ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಪಾಳು ಬಿದ್ದ ಜಿಲ್ಲೆಯ ಉದ್ಯಾನಗಳು

Last Updated 18 ಜನವರಿ 2021, 2:16 IST
ಅಕ್ಷರ ಗಾತ್ರ

ಬೀದರ್‌: ಅನೇಕ ರಾಜಮನೆತನಗಳು ಆಳಿಹೋದ ಬೀದರ್‌ ಜಿಲ್ಲೆಯ ಪಟ್ಟಣಗಳಲ್ಲಿ ಇಂದಿಗೂ ಉದ್ಯಾನಗಳೇ ಇಲ್ಲ ಅಂದರೆ ಆಶ್ಚರ್ಯವಾಗುತ್ತದೆ. ಪುರಾತನ ನಗರಗಳಾದ ಬೀದರ್ ಹಾಗೂ ಬಸವಕಲ್ಯಾಣದಲ್ಲಿ ನೂರಾರು ಉದ್ಯಾನಗಳಿದ್ದರೂ ಕೆಲವು ಕಳೆಗುಂದಿವೆ. ಕೆಲವು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ.

2016ರಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೀದರ್ ನಗರದಲ್ಲಿ 34 ಉದ್ಯಾನಗಳನ್ನು ನಿರ್ಮಿಸಲಾಗಿದೆ. ಇವೆಲ್ಲ ಈಗ ಮೂಲ ಸ್ವರೂಪ ಕಳೆದುಕೊಂಡಿವೆ. ಬರೀದ್‌ಶಾಹಿ ಉದ್ಯಾನ ಮಾತ್ರ ಸ್ವಲ್ಪ ಮಟ್ಟಿಗೆ ಸುಸ್ಥಿತಿಯಲ್ಲಿದೆ. ನಗರದ ಎಲ್‌ಐಸಿ ಕಚೇರಿ ಬಳಿಯ ಉದ್ಯಾನ ಇನ್ನೂ ನಿರ್ಮಾಣದ ಹಂತದಲ್ಲಿಯೇ ಇದೆ.

ಜ್ಯೋತಿ ಕಾಲೊನಿ, ಬ್ಯಾಂಕ್‌ ಕಾಲೊನಿ, ಕೆಇಬಿ ಕಾಲೊನಿ ಉದ್ಯಾನದಲ್ಲಿ ಎದೆಮಟ್ಟದಲ್ಲಿ ಹುಲ್ಲು ಬೆಳೆದಿದೆ. ಗುರುನಗರ, ಸಿದ್ಧರಾಮೇಶ್ವರ ಕಾಲೊನಿ ಹಾಗೂ ವಿದ್ಯಾನಗರದ ಉದ್ಯಾನಗಳ ಸ್ಥಿತಿಯೂ ಭಿನ್ನವಾಗಿಲ್ಲ.

ಆದರ್ಶ ಕಾಲೊನಿ, ಬಸವೇಶ್ವರನಗರ, ಗಣೇಶ ನಗರ, ನೌಬಾದ್‌ನ ಲುಂಬಿನಿ ನಗರ, ಪ್ರತಾಪ್‌ ನಗರ ಹೌಸಿಂಗ್‌ ಬೋರ್ಡ್‌, ಬುಡಾ ಲೇಔಟ್, ಮೈಲೂರ್‌ ಕೆಇಬಿ ಕಾಲೊನಿ, ಚಿದ್ರಿಯ ಸಿದ್ದರಾಮಯ್ಯ ಲೇಔಟ್, ಬಸವನಗರ, ಅಕ್ಕಮಹಾದೇವಿ ಕಾಲೊನಿ, ಗುಂಪಾದ ಕೈಲಾಸನಗರ, ಹನುಮಾನ ನಗರ, ಬಲಬೀರ್‌ ಸಿಂಗ್‌ ಲೇಔಟ್, ಓಲ್ಡ್‌ ಸಿಟಿಯ ಗುಲ್ಜಾರ್‌ ಥೇಟರ್ ಬಳಿಯ ಉದ್ಯಾನಗಳು ಒಣಗಿ ಅಂದ ಕಳೆದುಕೊಂಡಿವೆ.

ನೌಬಾದ್‌ ಕೈಗಾರಿಕೆ ಅಭಿವೃದ್ಧಿ ನಿಗಮದ ಪ್ರದೇಶದಲ್ಲಿ, ಉದ್ಯಾನ, ಸಹ್ಯಾದ್ರಿ ನಗರ, ಮೃತ್ಯುಂಜಯ ನಗರ, ನಂದಿನಿ ಕಾಲೊನಿ, ಕೃಷಿ ಕಾಲೊನಿ, ಅಲ್ಲಮಪ್ರಭು ನಗರ, ಶಾಸ್ತ್ರಿ ನಗರದಲ್ಲೂ ಉದ್ಯಾನ ಇವೆ ಎನ್ನವುದು ಸಹ ಜನ ಮರೆತು ಹೋಗಿದ್ದಾರೆ. ಕಾರಣ ಅಲ್ಲಿ ಗಿಡಗಳು ಬೆಳೆದು ನಿಂತಿದೆ.

‘ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಗರದಲ್ಲಿ ಉದ್ಯಾನ ನಿರ್ಮಿಸಿದೆ. ಆದರೆ, ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ನಿರ್ವಹಣೆಗೂ ಸಿಬ್ಬಂದಿ ನೇಮಕ ಮಾಡಬೇಕು ಅಥವಾ ಖಾಸಗಿಯವರಿಗಾದರೂ ವಹಿಸಿಕೊಡಬೇಕು. ಕೇವಲ ಉದ್ಯಾನ ನಿರ್ಮಿಸಿ ಬಿಟ್ಟರೆ ಏನು ಪ್ರಯೋಜನ’ ಎನ್ನುತ್ತಾರೆ ನಗರಸಭೆ ಮಾಜಿ ಸದಸ್ಯ ನಬಿ ಖರೇಶಿ ಹೇಳುತ್ತಾರೆ.

ಬಸವಕಲ್ಯಾಣ: ತೆರೆಯದ ಬಸವ ವನ
ಬಸವಕಲ್ಯಾಣದ ಪ್ರಮುಖ ಉದ್ಯಾನವಾದ ಬಸವ ವನದ ಬಾಗಿಲು ಕೊರೊನಾ ಕಾರಣ ಮುಚ್ಚಿದ್ದು ಅನೇಕ ತಿಂಗಳುಗಳಿಂದ ತೆರೆದಿಲ್ಲ. ಹೀಗಾಗಿ ವಾಯು ವಿಹಾರಕ್ಕೆ ಜಾಗ ಇಲ್ಲದಂತಾಗಿದೆ.

ನಗರಸಭೆಯ 20ಕ್ಕೂ ಹೆಚ್ಚಿನ ಉದ್ಯಾನಗಳಿದ್ದರೂ ಕೆಲವೊಂದನ್ನು ಮಾತ್ರ ಅಭಿವೃದ್ಧಿ ಪಡಿಸಲಾಗಿದೆ. ಜೈಶಂಕರ ಓಣಿಯ ಶಾಂತಿನಿಕೇತನ ಶಾಲೆ ಪಕ್ಕದ ಉದ್ಯಾನ, ಸೀತಾ ಕಾಲೊನಿ ಉದ್ಯಾನ, ವಿದ್ಯಾಶ್ರೀ ಕಾಲೊನಿ ಉದ್ಯಾನಗಳು ಸಂರಕ್ಷಣೆ ಇಲ್ಲದೆ ಹಾಳಾಗಿವೆ.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಅಲ್ಲಮಪ್ರಭು ದೇವರ ಗದ್ದುಗೆಮಠ, ಮಾಚಿದೇವರ ಹೊಂಡ, ನುಲಿ ಚಂದಯ್ಯನ ಗವಿ, ಅಕ್ಕನಾಗಮ್ಮನ ಗವಿ ಮುಂತಾದೆಡೆ ಉದ್ಯಾನ ನಿರ್ಮಿಸಿದ್ದರೂ ಅವು ನಗರದ ಹೊರ ಭಾಗದಲ್ಲಿದ್ದು ಮಹಿಳೆಯರು, ಮಕ್ಕಳಿಗೆ ಹೋಗಲು ದೂರವಾಗುತ್ತಿದೆ. ನಗರದಲ್ಲಿನ ಅನೇಕ ಉದ್ಯಾನಗಳಲ್ಲಿ ಅತಿಕ್ರಮಣ ಕೂಡ ಆಗಿದೆ. ಆದ್ದರಿಂದ ಇದು ಉದ್ಯಾನದ ಸ್ಥಳ ಎಂದು ಗುರುತಿಸುವುದು ಕೂಡ ಕಷ್ಟವಾಗುತ್ತಿದೆ. ನಗರಸಭೆಯವರು ಉದ್ಯಾನಗಳಲ್ಲಿನ ಅತಿಕ್ರಮಣ ತೆರವುಗೊಳಿಸಿ ಗಿಡ ಮರಗಳನ್ನು, ಹೂ ಗಿಡಗಳನ್ನು ಬೆಳೆಸಬೇಕು ಎನ್ನುವುದುಸ್ಥಳೀಯರಾದ ಶಶಿಕುಮಾರ ಹಳ್ಳೆ ಅವರ ಆಗ್ರಹ.

ಪಾಳು ಬಿದ್ದ ಉದ್ಯಾನಗಳು
ಔರಾದ್ ಪಟ್ಟಣದಲ್ಲಿ ಒಟ್ಟು 25 ಉದ್ಯಾನಗಳಿವೆ. ಸಾರ್ವಜನಿಕರಿಗೆ ವಾಯು ವಿಹಾರ, ಮಕ್ಕಳಿಗೆ ಆಟ ಆಡಲು ಅನುಕೂಲವಾಗಬೇಕಾದ ಈ ಉದ್ಯಾನಗಳಿಂದ ಅನಾನುಕೂಲವೇ ಜಾಸ್ತಿಯಾಗಿದೆ. ನಿರ್ವಹಣೆ ಇಲ್ಲದೆ ಹಾಳು ಬಿದ್ದಿವೆ. ಆಟದ ಸಾಮಗ್ರಿ ಇರಬೇಕಾದ ಉದ್ಯಾನಗಳಲ್ಲಿ ಹುಲ್ಲು ಗಿಡಗಂಟಿ ಬೆಳೆದಿವೆ. ಇದರಿಂದ ಅಕ್ಕ ಪಕ್ಕದ ಮನೆಗಳಿಗೆ ಹಾವು ಚೇಳಿನ ಭೀತಿ ಎದುರಾಗಿದೆ.

ಉದ್ಯಾನ ನಮ್ಮ ಬಡಾವಣೆ ಜನರಿಗೆ ಕಂಟಕವಾಗಿ ಪರಿಣಮಿಸಿದೆ. ಒಳಗೆ ಚರಂಡಿ ನೀರು ನಿಂತು ಗಬ್ಬು ನಾರುತ್ತಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಉದ್ಯಾನ ಅಭಿವೃದ್ಧಿ ಪಡಿದುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಅಂಬಿಕಾ ಕಲೊನಿ ನಿವಾಸಿಗಳು ಗೋಳು ತೋಡಿಕೊಳ್ಳುತ್ತಾರೆ.

‘ಪಟ್ಟಣದಲ್ಲಿರುವ ಎಲ್ಲ 25 ಉದ್ಯಾನಗಳು ಹಾಳಾಗಿವೆ. ನಾನು ಈಚೆಗಷ್ಟೇ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮನವಿ ಮಾಡಲು ನಿರ್ಧರಿಸಿದ್ದೇನೆ’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ್ ಹೇಳುತ್ತಾರೆ.
ಪಟ್ಟಣದಲ್ಲಿ ಅಚ್ಚುಕಟ್ಟಾದ ಉದ್ಯಾನ ನಿರ್ಮಿಸಿ

ಜನರ ಆಯಾಸವನ್ನು ಕಳೆಯಲು, ಹಸಿರು ವಾತಾವರಣ ಸೃಷ್ಟಿಸಲು ಪಟ್ಟಣದಲ್ಲಿ ಉತ್ತಮ ಉದ್ಯಾನ ನಿರ್ಮಿಸಬೇಕು ಎಂದು ಭಾಲ್ಕಿ ಪಟ್ಟಣದ ನಿವಾಸಿಗಳು ಮನವಿ ಮಾಡುತ್ತಾರೆ.

ಭಾಲ್ಕಿಯ ಚನ್ನಬಸವಾಶ್ರಮ ಹಿಂಭಾಗದಲ್ಲಿ 2017ರಲ್ಲಿ ಮಕ್ಕಳ ಉದ್ಯಾನ ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದಿರುವುದರಿಂದ ಹಸಿರು ಹುಲ್ಲಿನ ಹೊದಿಕೆ ಮಾಯವಾಗಿ ಬರಡು ಭೂಮಿಯಂತೆ ಭಾಸವಾಗುತ್ತಿದೆ. ತೆಂಗಿನ ಗಿಡಗಳು ಬಾಡುತ್ತಿವೆ.

ಉದ್ಯಾನದಲ್ಲಿ ಆಟಿಕೆ ಸಾಮಗ್ರಿಗಳನ್ನು ಅಳವಡಿಸಿದರೂ ಮಾಸಿಹೋಗಿವೆ. ಉದ್ಯಾನದಲ್ಲಿ ವಿದ್ಯುತ್‌ ದೀ‍ಪಗಳು ಇಲ್ಲ. ನಸುಕಿನ ಜಾವ ಹಾಗೂ ಸಂಜೆ ವಾಯು ವಿವಾರ ಮಾಡುವವರಿಗೆ ತೊಂದರೆಯಾಗುತ್ತಿದೆ ಎಂದು ಪಟ್ಟಣದ ನಿವಾಸಿಈಶ್ವರ ರುಮ್ಮಾ ಬೇಸರ ವ್ಯಕ್ತಪಡಿಸುತ್ತಾರೆ.

ಈಚೆಗೆ ವಾಯು ವಿಹಾರಕ್ಕೆ ಬಂದಿದ್ದ ಶಾಸಕ ಈಶ್ವರ ಖಂಡ್ರೆ ಅವರಿಗೆ ಸಾರ್ವಜನಿಕರು ಉದ್ಯಾನದ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಉದ್ಯಾನ ನಿರ್ವಹಣೆಗೆ ಸೂಚಿಸುವ ಭರವಸೆ ನೀಡಿದ್ದಾರೆ. ಆದರೆ, ನಿರ್ವಹಣೆ ಕಾರ್ಯ ಆರಂಭವಾಗಿಲ್ಲ.

ಉದ್ಯಾನ ಇಲ್ಲದ ತಾಲ್ಲೂಕು ಕಮಲನಗರ
ಹೊಸ ತಾಲ್ಲೂಕು ಕೇಂದ್ರ ಕಮಲನಗರದಲ್ಲಿ ಒಂದೂ ಉದ್ಯಾನ ಇಲ್ಲ. ಉದ್ಯಾನ ನಿರ್ಮಿಸಬೇಕೆಂದರೂ ಜಾಗ ಇಲ್ಲ. ಹಿರಿಯರು ವಾಯುವಿವಾಹರಕ್ಕೆ ತೆರಳಲು ಹಾಗೂ ಮಕ್ಕಳು ಸಂಜೆ ಹೊತ್ತಿನಲ್ಲಿ ಆಟವಾಡಲು ಉದ್ಯಾನವೇ ಇಲ್ಲವಾಗಿದೆ.

ಕಮಲನಗರ ಇನ್ನೂ ಗ್ರಾಮ ಪಂಚಾಯಿತಿಯೇ ಇದೆ. ನಗರದಲ್ಲಿ ಒಂದಾದರೂ ಉದ್ಯಾನ ನಿರ್ಮಿಸಬೇಕು ಎಂದು ಪಂಚಾಯಿತಿಯವರು ಜಾಗಕ್ಕೆ ಶೋಧ ನಡೆಸಿದ್ದಾರೆ. ಖಾಸಗಿಯವರು ಜಾಗ ಕೊಡಲು ಸಿದ್ಧರಿಲ್ಲ. ಹೊಸ ಜಾಗ ಖರೀದಿಸಿಲು ಪಂಚಾಯಿತಿ ಬಳಿಹಣ ಇಲ್ಲ.

‘ನರೇಗಾದಲ್ಲಿ ಉದ್ಯಾನ ನಿರ್ಮಾಣಕ್ಕೆ ಅವಕಾಶ ಇದೆ. ಆದರೆ, ಜಾಗ ಇಲ್ಲ. ಡಾ.ಚನ್ನಬಸವ ಪಟ್ಟದೇವರು ಕೆರೆಯ ಬಳಿ ಉದ್ಯಾನ ನಿರ್ಮಿಸಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ. ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನೋದಕುಮಾರ್ ಕುಲಕರ್ಣಿ ಹೇಳುತ್ತಾರೆ.

ಉದ್ಯಾನಗಳಿಲ್ಲದ ಪಟ್ಟಣ ಚಿಟಗುಪ್ಪ
ಚಿಟಗುಪ್ಪ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದರೂ ಒಂದೂ ಸಾರ್ವಜನಿಕ ಉದ್ಯಾನ ಇಲ್ಲ. ಇಲ್ಲಿಯ ಜನ ಹಾಗೂ ಉದ್ಯಾನ ನೋಡಲು ಬೇರೆ ಊರಿಗೆ ಹೋಗುವಂತಹಸ್ಥಿತಿ ಇದೆ.

ಕೆಲ ವರ್ಷಗಳ ಹಿಂದೆ ಪುರಸಭೆ ಆವರಣದಲ್ಲಿ ಪುಟ್ಟದೊಂದು ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಈಗ ಅಲ್ಲಿ ತಹಶೀಲ್ದಾರ್‌ ಕಚೇರಿ ಕಟ್ಟಡ ನಿರ್ಮಿಸಲು ಸಿದ್ಧತೆಗಳು ನಡೆದಿವೆ. ಹೀಗಾಗಿ ಉದ್ಯಾನದ ಜಾಗಕ್ಕೂ ಕುತ್ತು ಬಂದಿದೆ.

ಪಟ್ಟಣದಲ್ಲಿ ಒಂದಾದರೂ ಉದ್ಯಾನ ನಿರ್ಮಿಸಬೇಕು ಎನ್ನುವುದು ಪಟ್ಟಣದ ಜನತೆಯ ಬೇಡಿಕೆಯಾಗಿದೆ. ಹುಮನಾಬಾದ್ ಪಟ್ಟಣವಾದರೂ ಅಲ್ಲಿಯೂ ಒಂದೆರಡು ಮಾತ್ರ ಉದ್ಯಾನಗಳು ಇವೆ. ನಿರ್ವಹಣೆಯ ಕೊರತೆಯಿಂದ ಹಾಳು ಬಿದ್ದಿವೆ.

ಪೂರಕ ಮಾಹಿತಿ: ಮಾಣಿಕ ಆರ್‌.ಭುರೆ, ಮನ್ಮಥಪ್ಪ ಸ್ವಾಮಿ, ಬಸವರಾಜ ಪ್ರಭಾ, ಮನೋಜಕುಮಾರ ಹಿರೇಮಠ, ವೀರೇಶ ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT