ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಆವರಣದ ಕ್ಯೂಆರ್‌ಸಿ ಫಲಕ ತೆರವು

ಜಿಲ್ಲೆಗೆ ಬರುವ ಪ್ರವಾಸಿಗರಿಗೆ ದೊರೆಯದ ಸ್ಮಾರಕಗಳ ಮಾಹಿತಿ
Last Updated 12 ಡಿಸೆಂಬರ್ 2018, 13:43 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಟೂರಿಸ್ಟ್‌ ಗೈಡ್‌ಗಳು ಇಲ್ಲದ ಕಾರಣ ಕ್ವಿಕ್‌ ರೆಸ್ಪಾನ್ಸ್ ಕೋಡ್‌ ಮೂಲಕ ಪ್ರವಾಸಿಗರಿಗೆ ಐತಿಹಾಸಿಕ ಸ್ಮಾರಕಗಳ ಬಗ್ಗೆ ಮಾಹಿತಿ ಒದಗಿಸಲು ರೋಟರಿ ಕ್ಲಬ್‌ ಇಲ್ಲಿಯ ಕೋಟೆ ಆವರಣದಲ್ಲಿ ಅಳವಡಿಸಿದ್ದ ಮಹತ್ವದ ಫಲಕವನ್ನು ಜಿಲ್ಲಾ ಆಡಳಿತ ತೆರವುಗೊಳಿಸಿದೆ.

ವಿಕಿಪಿಡಿಯಾದ ಸಂಚಾಲಕ ಓಂಪ್ರಕಾಶ ಅವರು ಬೀದರ್‌ ಬಗೆಗೆ ವಿಶೇಷ ಆಸಕ್ತಿ ವಹಿಸಿ ಅಧಿಕಾರಿಗಳು, ಸಾಹಿತಿಗಳು, ಕಾಲೇಜು ವಿದ್ಯಾರ್ಥಿಗಳು, ಯುವ ಸಾಹಿತಿಗಳು ಸೇರಿ 102 ಜನರಿಗೆ ತರಬೇತಿ ನೀಡಿ ಅವರಿಂದಲೇ 50 ಲೇಖನಗಳನ್ನು ಬರೆಯಿಸಿ ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿಸಿದ್ದರು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಇಂಗ್ಲಿಷ್, ಕನ್ನಡ, ಹಿಂದಿ, ಸಂಸ್ಕೃತ, ಫ್ರೆಂಚ್‌, ಅರೆಬಿಕ್ ಸೇರಿದಂತೆ ವಿಶ್ವದ 33 ಭಾಷೆಗಳಲ್ಲಿ ಲೇಖನಗಳು ಅನುವಾದಗೊಂಡಿವೆ.

2015ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಾ. ಪಿ.ಸಿ. ಜಾಫರ್‌ ಅವರು ಪ್ರವಾಸಿಗರಿಗೆ ಬೀದರ್‌ ಕೋಟೆಯ ಮಹತ್ವವನ್ನು ಪರಿಚಯಿಸುವ ದಿಸೆಯಲ್ಲಿ ಬೀದರ್‌ ವಿಕಿಪಿಡಿಯಾ ಪ್ರಾಜೆಕ್ಟ್‌ ಸಹಯೋಗದೊಂದಿಗೆ ಪರಂಪರೆ ನಗರಿಗೆ ಸಂಬಂಧಪಟ್ಟ ಲೇಖನಗಳು ಅಂತರ್ಜಾಲದಲ್ಲಿ ಪ್ರಕಟಗೊಳ್ಳುವಂತೆ ಮಾಡಿದ್ದರು.

2015ರ ಏಪ್ರಿಲ್‌ 12 ರಂದು ಕೋಟೆ ಆವರಣದಲ್ಲಿ ಅಳವಡಿಸಿದ ಪೋಸ್ಟರ್‌ನಲ್ಲಿ ಪ್ರವಾಸಿ ತಾಣಗಳ ಚಿತ್ರಗಳ ಜತೆಗೆ ಇದ್ದ ಕ್ವಿಕ್‌ ರೆಸ್ಪಾನ್ಸ್ ಕೋಡ್‌(ಕ್ಯೂಆರ್‌ಸಿ) ಮೇಲೆ ಮೊಬೈಲ್‌ ಕ್ಯಾಮೆರಾ ಕ್ಲಿಕ್ ಮಾಡುವ ಮೂಲಕ ಚಾಲನೆ ನೀಡಿದ್ದರು. ಸ್ಮಾರಕವಿರುವ ಸ್ಥಳಗಳಲ್ಲಿಯೇ ಕ್ಯೂಆರ್‌ಸಿ ಅಳವಡಿಸಿ ಸಂಬಂಧಿಸಿದ ಮಾಹಿತಿ ಪ್ರವಾಸಿಗರಿಗೆ ಸ್ಮಾರ್ಟ್‌ ಫೋನ್‌ಗಳಲ್ಲಿ ತ್ವರಿತವಾಗಿ ಲಭ್ಯವಾಗುವಂತೆ ಮಾಡಿದ್ದರು.

ಈಗಿನ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಯಾವುದೇ ಆಲೋಚನೆ ಮಾಡದೆ ಆ ಫಲಕವನ್ನೇ ತೆರವುಗೊಳಿಸಿದ್ದಾರೆ. ಈಗ ಸ್ಮಾರಕಗಳ ಮಾಹಿತಿ ನೀಡುವ ಗೈಡ್‌ಗಳು ಇಲ್ಲ, ಕ್ವಿಕ್‌ ರೆಸ್ಪಾನ್ಸ್ ಕೋಡ್‌ ಫಲಕವೂ ಇಲ್ಲದ ಕಾರಣ ಪ್ರವಾಸಿಗರಿಗೆ ಇತಿಹಾಸ ಅರಿತುಕೊಳ್ಳಲು ಕಷ್ಟವಾಗುತ್ತಿದೆ.

‘ಗೈಡ್‌ಗಳು ಇಲ್ಲದಿದ್ದರೂ ಪ್ರವಾಸಿಗರಿಗೆ ಕ್ಯೂಆರ್‌ಸಿ ಮೂಲಕ ಮಾಹಿತಿ ಲಭಿಸುತ್ತಿತ್ತು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ರೋಟರಿ ಕ್ಲಬ್‌ ₹ 20 ಸಾವಿರ ಖರ್ಚು ಮಾಡಿ ಜಿಲ್ಲಾ ಆಡಳಿತದ ಬ್ಯಾನರ್‌ನಲ್ಲಿ ಫಲಕ ಅಳವಡಿಸಿತ್ತು. ಕ್ಯೂಆರ್‌ಸಿ ಅಳವಡಿಸಿದ ರಾಜ್ಯದ ಏಕೈಕ ಜಿಲ್ಲೆ ಎನ್ನುವ ಹೆಗ್ಗಳಿಕೆಯನ್ನೂ ಪಡೆದಿತ್ತು.
ಫಲಕ ತೆಗೆಸಿ ಜಿಲ್ಲಾಡಳಿತ ಹೆಗ್ಗಳಿಕೆಯನ್ನೇ ಅಳಿಸಿ ಹಾಕಿದೆ’ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ನಾಗೇಂದ್ರ ನಿಟ್ಟೂರೆ ಬೇಸರ ವ್ಯಕ್ತಪಡಿಸುತ್ತಾರೆ.

‘ಕೋಟೆ ಆವರಣದಲ್ಲಿ ಕ್ಯೂಆರ್‌ಸಿ ಅಳವಡಿಸಬೇಕು. ಪ್ರವಾಸಿಗರಿಗೆ ಸ್ಮಾರಕಗಳ ಬಗ್ಗೆ ಸುಲಭವಾಗಿ ಮಾಹಿತಿ ದೊರಕುವಂತೆ ಮಾಡಬೇಕು’ ಎಂದು ರೋಟರಿ ಜಿಲ್ಲಾ ಮಾಜಿ ಗರ್ವನರ್ ಕೆ.ಸಿ. ಸೇನನ್‌ ಒತ್ತಾಯಿಸುತ್ತಾರೆ.

‘ಬೀದರ್‌ ನಗರದಲ್ಲಿ 7 ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮೂರು ಪ್ರವಾಸಿ ತಾಣಗಳ ಮಾಹಿತಿ ನೀಡುವ ಫಲಕ ಅಳವಡಿಸಲಾಗಿದೆ. ಮೊದಲಿನ ಫಲಕದಲ್ಲಿ ಕ್ಯೂಆರ್‌ಸಿ ಇದ್ದ ಮಾಹಿತಿ ಇರಲಿಲ್ಲ. ಹೊಸ ಫಲಕಗಳಲ್ಲಿ ಅದನ್ನು ಅಳವಡಿಸಲು ಸಾಧ್ಯವೆ ಎನ್ನುವ ಕುರಿತು ಪರಿಶೀಲಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಕಲಬುರ್ಗಿಯ ಉಪ ನಿರ್ದೇಶಕ ರಫಿಕ್‌ ಲಾರ್ಜಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT