ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಮುಖದತ್ತ ರಸ್ತೆ ಅಪಘಾತ ಸಾವು

2023ನೇ ಸಾಲಿನ ಜುಲೈನಿಂದ ಡಿಸೆಂಬರ್‌ ವರೆಗೆ ಅಪಘಾತಗಳಲ್ಲಿ ಭಾರಿ ಇಳಿಕೆ
Published 17 ಮಾರ್ಚ್ 2024, 4:59 IST
Last Updated 17 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಮರಣ ಪ್ರಮಾಣ ಕಡಿಮೆಯಾಗುತ್ತಿದ್ದು, ಜಿಲ್ಲಾ ಪೊಲೀಸ್‌ ಇಲಾಖೆ ಕೈಗೊಂಡ ಕ್ರಮಗಳಿಂದ ಈಗ ಅದರ ಉತ್ತಮ ಫಲಿತಾಂಶ ಹೊರಬರುತ್ತಿದೆ.

2022 ಹಾಗೂ 2023ನೇ ಸಾಲಿನ ರಸ್ತೆ ಅಪಘಾತಗಳಲ್ಲಿ ಮರಣ ಹೊಂದಿದವರ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ, 2023ನೇ ಸಾಲಿನ ಜನವರಿಯಿಂದ ಜೂನ್‌ ಹಾಗೂ ಜುಲೈನಿಂದ ಡಿಸೆಂಬರ್‌ ವರೆಗಿನ ಅಂಕಿ ಸಂಖ್ಯೆಗಳನ್ನು ತಾಳೆ ಮಾಡಿ ನೋಡಿದರೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕುಸಿಯುತ್ತಿರುವುದು ಗೊತ್ತಾಗುತ್ತದೆ.

2022ನೇ ಸಾಲಿನಲ್ಲಿ ರಸ್ತೆ ಅಪಘಾತಗಳಲ್ಲಿ ಒಟ್ಟು 334 ಜನ ಮರಣ ಹೊಂದಿದ್ದರು. 1,505 ಜನ ಗಾಯಗೊಂಡಿದ್ದರು. 2023ನೇ ಸಾಲಿನಲ್ಲಿ ಒಟ್ಟು 335 ಜನ ಸಾವನ್ನಪ್ಪಿದ್ದಾರೆ. 2022ನೇ ಸಾಲಿಗೆ ಹೋಲಿಸಿದರೆ ಒಂದು ಸಾವು ಹೆಚ್ಚಿಗೆ ಸಂಭವಿಸಿದೆ. ಇನ್ನು, 1,404 ಜನ ಗಾಯಗೊಂಡಿದ್ದು, ಗಾಯಾಳುಗಳ ಸಂಖ್ಯೆ ತಗ್ಗಿದೆ.

ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೇನೆಂದರೆ 2023ನೇ ಸಾಲಿನ ಜನವರಿಯಿಂದ ಜೂನ್‌ ತನಕ ಒಟ್ಟು 198 ಜನ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ನಂತರದ ಆರು ತಿಂಗಳಲ್ಲಿ (ಜುಲೈನಿಂದ ಡಿಸೆಂಬರ್‌ ವರೆಗೆ) 137 ಜನ ಸತ್ತಿದ್ದಾರೆ. ಮೊದಲ ಆರು ತಿಂಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಗೆ ಹೋಲಿಸಿದರೆ ನಂತರದ ಆರು ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮರಣ ಹೊಂದಿದವರ ಸಂಖ್ಯೆ ಇಳಿಮುಖವಾಗಿದೆ.


ಅಪಘಾತ ಇಳಿಮುಖಕ್ಕೆ ಕಾರಣವೇನು?:

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಅವರು ಕೈಗೊಂಡ ವಿಶೇಷ ಕ್ರಮಗಳಿಂದ ಅಪಘಾತಗಳ ಪ್ರಮಾಣದಲ್ಲಿ ಸತತವಾಗಿ ಇಳಿಮುಖ ಕಂಡು ಬರುತ್ತಿದೆ.

2023ನೇ ಸಾಲಿನ ಜೂನ್‌ ನಂತರದಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿಕೊಂಡು ಓಡಾಡಬೇಕು. ನಾಲ್ಕು ಚಕ್ರದ ವಾಹನ ಚಾಲಕರು ಸೀಟ್‌ ಬೆಲ್ಟ್‌ ಧರಿಸುವುದು ಕಡ್ಡಾಯಗೊಳಿಸಿದರು. ಪ್ರಮುಖ ವೃತ್ತಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ, ಕಟ್ಟುನಿಟ್ಟಿನ ಅನುಷ್ಠಾನಕ್ಕೆ ತಂದರು. ದಂಡದ ರೂಪದಲ್ಲಿ ಬೈಕ್‌ ಸವಾರರಿಗೆ ಹೆಲ್ಮೆಟ್‌ ಸ್ಥಳದಲ್ಲಿಯೇ ಖರೀದಿಸಲು ವ್ಯವಸ್ಥೆ ಮಾಡಿದರು.

18 ವರ್ಷದೊಳಗಿನವರು ವಾಹನ ಚಾಲನೆ ಮಾಡುವುದು ಅಪರಾಧ ಎಂದು ಜಾಗೃತಿ ಮೂಡಿಸಿದರು. ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ಪೋಷಕರ ಸಭೆ ಕರೆದು ತಿಳಿವಳಿಕೆ ಮೂಡಿಸಿದರು. ನಿಯಮ ಉಲ್ಲಂಘಿಸಿದರೆ ಪೋಷಕರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಸಂಘ ಸಂಸ್ಥೆಗಳು, ಶಾಲಾ–ಕಾಲೇಜಿನವರ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ಕಾರ್ಯಾಗಾರ, ಮ್ಯಾರಥಾನ್‌ ಮೂಲಕ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿದರು. ಅದರಿಂದಾಗಿ ಈಗ ಉತ್ತಮ ಫಲಿತಾಂಶ ಹೊರಬರುತ್ತಿದೆ.

ಕರಾವಳಿ ಭಾಗದವರಂತೆ ತಿಳಿವಳಿಕೆ ಬರಬೇಕು’

‘ಪೊಲೀಸರು ದಂಡ ಹಾಕುತ್ತಾರೆ ಎಂದು ಹೆದರಿಕೊಂಡು ಹೆಲ್ಮೆಟ್‌ ಹಾಗೂ ಸೀಟ್‌ ಬೆಲ್ಟ್‌ ಧರಿಸಿದರೆ ಪ್ರಯೋಜನವಿಲ್ಲ. ಹೆಲ್ಮೆಟ್‌ ಹಾಕಿಕೊಳ್ಳಲು ಸೀಟ್‌ ಬೆಲ್ಟ್‌ ಧರಿಸಲು ಏಕೆ ಹೇಳುತ್ತಿದ್ದೇವೆ ಎನ್ನುವುದನ್ನು ಮನದಟ್ಟು ಕೊಡಿಕೊಳ್ಳಬೇಕು. ಜನರು ಸುರಕ್ಷಿತವಾಗಿ ಮನೆ ತಲುಪಲಿ ಎನ್ನುವುದು ನಮ್ಮ ಉದ್ದೇಶ. ಈ ಕಾರಣಕ್ಕಾಗಿಯೇ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ಕೂಡ ಹಾಕಲಾಗುತ್ತಿದೆ. ಆದರೆ ದಂಡಕ್ಕಿಂತ ಜೀವ ಮುಖ್ಯ. ಅದನ್ನು ಜನ ಅರಿತುಕೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ. ‘ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ 2023ನೇ ಸಾಲಿನ ಜೂನ್‌ನಿಂದ ನಿರಂತರವಾಗಿ ಜಾಗೃತಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಪಕ್ಕದ ಕಲಬುರಗಿ ಜಿಲ್ಲೆಗೆ ಹೋಲಿಸಿದರೆ ಅಪಘಾತಗಳು ಬಹಳ ಕಡಿಮೆಯಾಗಿವೆ. ರಾಜ್ಯದ ಕರಾವಳಿ ಭಾಗದಲ್ಲಿರುವ ಜನರಿಗೆ ಹೆಲ್ಮೆಟ್‌ ಸೀಟ್‌ ಬೆಲ್ಟ್‌ ಧರಿಸುವುದರ ಬಗ್ಗೆ ಯಾರೂ ಹೇಳಿಕೊಡಬೇಕಿಲ್ಲ. ಅಷ್ಟರಮಟ್ಟಿಗೆ ಅವರಲ್ಲಿ ತಿಳಿವಳಿಕೆ ಇದೆ. ಅದು ಎಲ್ಲರಲ್ಲೂ ಬಂದರೆ ಉತ್ತಮ. ಇನ್ನಷ್ಟು ಅಪಘಾತಗಳ ಸಂಖ್ಯೆ ತಗ್ಗಬಹುದು. ಎಲ್ಲವೂ ಪೊಲೀಸರಿಂದಲೇ ಮಾಡಲು ಸಾಧ್ಯವಿಲ್ಲ. ಜನರ ಸಹಕಾರ ಸ್ವ ಅರಿವು ಬಹಳ ಮುಖ್ಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT