ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ಕಳೆ ಗುಂದಿದ ಶಿಕ್ಷಣ ಹಕ್ಕು ಕಾಯ್ದೆ: ಕೇವಲ13 ವಿದ್ಯಾರ್ಥಿಗಳ ಪ್ರವೇಶ

ಆರ್‌ಟಿಇ ಅಡಿ ಕೇವಲ 13 ವಿದ್ಯಾರ್ಥಿಗಳ ಪ್ರವೇಶ
Last Updated 15 ಮೇ 2022, 19:30 IST
ಅಕ್ಷರ ಗಾತ್ರ

ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಬಹುಭಾಷಿಕ ಬೀದರ್‌ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂದಿಗೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಿಂದ ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ವಾತಾವರಣವೇ ಇಲ್ಲ. ಅನೇಕ ಶಾಲೆಗಳಲ್ಲಿ ಮೂಲಸೌಕರ್ಯವೂ ಇಲ್ಲ. ಕಿರಿಯ ಪ್ರಾಥಮಿಕ ಶಾಲೆಯ ಕೆಲ ಮಕ್ಕಳಿಗೆ ಇವತ್ತಿಗೂ ಕನ್ನಡ ಓದಲು, ಬರೆಯಲು ಬರುತ್ತಿಲ್ಲ. ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದ ನಂತರ ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಆರ್‌ಟಿಇ ಅಡಿಯ 1,261 ಸೀಟುಗಳು ಪೈಕಿ 279 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ 13 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ.

ಆರಂಭದಲ್ಲಿ ಕಡಿಮೆ ಶುಲ್ಕ ಕೊಡಲಾಗಿದೆ ಎಂದು ಕೆಲ ಶಾಲೆಗಳು ಆರ್‌ಟಿಇ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂಡಿಸಿದವು. ಶೈಕ್ಷಣಿಕ ಮೇಲ್ವಿಚಾರಣೆಯನ್ನೂ ಸರಿಯಾಗಿ ನಡೆಸುತ್ತಿರಲಿಲ್ಲ. ಇದನ್ನು ಕಣ್ಣಾರೆ ಕಂಡ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಶಾಲೆಗಳಲ್ಲಿ ಪ್ರವೇಶ ಕೊಡಿಸಿದ್ದಾರೆ. ಸರ್ಕಾರಿ ನೌಕರರು ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಯೇ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿಲ್ಲ.

2019ರಲ್ಲಿ ಕೇಂದ್ರ ಸರ್ಕಾರ ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ಮಾಡಿದ್ದರಿಂದ 1 ಕಿ.ಮೀ. ವ್ಯಾಪ್ತಿಯ ಅಥವಾ ಆಯಾ ವಾರ್ಡ್, ಗ್ರಾಮದಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಪಾಲಕರ ವಿಳಾಸ ಶಾಲೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಇಲ್ಲದ ಕಾರಣ ಅನೇಕ ಮಕ್ಕಳಿಗೆ ಇದರ ಲಾಭ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

2010ರಲ್ಲಿ ಕೇಂದ್ರ ಸರ್ಕಾರ ಆರ್‌ಟಿಇ ಜಾರಿಗೊಳಿಸಿತ್ತು. ಆರಂಭದಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸರ್ಕಾರಿ ಶಾಲೆಗಳ ಶಿಕ್ಷಕರೇ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ನಿಯಮ ಬದಲು ಮಾಡಲಾಯಿತು. ಈಗ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ ಗೋರನಾಳಕರ್‌ ಹೇಳುತ್ತಾರೆ.

ಆರ್‌ಟಿಇ ಕಠಿಣ ನಿಯಮ: ಕನ್ನಡ ಶಾಲೆಗಳಿಗೆ ಕುತ್ತು

ಔರಾದ್: ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತಂದ ನಂತರ ಖಾಸಗಿ ಶಾಲೆ ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳ ಮೇಲೆ ಹೆಚ್ಚಿನ ಹೊಡೆತ ಬಿದ್ದಿದೆ. ಕಾಯ್ದೆ ಜಾರಿಗೆ ಬಂದ ನಂತರ ತಾಲ್ಲೂಕಿನಲ್ಲಿ ಒಂದೂ ಖಾಸಗಿ ಶಾಲೆ ಆರ್‌ಟಿಇ ವ್ಯಾಪ್ತಿಗೆ ಬಂದಿಲ್ಲ.

ಸರ್ಕಾರದ ಈ ನೀತಿಯಿಂದ ಕಳೆದ ಮೂರು ವರ್ಷಗಳಲ್ಲಿ ಐದು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿವೆ ಎಂದು ಖಾಸಗಿ ಅನುದಾನ ರಹಿತ ಶಾಲೆ ಆಡಳಿತ ಮಂಡಳಿ ಸಂಚಾಲಕ ಬಸವರಾಜ ಶೆಟಕಾರ್ ಹೇಳುತ್ತಾರೆ.
ತಾಲ್ಲೂಕಿನಲ್ಲಿ 43 ಶಾಲೆಗಳ ಒಟ್ಟು 1,987 ಮಕ್ಕಳು ಆರ್‌ಟಿಇ ವ್ಯಾಪ್ತಿಗೆ ಬರುತ್ತಾರೆ. ಕೆಲ ತಾಂತ್ರಿಕ ಕಾರಣದಿಂದ 2020-21ನೇ ಸಾಲಿನ ಆರ್‌ಟಿಇ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಬಾರದ ಹಣ ಆರ್‌ಟಿಇ ತೊಂದರೆ

ಭಾಲ್ಕಿ: ತಾಲ್ಲೂಕಿನ ವಿವಿಧ ಖಾಸಗಿ ಶಾಲೆಗಳಲ್ಲಿ 2017-18ರವರೆಗೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಉಚಿತ ಪ್ರವೇಶ ಪಡೆದ ವಿದ್ಯಾರ್ಥಿಗಳ 2021-22ನೇ ಸಾಲಿನ ಶಾಲಾ ಶುಲ್ಕ ಸರ್ಕಾರದಿಂದ ಬಾರದ ಕಾರಣ ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಶಿಕ್ಷಕರ ವೇತನ ಪಾವತಿ ಹಾಗೂ ಇತರ ಕಾರ್ಯಗಳಿಗೆ ತುಂಬಾ ತೊಂದರೆಯಾಗಿದೆ.

2018ರಿಂದ ಇಲ್ಲಿಯವರೆಗೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನಿಲ್ಲಿಸಲಾಗಿದೆ ಎಂದು ನೋಡಲ್ ಅಧಿಕಾರಿ ಸಹದೇವ ವಿವರಿಸುತ್ತಾರೆ.

ಸರ್ಕಾರ ಸಕಾಲಕ್ಕೆ ಆರ್‌ಟಿಇ ಹಣ ಪಾವತಿಸಿದರೆ ಶಾಲೆಯ ನಿರ್ವಹಣೆ ಚೆನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಹಿರಿಯ ಅಧಿಕಾರಿಗಳು ಈ ವಿಷಯದತ್ತ ಗಮನ ಹರಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಖಾಸಗಿ ಶಾಲೆಯೊಂದರ ಅಧ್ಯಕ್ಷ ಹೇಳಿದರು.

ಪ್ರಸಕ್ತ ವರ್ಷ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ

ಚಿಟಗುಪ್ಪ ತಾಲ್ಲೂಕಿನಲ್ಲಿ ಎಲ್ಲ ಕಡೆ ಸರ್ಕಾರಿ ಶಾಲೆಗಳು ಇವೆ. ಹೀಗಾಗಿ ಪ್ರಸಕ್ತ ವರ್ಷ ಒಬ್ಬ ವಿದ್ಯಾರ್ಥಿಯೂ ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆದುಕೊಂಡಿಲ್ಲ ಎನ್ನುತ್ತಾರೆ ಶಿಕ್ಷಣಾಧಿಕಾರಿ ಶಿವಗುಂಡಪ್ಪ.


ಕಳೆದ 2021-22 ನೇ ಸಾಲಿನಲ್ಲಿ ಬರಬೇಕಾದ ಆರ್.ಟಿ.ಇ ಶುಲ್ಕದ ಹಣ ತಾಲ್ಲೂಕಿನ ಪ್ರತಿಶತ 70 ರಷ್ಟು ಶಾಲೆಗಳಿಗೆ ಇನ್ನೂ ಬಂದಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮೂಲಕ ಬೆಂಗಳೂರಿನ ಆಯುಕ್ತರ ಕಚೇರಿಗೆ ಪತ್ರ ಕಳಿಸಲಾಗಿದೆ ಎಂದು ತಿಳಿಸುತ್ತಾರೆ.

ಹೊಸ ಮಕ್ಕಳ ಆರ್.ಟಿ.ಇ ಕೋಟಾ ನಿಲ್ಲಿಸಿ ಖಾಸಗಿ ಶಾಲೆಗಳಿಗೆ, ಬಡ ಪಾಲಕರಿಗೆ ಸರ್ಕಾರ ಅನ್ಯಾಯ ಮಾಡಿದೆ. ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಹಿಂದಿನ ಮಕ್ಕಳ ಶುಲ್ಕ ಪಾವತಿಸಲು ಹಿಂದೇಟು ಹಾಕುತ್ತಿರುವುದರಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಶಾಲೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖಾಸಗಿ ಶಾಲೆ ಆಡಳಿತ ಮಂಡಳಿ ಪದಾಧಿಕಾರಿ ರಜನೀಶ್ ತಿಳಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ ಬಡ ಮಕ್ಕಳಿಗೆ ಉಪಯುಕ್ತವಾಗಲಿದೆ ಎಂದು ಬಹುತೇಕ ಪಾಲಕರು ಖುಷಿಪಟ್ಟಿದ್ದರು. ಸರ್ಕಾರ ಶಾಲೆಗಳಿಗೆ ಹಣ ಪಾವತಿಸದ ಕಾರಣ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದಲೇ ಶುಲ್ಕ ವಸೂಲಿ ಮಾಡಿವೆ. ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದವರು ಖಾಸಗಿ ಶಾಲೆಗಳಿಂದ ವರ್ಗಾವಣೆ ಪ್ರಮಾಣಪತ್ರ ಪಡೆದು ಮತ್ತೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಕಮಲನಗರದ ಪೋಷಕ ಚಂದ್ರಕಾಂತ ವಿವರಿಸುತ್ತಾರೆ.

ಸಹಕಾರ: ಮನ್ಮಥ ಸ್ವಾಮಿ, ವೀರೇಶ ಮಠಪತಿ, ಗುಂಡು ಅತಿವಾಳ, ಬಸವರಾಜ ಪ್ರಭಾ, ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT