ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್ ಮೊದಲ ವಾರದಲ್ಲಿ ಶುದ್ಧ ಕುಡಿವ ನೀರು: ಶಾಸಕ ಈಶ್ವರ ಖಂಡ್ರೆ

Last Updated 8 ಮಾರ್ಚ್ 2021, 5:16 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಖಟಕ್ ಚಿಂಚೋಳಿ ಹೊರ ವಲಯದಲ್ಲಿ ನಿರ್ಮಾಣ ಆಗಿರುವ ಬಹುನಿರೀಕ್ಷಿತ ಮೈಕ್ರೋ ಫೈಬರ್ ಫಿಲ್ಟರ್ 20ಎಂಎಲ್‍ಡಿ ಮಾದರಿಯ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭಾನುವಾರ ಶಾಸಕ ಈಶ್ವರ ಖಂಡ್ರೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.

20ಎಂಎಲ್‍ಡಿ ಸಾಮರ್ಥ್ಯದ ಫಿಲ್ಟರ್, ಮೈಕ್ರೋ ಫೈಬರ್ ಫಿಲ್ಟರ್, ಓವರ್ ಹೆಡ್ ಟ್ಯಾಂಕ್ ಸೇರಿ ಮತ್ತಿತರ ಅಂತಿಮ ಹಂತದ ಕಾಮಗಾರಿ ವೀಕ್ಷಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಭಾಲ್ಕಿ ಪಟ್ಟಣಕ್ಕೆ 24x7 ಶುದ್ಧ ಕುಡಿಯುವ ನೀರು ಸರಬರಾಜು ಆಗಲಿದೆ’ ಎಂದು ಭರವಸೆ ನೀಡಿದರು.

‘ಪೌರಾಡಳಿತ ಇಲಾಖೆ ಸಚಿವನಾಗಿದ್ದ ಸಂದರ್ಭದಲ್ಲಿ ಕಾರಂಜಾ ಜಲಾಶಯದಿಂದ ಭಾಲ್ಕಿ ಪಟ್ಟಣದ ಜನತೆಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನಿರಂತರ ಒತ್ತಡ ತಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಯೋಜನೆಯಡಿ ₹140 ಕೋಟಿ ಅನುದಾನ ಮಂಜೂರಾತಿ ಮಾಡಿಸಿ ಎಲ್ಲ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪಟ್ಟಣದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ ರಸ್ತೆಯಲ್ಲಿನ ಒಂದಷ್ಟು ಪೈಪ್‍ಲೈನ್ ಕಾಮಗಾರಿ ಹೊರತು ಪಡಿಸಿ ಬಹುತೇಕ ಕಡೆಗಳಲ್ಲಿ ಪೂರ್ಣಗೊಂಡಿದೆ. ನಳಗಳ ಸಂಪರ್ಕ ಕಲ್ಪಿಸಲಾಗಿದೆ. ಕಾರಂಜಾ ಜಲಾಶಯದಿಂದ ಭಾಲ್ಕಿ ಪಟ್ಟಣದ ವರೆಗೂ ಈಗಾಗಲೇ ಪ್ರಾಯೋಗಿಕವಾಗಿ ನೀರು ಚಾಲ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಏಪ್ರಿಲ್ ಮೊದಲ ವಾರದಿಂದ ಪೈಪ್‍ಲೈನ್ ಮೂಲಕ ಪಟ್ಟಣಕ್ಕೆ ನೀರು ಹರಿದು ಬರುವ ನೀರಿಕ್ಷೆ ಇದೆ. ಪಟ್ಟಣದ 50 ಸಾವಿರ ಜನರು ಸೇರಿ ಸುಮಾರು 10-12 ಸಾವಿರ ಮನೆಗಳಿಗೆ ನಿರಂತರವಾಗಿ ನೀರು ಹರಿಯಲಿದೆ. ಯೋಜನೆ ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕಾರಂಜಾದಲ್ಲಿ ಜಾಕ್‌ವೆಲ್, ರೈಸಿಂಗ್ ಮೆನ್ ಅಳವಡಿಸುವುದರ ಜತೆಗೆ 15-20 ಲಕ್ಷ ಲೀಟರ್ ನೀರು ಹಿಡಿದಿಡುವ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. 2048ರ ವರೆಗೂ ಪಟ್ಟಣದಲ್ಲಿ ನೀರಿನ ಸಮಸ್ಯೆ ಆಗದಂತೆ ಯೋಜನೆ ರೂಪಿಸಲಾಗಿದೆ’ ಎಂದರು.

‘ಇದರ ಜತೆಗೆ ಮಾರ್ಗ ಮಧ್ಯದ 23 ಹಳ್ಳಿಗಳಿಗೂ ನಿರಂತರವಾಗಿ ನೀರು ಹರಿಸಲು ಯೋಜನೆ ರೂಪಿಸಿ ಡಿಪಿಆರ್ ತಯಾರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಮುಂದಿನ ಮೂರು ತಿಂಗಳಲ್ಲಿ ಈ ಎಲ್ಲ ಹಳ್ಳಿಗಳಿಗೂ ದಿನದ 24 ಗಂಟೆ ನೀರು ಹರಿಯಲಿದೆ. ಜತೆಗೆ ತಾಲ್ಲೂಕಿನ 10ಕ್ಕೂ ಅಧಿಕ ಹಳ್ಳಿಗಳನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಗ್ರಾಮೀಣಾಭಿವೃದ್ಧಿ ಸಚಿವರ ಗಮನಕ್ಕೆ ತರಲಾಗಿದೆ. ಸಾರ್ವಜನಿಕರು ಯೋಜನೆಯ ಸದ್ಬಳಕೆ ಮಾಡಿಕೊಂಡು ನೀರು ಹಿತ ಮಿತವಾಗಿ ಬಳಸಬೇಕು’ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಮುಖ್ಯಾಧಿಕಾರಿ ಶೇಖ್‌ ಚಾಂದಪಟೇಲ್, ಎಇಇ ರವೀಂದ್ರ ಏಕಲಾರೆ, ಜೆ.ಇ ಅಶೋಕ ರಾಠೋಡ್, ಮಲ್ಲಿಕಾರ್ಜುನ ಪಾಟೀಲ ಮುಗನೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT