ಬೀದರ್: ಮಹಾಲಯ ಅಮಾವಾಸ್ಯೆಯ ಅಂಗವಾಗಿ ಜಿಲ್ಲೆಯ ಶಕ್ತಿದೇವತೆಗಳ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಕೆಲ ಮಂದಿರಗಳಲ್ಲಿ ಘಟ್ಟ ಸ್ಥಾಪನೆ ಮಾಡಲಾಯಿತು.
ನಗರದ ಸರ್ವಿಸ್ ಸ್ಟಾಂಡ್ ಭವಾನಿ ದೇವಿ ಮಂದಿರ, ಮಂಗಲಪೇಟೆ, ಭೀಮನಗರ ಜಗದಂಬಾ ಭವಾನಿ ಮಂದಿರ ಬೆನಕನಹಳ್ಳಿ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ದುರ್ಗಾದೇವಿ, ಬ್ರಹ್ಮನವಾಡಿ ಗಲ್ಲಿಯಲ್ಲಿ ಬ್ರಹ್ಮದೇವರ ಸ್ವರೂಪದ ದೇವಿ, ದರ್ಜಿಗಲ್ಲಿಯಲ್ಲಿ ಹಿಂಗುಲಾಂಬಿಕಾದೇವಿ ದೇವಸ್ಥಾನದಲ್ಲಿ 9 ದಿನಗಳ ದೀಪ ಬೆಳಗಿಸಲಾಯಿತು.
ದೈವಿಶಕ್ತಿಯ ಧ್ಯೋತಕವೆಂದೇ ದುರ್ಗೆಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಲಾಯಿತು. ಒಂಬತ್ತು ದಿನ ನಿತ್ಯ ವಿಶೇಷ ಪೂಜೆ ಹಾಗೂ ಅಲಂಕಾರ ನಡೆಯಲಿದೆ. ನವರಾತ್ರಿ ಉತ್ಸವದ ಪ್ರಯುಕ್ತ ದೇಗುಲಗಳನ್ನು ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ದೇವಿಯ ಆರಾಧಕರು ಗುರುವಾರ ದೇವರ ಜಗಲಿ ಮೇಲೆ ಘಟ್ಟ ಸ್ಥಾಪನೆ ಮಾಡಲಿದ್ದಾರೆ. ಬಹುತೇಕರು ಮನೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಭವಾನಿದೇವಿಯ ಆರಾಧಾಕರು ಸೋಲಾಪುರದ ಅಂಬಾಭವಾನಿ ದೇಗುಲಕ್ಕೆ ತೆರಳಿ ಹೊರಗಿನಿಂದ ಪೂಜೆ ಸಲ್ಲಿಸಿದರು. ಮರಳಿ ಮನೆಗೆ ಬಂದ ನಂತರ ಗುರುವಾರ ಘಟ್ಟ ಸ್ಥಾಪನೆ ಮಾಡಲಿದ್ದಾರೆ.
ಘೃತಮಾರಿ ದೇವಸ್ಥಾನದಲ್ಲಿ ಘಟ್ಟಸ್ಥಾಪನೆ
ಭಾಲ್ಕಿ: ತಾಲ್ಲೂಕಿನ ಮೈಲಾರ ಗ್ರಾಮದ ಘೃತಮಾರಿ ದೇವಸ್ಥಾನದಲ್ಲಿ ಬುಧವಾರ ಮಹಾಲಯ ಅಮಾವಾಸ್ಯೆ ನಿಮಿತ್ತ ಘಟ್ಟ ಸ್ಥಾಪನೆ ಮಾಡಲಾಯಿತು.
ನವರಾತ್ರಿಯ ವರೆಗೆ ಪ್ರತಿದಿನ ಬೆಳಿಗ್ಗೆ, ಸಂಜೆ ಘೃತಮಾರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ. ಭಕ್ತರು ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ಎಣ್ಣೆ ದೀಪ ಬೆಳಗಿಸಿ ದೇವಿಗೆ ಭಕ್ತಿ ಸೇವೆ ಸಲ್ಲಿಸಲಿದ್ದಾರೆ.ವಿಜಯ ದಶಮಿ ದಿನ ರಾತ್ರಿ 11 ಗಂಟೆಗೆ ನಡೆಯುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಮಲ್ಲಣ್ಣನ ಭಕ್ತರು ಹಾಗೂ ಕಲಾವಿದರು ಪಾಲ್ಗೊಳ್ಳುತ್ತಾರೆ.
ಮಹಾಲಯ ಅಮಾವಾಸ್ಯೆ ಪ್ರಯುಕ್ತ ಭಕ್ತರು ದೇವಸ್ಥಾನಕ್ಕೆ ಬಂದು ಮಲ್ಲಣ್ಣ ಹಾಗೂ ಘೃತಮಾರಿ ದೇವತೆಯ ದರ್ಶನ ಪಡೆದು ಪುನೀತರಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.