ಶನಿವಾರ, ನವೆಂಬರ್ 16, 2019
21 °C
ಜಿಲ್ಲಾಮಟ್ಟದ ಜ್ಞಾನ ವಿಜ್ಞಾನ ಮೇಳ: ಡಾ. ಅಶೋಕ ಜೀವಣಗೆ ಸಲಹೆ

ಸಂಶೋಧನೆ ಮನೋಭಾವ ಬೆಳೆಸಿಕೊಳ್ಳಿ

Published:
Updated:
Prajavani

ಬೀದರ್: ‘ಜನೋಪಯೋಗಿ ಸಂಶೋಧನೆ ಕೈಗೊಳ್ಳಬೇಕಾದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಕಲಬುರ್ಗಿಯ ನಿವೃತ್ತ ಪ್ರಾಚಾರ್ಯ ಡಾ.ಅಶೋಕ ಜೀವಣಗೆ ಹೇಳಿದರು.

ನಗರದ ಮಹೇಶ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭಾರತಿ ಕರ್ನಾಟಕದ ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಜ್ಞಾನ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಿರಂತರ ಪರಿಶ್ರಮ ವಹಿಸಿದರೆ ಏನು ಬೇಕಾದರೂ ಅವಿಷ್ಕಾರ ಮಾಡಬಹುದು. ಚಂದ್ರಯಾನ-2 ಉಡಾವಣೆ ಮಾಡಿದ ಇಸ್ರೊ ವಿಜ್ಞಾನಿಗಳ ಸಾಧನೆ ಪ್ರಶಂಸನೀಯ’ ಎಂದರು.

‘ವಿಜ್ಞಾನ ಎಂದರೆ ನಿಸರ್ಗದ ತಿಳಿವಳಿಕೆ ಎಂದರ್ಥ. ವಿಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಬದುಕು ಸುಂದರವಾಗುತ್ತದೆ’ ಎಂದು ತಿಳಿಸಿದರು.

‘ದೇಶಕ್ಕೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಹಂಬಲ ಪ್ರತಿಯೊಬ್ಬರಲ್ಲಿ ಇರಬೇಕು. ಪರಿಸರ ಹಾಗೂ ಸಾಮಾಜಿಕ ಕಾಳಜಿಯನ್ನು ಹೊಂದಬೇಕು’ ಎಂದು ಹೇಳಿದರು.

‘ಪ್ಲಾಸ್ಟಿಕ್ ಬಳಕೆಯು ಪರಿಸರಕ್ಕೆ ಮಾರಕವಾಗಿದೆ. ಅತಿಯಾದ ಮೊಬೈಲ್ ಬಳಕೆ ಕೂಡ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ’ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಸಾಗರ ಮಾಶೆಟ್ಟೆ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಜ್ಞಾನವೂ ಅಗತ್ಯ. ಓಂಕಾರ ಸ್ತೋತ್ರ ಹಾಗೂ ಗಾಯತ್ರಿ ಮಂತ್ರ ನಿತ್ಯ ಪಠಿಸುವುದರಿಂದ ಆತ್ಮಶಕ್ತಿ ಜಾಗೃತವಾಗುತ್ತದೆ. ಮಾನಸಿಕ ವಿಕಾಸವೂ ಆಗುತ್ತದೆ’ ಎಂದು ಹೇಳಿದರು.

ವಿದ್ಯಾಭಾರತಿ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ ಮಾತನಾಡಿ, ‘ಸ್ಪರ್ಧಾ ಮನೋಭಾವದಿಂದ ಸಂಶೋಧನಾ ಸಾಮರ್ಥ್ಯ ವೃದ್ಧಿಸುತ್ತದೆ’ ಎಂದು ಹೇಳಿದರು.

‘ಜ್ಞಾನ ಹಾಗೂ ಸಂಸ್ಕೃತಿಯಿಂದ ವಿಜ್ಞಾನದ ಬೆಳವಣಿಗೆ ಸಾಧ್ಯವಿದೆ’ ಎಂದು ತಿಳಿಸಿದರು.

ವಿದ್ಯಾಭಾರತಿ ಕರ್ನಾಟಕದ ಜಿಲ್ಲಾ ಘಟಕದ ಕಾರ್ಯದರ್ಶಿ ಧನರಾಜ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇವಣಸಿದ್ದಪ್ಪ ಜಲಾದೆ, ಪ್ರೊ. ವಿ.ಬಿ. ಚಂದ್ರಶೇಖರ ಉಪಸ್ಥಿತರಿದ್ದರು.

ಮಂಜುನಾಥ ಬೆಳಕೇರಿ ಸ್ವಾಗತಿಸಿದರು. ವಿದ್ಯಾಭಾರತಿ ಸಂಚಾಲಿತ ಶಾಲೆಗಳ ಮಕ್ಕಳಿಗೆ ವೇದ ಗಣಿತ, ವಿಜ್ಞಾನ, ಪತ್ರಲೇಖನ ಸ್ಪರ್ಧೆ ನಡೆಯಿತು. ವಸ್ತು ಪ್ರದರ್ಶನ ಕೂಡ ಜರುಗಿತು.

ಪ್ರತಿಕ್ರಿಯಿಸಿ (+)