ಕೊಟ್ಟು ಸಮಾಧಾನ ಪಡಿಸಲಾಯಿತು.

ಭರವಸೆ ಭರವಸೆ ಏನಾಯಿತು?
ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಬಿಎಸ್‌ಎಸ್‌ಕೆ ಪುನಶ್ಚೇತನಕ್ಕಾಗಿ ₹ 3 ಕೋಟಿ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಎರಡು ವರ್ಷಗಳಾದರೂ ಕಾರ್ಖಾನೆ ಉಳಿಸುವ ಮಾತು ಆಡಿಲ್ಲ. ಚುನಾವಣೆ ಪೂರ್ವದಲ್ಲಿ ನೀವು ನೀಡಿದ ಭರವಸೆ ಏನಾಯಿತು’ ಎಂದು ರೈತರ ಮುಖಂಡ ಬಾಬುರಾವ್‌ ಜೋಳದಾಬಕಾ ಸಚಿವರನ್ನು ಪ್ರಶ್ನಿಸಿದರು.

‘ನಮಗೆ ಭರವಸೆಗಳು ಬೇಕಿಲ್ಲ. ಬಿಜೆಪಿ ಮುಖಂಡರು ನುಡಿದಂತೆ ನಡೆದುಕೊಳ್ಳಬೇಕು. ರೈತರ ಜೀವನಾಡಿಯಾಗಿರುವ ಬಿಎಸ್‌ಎಸ್‌ಕೆ ಉಳಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.ರೈತರು ಒಂದೊಂದೇ ಪ್ರಶ್ನೆಗಳು ಕೇಳಲು ಶುರು ಮಾಡಿದ್ದರಿಂದ ಸಚಿವರು ಸಭೆಯನ್ನು ಮುಕ್ತಾಯಗೊಳಿಸಿದರು. ಬೇರೊಂದು ಕಾರ್ಯಕ್ರಮಕ್ಕೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT