ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೂ ಮುನ್ನ ಮೀಸಲಾತಿ: ವಿರೋಧ

ಬೀದರ್ ನಗರಸಭೆ: ಹಿಂದಿನ ಅವಧಿಗೆ ಪೂರ್ಣಾವಧಿಯ ಅಧ್ಯಕ್ಷರೇ ಇರಲಿಲ್ಲ
Last Updated 12 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ನಗರಸಭೆಗೆ ಚುನಾವಣೆ ನಡೆಯದಿದ್ದರೂ ರಾಜ್ಯ ಸರ್ಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿರುವುದು ರಾಜಕಾರಣಿಗಳಲ್ಲಿ ಆಶ್ಚರ್ಯ ಮೂಡಿಸಿದೆ. ಚುನಾವಣೆ ನಡೆದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುವುದು ವಾಡಿಕೆ. ಆದರೆ, ಸರ್ಕಾರದ ಅಧಿಸೂಚನೆಯಿಂದ ರಾಜಕಾರಣಿಗಳ ಲೆಕ್ಕಾಚಾರವೇ ಬುಡಮೇಲಾಗಿದೆ.

ಬೀದರ್‌ ನಗರಸಭೆಗೆ ರಾಜ್ಯ ಸರ್ಕಾರ ಆಡಳಿತ ಅಧಿಕಾರಿ ನೇಮಕ ಮಾಡಿ ಮಾರ್ಚ್‌ 22ಕ್ಕೆ ಒಂದು ವರ್ಷ ಆಗಲಿದೆ. ಕಳೆದ ವರ್ಷ ಮೀಸಲಾತಿ ಪ್ರಶ್ನಿಸಿ ಕೆಲ ರಾಜಕಾರಣಿಗಳು ಕೋರ್ಟ್‌ ಮೊರೆ ಹೋಗಿದ್ದರು. ನಾಲ್ಕು ತಿಂಗಳ ಹಿಂದೆಯೇ ಕೋರ್ಟ್ ತೀರ್ಪು ನೀಡಿದ್ದರೂ ರಾಜ್ಯ ಚುನಾವಣೆ ಆಯೋಗ ನಗರಸಭೆ ಚುನಾವಣೆಗೆ ಅಧಿಸೂಚನೆ ಹೊರಡಿಸಿಲ್ಲ.

ಬೀದರ್‌ ನಗರಸಭೆ ಮೂರು ವರ್ಷಗಳಿಂದ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದೆ. ಫಾತಿಮಾ ಅನ್ವರ್‌ ಅವರ ಅಧ್ಯಕ್ಷ ಅವಧಿ ಮುಗಿದ ಮೇಲೆ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಸಂಬಂಧಿಸಿ ಸದಸ್ಯರೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು. ಏತನ್ಮಧ್ಯೆ ಜಾತಿ ಪ್ರಮಾಣಪತ್ರ ವಿತರಣೆ ವಿವಾದದ ಸ್ವರೂಪ ಪಡೆದುಕೊಂಡು ಅದು ಆಡಳಿತ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿತು. ನಗರಸಭೆ ಉಪಾಧ್ಯಕ್ಷೆಯಾಗಿದ್ದ ಶಾಲಿನಿ ಚಿಂತಾಮಣಿ ಅವರೇ ಪ್ರಭಾರ ಅಧ್ಯಕ್ಷರಾಗಿ ಅವಧಿ ಪೂರ್ಣಗೊಳಿಸಿದರು.

ಸರ್ಕಾರ ಚುನಾವಣೆ ನಡೆಸದೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್, ಜೆಡಿಎಸ್, ಎಐಎಂಐಎಂ ಮುಖಂಡರು ಅಚ್ಚರಿ ವ್ಯಕ್ತಪಡಿಸಿದರೆ, ಬಿಜೆಪಿ ಮುಖಂಡರು ಮುಜುಗರಕ್ಕೆ ಒಳಗಾಗಿದ್ದಾರೆ.

‘ರಾಜ್ಯದಲ್ಲಿ ಸರ್ಕಾರ ಸ್ಥಿರವಿರದ ಪರಿಣಾಮ ನಗರ ಸ್ಥಳೀಯ ಸಂಸ್ಥೆಗಳ ಮೇಲೂ ಆಗಿದೆ. ಸರ್ಕಾರ ಚುನಾವಣೆ ನಡೆಸಲು ವಿಳಂಬ ಮಾಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ. ಅವಧಿ ಮುಗಿದ ಬೀದರ್ ನಗರಸಭೆಗೆ ಆರು ತಿಂಗಳ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಚುನಾವಣೆ ನಡೆಸದೇ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಪ್ರಕಟಿಸಿರುವುದು ಸರಿಯಲ್ಲ’ ಎಂದು ನಗರಸಭೆ ಮಾಜಿ ಸದಸ್ಯ ಮನ್ಸೂರ್‌ ಖಾದ್ರಿ ಆರೋಪಿಸಿದರು.

‘ಅವಧಿ ಮುಗಿದು ವರ್ಷ ಕಳೆದರೂ ರಾಜ್ಯ ಸರ್ಕಾರ ಚುನಾವಣೆಗೆ ಮುಂದಾಗದಿರುವುದಕ್ಕೆ ನಗರಸಭೆ ಮಾಜಿ ಸದಸ್ಯರು ಹಾಗೂ ರಾಜಕಾರಣಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬೀದರ್‌ ನಗರಸಭೆಯಲ್ಲಿ ಒಂದು ವರ್ಷದಿಂದ ಅಧಿಕಾರಿಗಳೇ ದರ್ಬಾರು ನಡೆಸಿದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲದಂತಾಗಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT